ಮದ್ದೂರು ಗಲಭೆ ಅಪ್‌ಡೇಟ್‌: ಪಟ್ಟಣದಲ್ಲಿ ಬಿಜೆಪಿ ನಾಯಕರ ಮೊಕ್ಕಾಂ

0
37

ಮದ್ದೂರು ಪಟ್ಟಣದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ಗಲಭೆ ನಡೆದಿತ್ತು. ಮಂಡ್ಯ ಜಿಲ್ಲೆಯ ಮದ್ದೂರಿಗೆ ಬುಧವಾರ ಬಿಜೆಪಿ ನಾಯಕರ ನಿಯೋಗ ಭೇಟಿ ನೀಡಿದೆ. ಹಿಂದೂಪರ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿತ್ತು. ಮದ್ದೂರು ಈಗ ತಣ್ಣಗಾಗಿದೆ. ಇಂದು ಬಿಜೆಪಿಯ ಹಲವು ನಾಯಕರು ಮದ್ದೂರಿಗೆ ಭೇಟಿ ನೀಡಿ, ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಘಟನಾ ಸ್ಥಳಕ್ಕೆ ರಾಜ್ಯ ನಾಯಕರ ಭೇಟಿ; ಗಲಭೆ ಸಂಭವಿಸಿದ ಮದ್ದೂರಿನ ಘಟನಾ ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಸಂಸದ ಯದುವೀರ್ ಒಡೆಯರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಿತಮ್ ಗೌಡ ಸೇರಿದಂತೆ ಹಲವು ನಾಯಕರು ಭೇಟಿ ನೀಡಿದ್ದರು.

ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಮದ್ದೂರಿನ ಐಬಿಯಲ್ಲಿ ರಾಜ್ಯ ಬಿಜೆಪಿ ನಾಯಕರು ಕಾರ್ಯಕರ್ತ ಹಾಗೂ ಹಿಂದೂ ಸಂಘಟಣೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ಗಲಭೆ ಕುರಿತು ಪ್ರದೇಶಗಳ ವಾಸ್ತವಾಂಶವನ್ನು ತಿಳಿದುಕೊಂಡರು.

ಸತ್ಯ ಶೋಧನಾ ಸಮಿತಿ ರಚನೆ: ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಕುರಿತಾಗಿ ಬಿಜೆಪಿ ಹಲವು ನಾಯಕರನ್ನು ಒಳಗೊಂಡ ಸತ್ಯ ಶೋಧನಾ ಸಮಿತಿಯನ್ನು ರಚನೆ ಮಾಡಿದೆ. ಈ ತಂಡದಲ್ಲಿ ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ, ವೆಂಕಟೇಶ್‌ ದೊಡ್ಡೇರಿ, ವಿಜಯ್‌ ಪ್ರಸಾದ್‌, ಸ್ವಾಮಿ ಗೌಡ ಮುಂತಾದವರಿದ್ದಾರೆ.

ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಮೇಲೆ ನಡೆದ ಕಲ್ಲುತೂರಾಟದ ಘಟನೆಗಳು, ಗಾಯಗೊಂಡವರು, ಘಟನೆ ಹಿಂದಿನ ಶಕ್ತಿಗಳು ಹಾಗೂ ಘಟನೆಗೆ ಕಾರಣರಾದ ದುಷ್ಕರ್ಮಿಗಳ ಹಿನ್ನೆಲೆಯನ್ನು ಅರಿಯುವ ಕುರಿತು ಪಕ್ಷದ ಸತ್ಯಶೋಧನಾ ಸಮಿತಿ ರಚಿಸಲಾಗಿದ್ದು ಘಟನೆಯ ವಾಸ್ತವಾಂಶಗಳನ್ನು ಸಮಿತಿಯು ಸಂಗ್ರಹಿಸಲಿದೆ. ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಘಟನೆಯ ಕುರಿತು ಮಾತನಾಡಿದ ಬಿ.ವೈ.ವಿಜಯೇಂದ್ರ, “ಮದ್ದೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಹಿಂದೂಗಳು ಆತಂಕದಲ್ಲಿದ್ದಾರೆ. ರಾಜ್ಯ ಸರ್ಕಾರದ ಧೋರಣೆ, ನಡೆದಿರುವ ಘಟನೆ, ಹೆಣ್ಮಕ್ಕಳ ಮೇಲಿನ ಲಾಠಿಚಾರ್ಜ್‌ನಿಂದಾಗಿ ಆತಂಕದಲ್ಲಿದ್ದಾರೆ. ಹಿಂದೂ ಸಂಘಟನೆ ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಆಗಬೇಕಿದೆ. ಯಾರು ಕಲ್ಲು ಎಸೆದಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ನಾಮಕಾವಸ್ಥೆಯಾಗಿ ಎಫ್‌ಐಆರ್‌ ಮಾಡಿದ್ದಾರೆ. 1 ತಿಂಗಳು ಆದ್ಮೇಲೆ ಬಿಡುವ ಕೆಲಸವನ್ನು ಇದೇ ಸರ್ಕಾರ ಮಾಡುತ್ತದೆ” ಎಂದು ತಿಳಿಸಿದ್ದಾರೆ.

Previous articleಕಲಬುರಗಿ: ಮುಂಗಾರು ಹಂಗಾಮು ಬೆಳೆ ವಿಮೆ ಪರಿಹಾರ ಬಿಡುಗಡೆ
Next articleವಾಣಿಜ್ಯ ವಿಶೇಷ: ಆರ್ಥಿಕ ಅಭಿವೃದ್ಧಿ – ಭಾರತ ಈಗ ಆರ್ಥಿಕ ದೈತ್ಯ

LEAVE A REPLY

Please enter your comment!
Please enter your name here