ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ 415ನೇ ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ ಟಿ.ಎಸ್.ನಾಗಾಭರಣ ತಾಯಿ ಚಾಮುಂಡೇಶ್ವರಿ ದೇವಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ದಸರಾ ಕಾರ್ಯಕ್ರಮಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ದೊರಕಿತು. ನಾಡದೇವತೆ ಚಾಮುಂಡೇಶ್ವರಿ ಹೊತ್ತ ಅಂಬಾರಿಗೆ ಪೊಲೀಸ್ ಬ್ಯಾಂಡ್ ವತಿಯಿಂದ ವಿಶೇಷ ಗೌರವ ಸಲ್ಲಿಸಲಾಯಿತು.
ಕಣ್ಮನ ಸೆಳೆದ ಮೆರವಣಿಗೆ: ಶ್ರೀರಂಗಪಟ್ಟಣ ದಸರಾ ಮೆರವಣಿಗೆಯಲ್ಲಿ ಪೂಜಾ ಕುಣಿತ, ತಮಟೆ, ನಗಾರಿ, ಪಟ್ಟಕುಣಿತ, ಹುಲಿವೇಷ, ವೀರಗಾಸೆ, ವೀರ ಭದ್ರಕುಣಿತ, ಕಾಳಿ ಕುಣಿತ, ಕಂಸಾಳೆ, ವೀರ ಮಕ್ಕಳ ಕುಣಿತ, ಓನಕೆ ಕುಣಿತ, ಕೋಲಾಟ, ಕರಗಿದ ಕೋಲಾಟ, ಗೊಂಬೆ ಕುಣಿತ, ಡೊಳ್ಳು ಕುಣಿತ, ಬೆಂಕಿ ಭರಾಟೆ, ದೊಣ್ಣೆ ವರಸೆ, ಸೋಮನ ಕುಣಿತ, ಬೇಡರ ವೇಷ, ಹಾಲಕ್ಕಿ ಸುಗ್ಗಿ ಕುಣಿತ, ಗಾರುಡಿಗೊಂಬೆ, ಚಿಲಿಪಿಲಿಗೋಬೆ, ನಾಸಿಕ್ ಡೊಲಾಟಗಳು ನೋಡುಗರ ಗಮನ ಸೆಳೆದವು.
ಸ್ತಬ್ಧ ಚಿತ್ರಗಳು: ತೋಟಗಾರಿಕೆ ಇಲಾಖೆಯ ಸ್ತಬ್ಧ ಚಿತ್ರಗಳು, ಕೃಷಿ ಇಲಾಖೆಯ ಸ್ತಬ್ದಚಿತ್ರ ಭಾರತೀಯ ಬೌದ್ಧ ಮಹಾಸಭಾ, ಕೃಷಿ ಇಲಾಖೆಯ ಸ್ತಬ್ಧಚಿತ್ರ, ಶಿಕ್ಷಣ ಇಲಾಖೆಯ ಸ್ತಬ್ಧ ಚಿತ್ರ ರೇಷ್ಮೆ ಇಲಾಖೆಯ ಸ್ತಬ್ಧ ಚಿತ್ರ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಗಳ ಸ್ತಬ್ಧ ಚಿತ್ರಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಕ್ಕಳ ಮಾರಾಟ ನಿಷೇಧ ಮತ್ತು ಅಪರಾಧ, ಅರಣ್ಯ ಇಲಾಖೆಯ ಸ್ತಬ್ಧ ಚಿತ್ರಗಳು ನೆರೆದಿದ್ದ ಸಾರ್ವಜನಿಕರ ಚಿತ್ತವನ್ನು ತನ್ನತ್ತ ಸೆಳೆದವು.
ಶ್ರೀರಂಗಪಟ್ಟಣ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ, ಶಾಸಕ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಶಾಸಕ ರವಿಕುಮಾರ್, ಮಾಜಿ ಶಾಸಕಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಜಿ.ಪಂ. ಸಿಇಓ ಅಧಿಕಾರಿ ಕೆ.ಆರ್.ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ಶ್ರೀನಿವಾಸ್, ಶ್ರೀರಂಗಪಟ್ಟಣ ತಹಶೀಲ್ದಾರ್ ಚೇತನ ಯಾದವ್ ಉಪಸ್ಥಿತರಿದ್ದರು.


























