ಹಾವೇರಿ ಜಿಲ್ಲೆಗೆ ಬಂಪರ್ ಕೊಡುಗೆ ಕೊಟ್ಟ ಕರ್ನಾಟಕ ಸರ್ಕಾರ

0
63

ಹಾವೇರಿ: ಕರ್ನಾಟಕ ಸರ್ಕಾರ ಹಾವೇರಿ ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದೆ. ಜಿಲ್ಲೆಯ ಪ್ರಮುಖ ಯೋಜನೆಗೆ ಅನುಮೋದನೆ ನೀಡಲಾಗಿದೆ. ಜಲಸಂಪನ್ಮೂಲ ಇಲಾಖೆಯ ಈ ಯೋಜನೆಯ ವೆಚ್ಚ ರೂ. 52.20 ಕೋಟಿ ರೂ.ಗಳು. ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಶುಭಾ.ಕೆ ವಿಶೇಷ ಕರ್ತವ್ಯಾಧಿಕಾರಿ (ತಾಂತ್ರಿಕ-1) ಜಲಸಂಪನ್ಮೂಲ ಇಲಾಖೆ ಆದೇಶವನ್ನು ಹೊರಡಿಸಿದ್ದಾರೆ, ಯೋಜನೆ ವಿವರ ನೀಡಿದ್ದಾರೆ.

ಆದೇಶ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕು ಮದಗ-ಮಾಸೂರು ಕೆರೆಯ ಎಡದಂಡೆ ಹಾಗೂ ಬಲದಂಡೆ ಮುಖ್ಯ ನಾಲೆಗಳ ಆಧುನೀಕರಣ ಕಾಮಗಾರಿಯನ್ನು ರೂ.52.20 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು ಇವರ ಪತ್ರ ಮದಗ-ಮಾಸೂರು/ ಆಧುನೀಕರಣ ಎಂಬ ಪತ್ರವನ್ನು ಉಲ್ಲೇಖಿಸಲಾಗಿದೆ.

ಪ್ರಸ್ತಾವನೆ: ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು ಇವರು ಹಾವೇರಿ ಜಿಲ್ಲೆ, ರಟ್ಟಿಹಳ್ಳಿ ತಾಲೂಕು ಮದಗ ಮಾಸೂರು ಕೆರೆಯ ಎಡದಂಡೆ ಮತ್ತು ಬಲದಂಡೆ ಮುಖ್ಯ ನಾಲೆಗಳನ್ನು ಆಧುನೀಕರಣಗೊಳಿಸುವ ರೂ.52.20 ಕೋಟಿ (2023-24ನೇ ಸಾಲಿನ ಏಕ ರೂಪ ದರಪಟ್ಟಿಯನ್ವಯ) ಅಂದಾಜು ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಬಳಿ ಕುಮುದ್ವತಿ ನದಿಗೆ ಅಡ್ಡಲಾಗಿ ಮದಗ ಮಾಸೂರು ಕೆರೆಯಿದ್ದು, 14ನೇ ಶತಮಾನದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. ಸದರಿ ಕೆರೆಯ ಸಂಗ್ರಹಣಾ ಸಾಮರ್ಥ್ಯ 0.056 ಟಿಎಂಸಿ ಇದ್ದು, 0.718 ಟಿಎಂಸಿ ನೀರಿನ ಬಳಕೆಯೊಂದಿಗೆ 715 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಸದರಿ ಕೆರೆಯ ಎಡದಂಡೆ ಕಾಲುವೆ 11 ಕಿ.ಮೀ. ಉದ್ದ ಮತ್ತು ಬಲದಂಡೆ ಕಾಲುವೆಯು 13.075 ಕಿ.ಮೀ. ಉದ್ದವಿದ್ದು, ಕ್ರಮವಾಗಿ 243 ಹೆಕ್ಟೇರ್ ಹಾಗೂ 472 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲು ಯೋಜಿಸಲಾಗಿತ್ತು.

ಮದಗ-ಮಾಸೂರು ಕೆರೆಯ ಎಡದಂಡೆ ಮತ್ತು ಬಲದಂಡೆ ಕಾಲುವೆಗಳು 1862ರಲ್ಲಿ ನಿರ್ಮಾಣಗೊಂಡಿದ್ದು, ಪ್ರಸ್ತುತ ಕಾಲುವೆಗಳ ಭಾಗಶಃ ಲೈನಿಂಗ್ ಹೊಂದಿದ್ದು, ಕಾಲಾಂತರದಲ್ಲಿ ಆಕಾರಗಳನ್ನು ಕಳೆದುಕೊಂಡಿವೆ. ನಾಲೆಯ ಕೆಲವು ಭಾಗಗಳ ತಳಭಾಗದಲ್ಲಿ ಕೊರಕಲು ಉಂಟಾಗಿದ್ದು, ಕೆಲವು ಕಡೆ ಗಿಡ-ಗಂಟಿಗಳು ಬೆಳೆದು ಹೂಳು ತುಂಬಿರುತ್ತದೆ.

ಕಾಲುವೆಯಲ್ಲಿ ಬರುವ ಕೆಲವು structures/ ಕಾಲುವೆಯ ಗೇಟುಗಳು ಶಿಥಿಲಗೊಂಡಿದ್ದು, ಕಾಲುವೆಯಿಂದ ನೀರು ಸೋರಿಕೆಯಾಗುತ್ತಿರುತ್ತದೆ. ಇದರಿಂದ, ಯೋಜನೆಯ ಕೊನೆಯ ಭಾಗದ ಫಲಾನುಭವಿಗಳಿಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಕಾಲುವೆ ಆಧುನೀಕರಣಗೊಳಿಸುವಂತೆ ಒತ್ತಾಯಿಸಿರುತ್ತಾರೆ.

ಆದ್ದರಿಂದ, ಮದಗ- ಮಾಸೂರು ಕೆರೆಯ ಮುಖ್ಯ ನಾಲೆಗಳ ಆಧುನೀಕರಣ ಕಾಮಗಾರಿಯೊಂದಿಗೆ ಸಾರ್ವಜನಿಕರ ಬೇಡಿಕೆಯಂತೆ ಕೆಲವು ಹೆಚ್ಚುವರಿ ಸಿ.ಡಿ ಕಾಮಗಾರಿಗಳನ್ನು ಕೈಗೊಳ್ಳಲು ಸದರಿ ಯೋಜನೆಯನ್ನು ರೂಪಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ಪತ್ರದಲ್ಲಿ ತಿಳಿಸಿದ್ದರು.

ಮದಗ-ಮಾಸೂರು ಕೆರೆಯ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಆಧುನೀಕರಣ ಮತ್ತು ಸದರಿ ಕಾಲುವೆಗಳಡಿ ಸದರಿ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 1/3 ಅನುದಾನದ ಪ್ರಾವಿಧಾನತೆಯನ್ನು ಮಾಡಿಕೊಂಡು 2025-26 ಸಾಲಿನ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದೆಂದು ವ್ಯವಸ್ಥಾಪಕ ನಿರ್ದೇಶಕರು ವರದಿ ಮಾಡಿರುತ್ತಾರೆ.

ಸದರಿ ಯೋಜನೆಯ ವಿವರವಾದ ಯೋಜನಾ ವರದಿಗೆ ದಿನಾಂಕ 22.08.2024ರಂದು ನಡೆದ ನಿಗಮದ ಅಂದಾಜು ಪರಿಶೀಲನಾ ಸಮಿತಿಯ 111ನೇ ಸಭೆಯಲ್ಲಿ ಸಹಮತಿ ನೀಡಿರುತ್ತದೆ. ಮುಂದುವರೆದು, ದಿನಾಂಕ 25.01.2025ರಂದು ನಡೆದ ನಿಗಮದ ನಿರ್ದೇಶಕರ ಮಂಡಳಿಯ 105ನೇ ಸಭೆಯು ಸದರಿ ಪ್ರಸ್ತಾವನೆಯನ್ನು ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲು ಶಿಫಾರಸು ಮಾಡಿತ್ತು.

ಸರ್ಕಾರದ ಆದೇಶ: ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರ ರಟ್ಟಿಹಳ್ಳಿ ತಾಲೂಕು ಮದಗ-ಮಾಸೂರು ಕೆರೆಯ ಎಡದಂಡೆ ಹಾಗೂ ಬಲದಂಡೆ ಮುಖ್ಯ ನಾಲೆಗಳ ಆಧುನೀಕರಣಗೊಳಿಸುವ ರೂ.52.20 ಕೋಟಿ ಅಂದಾಜು ಮೊತ್ತದ ಕಾಮಗಾರಿಗೆ (2023-24ನೇ ಸಾಲಿನ ಏಕರೂಪ ದರಪಟ್ಟಿಯನ್ವಯ) ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದೆ.

ಈ ಆದೇಶವನ್ನು ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ 17ನೇ ನಿಯಮದ 2ನೇ ಉಪನಿಯಮದ ಪರಂತುಕದ ವ್ಯಾಪ್ತಿಯೊಳಗೆ ಬರುತ್ತದೆ ಮತ್ತು ದಿನಾಂಕ 24.07.2025ರ ಸಚಿವ ಸಂಪುಟ ಸಭೆಯ ನಿರ್ಣಯದ ಅನ್ವಯ ಹೊರಡಿಸಲಾಗಿದೆ.

Previous articleಬೆಂಗಳೂರು ದಕ್ಷಿಣದಲ್ಲಿ ಸೈಟ್ ಕೊಳ್ಳುವವರಿಗೆ ಗುಡ್‌ ನ್ಯೂಸ್
Next articleಯೋಧರ ಅವಹೇಳನ ರಾಹುಲ್‌ಗೆ ಸುಪ್ರೀಂ ಚಾಟಿ: ಕಾರಣವೇನು?

LEAVE A REPLY

Please enter your comment!
Please enter your name here