ಬೆಂಗಳೂರು: ಸಿಲಿಂಡರ್ ಸ್ಫೋಟ, ಒಬ್ಬ ಸಾವು, 8 ಮಂದಿಗೆ ಗಾಯ

0
124

ಬೆಂಗಳೂರು: ಬೆಂಗಳೂರು ನಗರದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಸ್ಫೋಟದಲ್ಲಿ ಒಬ್ಬರು ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ. ಸಿಲಿಂಡರ್ ಸ್ಫೋಟಗೊಂಡ ಕಾರಣ ಈ ದುರಂತ ಸಂಭವಿಸಿದೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 8.20ರ ಸಮಾರಿಗೆ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಹೊಂಬೇಗೌಡ ನಗರ ವಾರ್ಡ್‌ನ ಚಿನ್ನಯ್ಯನಪಾಳ್ಯದಲ್ಲಿನ ತಿಮ್ಮರಾಜು ಎಂಬುವವರಿಗೆ ಸೇರಿದ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಲ್ಲಿ 8 ವರ್ಷದ ಬಾಲಕ ಮುಬಾರಕ್ ಮೃತಪಟ್ಟಿದ್ದಾನೆ.

ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಅಕ್ಕಪಕ್ಕದ ಮೂರು ಕಟ್ಟಡಗಳಿಗೆ ಹಾನಿಯಾಗಿದೆ. ಮನೆ ಸಂಪೂರ್ಣ ಜಖಂಗೊಂಡಿದೆ. 8 ಮಂದಿ ಘಟನೆಯಲ್ಲಿ ಗಾಯಗೊಂಡಿದ್ದು, ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಎಸ್‌ಡಿಆರ್‌ಎಫ್‌ ತಂಡ ಮತ್ತು ಪೊಲೀಸ್ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ದುರ್ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಮತ್ತು ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಮೊದಲು ಇದೊಂದು ನಿಗೂಢ ಸ್ಫೋಟ ಎಂದು ಕೆಲಕಾಲ ಆತಂಕ ಉಂಟಾಗಿತ್ತು. ಬಳಿಕ ಪೊಲೀಸರು ಸಿಲಿಂಡರ್ ಸ್ಫೋಟಗೊಂಡಿದೆ ಎಂದು ತಿಳಿಸುವ ಮೂಲಕ ಸುತ್ತಮುತ್ತಲಿನ ಜನರ ಆತಂಕವನ್ನು ದೂರ ಮಾಡಿದರು. ಮನೆ ಸಂಪೂರ್ಣವಾಗಿ ಜಖಂಗೊಂಡಿದ್ದು, ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಅಕ್ಕಪಕ್ಕದ ಮೂರು ಮನೆಗಳಿಗೆ ಹಾನಿಯಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಸ್ಫೋಟದ ಕುರಿತು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಬೆಳಗ್ಗೆ 8.23ಕ್ಕೆ ಮಾಹಿತಿ ಬಂದಿದೆ. 8.25ಕ್ಕೆ ಅಗ್ನಿ ಶಾಮಕ ಠಾಣೆಗೆ ಮಾಹಿತಿ ನೀಡಲಾಯಿತು. ಎರಡು ಅಗ್ನಿ ಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ಕಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಗಾಯಗೊಂಡ 8 ಮಂದಿಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಸಿಕ್ಕಿದೆ. ದಕ್ಷಿಣ ವಿಭಾಗದ ಡಿಸಿಪಿ ಸಾರಾ ಫಾತಿಮಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಿಲಿಂಡರ್ ಸ್ಫೋಟಗೊಂಡ ಮನೆ ತಿಮ್ಮರಾಜು ಎಂಬುವವರಿಗೆ ಸೇರಿದೆ. ಘಟನೆಯಲ್ಲಿ ಗಾಯಗೊಂಡವರು ಕಯಾಲ್ (8), ಕಸ್ತೂರಮ್ಮ (35), ಸರಸಮ್ಮ (50), ಶಬ್ರೀನ್ ಬಾನು (35), ಸುಬ್ರಮಣಿ (62), ಶೇಖ್ ನಜೀದುಲ್ಲಾ (37), ಫಾತಿಮಾ (8) ಗಾಯಗೊಂಡಿದ್ದಾರೆ.

ಸಿಲಿಂಡರ್ ಸೋರಿಕೆಯಿಂದ ಸ್ಫೋಟ ಉಂಟಾಗಿದೆಯೇ? ಅಥವ ಬೇರೆ ಕಾರಣಕ್ಕೆ ಸ್ಫೋಟ ಸಂಭವಿಸಿದೆಯೇ? ಎಂದು ತನಿಖೆ ನಡೆಸಲಾಗುತ್ತಿದೆ. ಅಕ್ಕಪಕ್ಕದ ಮೂರು ಮನೆಯ ಗೋಡೆಗೆ ಈ ಸ್ಫೋಟದಿಂದ ಹಾನಿಯಾಗಿದೆ.

ಈ ಪ್ರದೇಶದಲ್ಲಿ ವಾಸಿಸುವ ಅನೇಕ ಜನರು ಲಾಲ್‌ ಬಾಗ್‌ಗೆ ಕೆಲಸಕ್ಕೆ ಹೋಗುತ್ತಾರೆ. ಲಾಲ್ ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದ ಕಾರಣ ಬೆಳಗ್ಗೆಯೇ ಎಲ್ಲರೂ ಕೆಲಸಕ್ಕೆ ಹೋಗಿದ್ದರು. ಆದ್ದರಿಂದ ಭಾರೀ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಹೇಳಿದ್ದಾರೆ.

Previous articleಬೆಂಗಳೂರು: ಹೊಸ ಮೀಟರ್ ದರ ಇಲ್ಲ, ಆಟೋ ಚಾಲಕರಿಂದ ಜನರ ಸುಲಿಗೆ
Next articleಪೋಷಕರೇ ಹುಷಾರ್…!‌ ಕರ್ನಾಟಕದ 1.53 ಲಕ್ಷ ಮಕ್ಕಳಿಗೆ ದೃಷ್ಟಿದೋಷ

LEAVE A REPLY

Please enter your comment!
Please enter your name here