“ಮಾಲೂರು ವಿಧಾನಸಭಾ ಕ್ಷೇತ್ರದ ಮರುಮತ ಎಣಿಕೆಯಲ್ಲಿ ನಾನು ಗೆಲ್ಲುವುದು ನೂರಕ್ಕೆ ನೂರರಷ್ಟು ಖಚಿತ. ಗೆದ್ದ ನಂತರ ಮತ್ತೊಂದು ಚುನಾವಣಾ ತಕರಾರು ದಾಖಲಿಸುತ್ತೇನೆ” ಎಂದು ಮಾಜಿ ಶಾಸಕ ಕೆ.ಎಸ್. ಮಂಜುನಾಥ ಗೌಡ ತಿಳಿಸಿದ್ದಾರೆ.
“ಮರು ಮತಎಣಿಕೆಗೆ ಆದೇಶ ನೀಡಿದ ಹೈಕೋರ್ಟ್ ತನ್ನದೇ ಆದೇಶಕ್ಕೆ ಒಂದು ತಿಂಗಳ ತಡೆಯಾಜ್ಞೆ ನೀಡಿ ಪ್ರತಿಸ್ಪರ್ಧಿಯು ಸುಪ್ರೀಂಕೋರ್ಟ್ ಮೊರೆ ಹೋಗಲು ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ನಾನು ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ್ದೇನೆ” ಎಂದರು.
“ಹಾಗಾಗಿ ಸರ್ವೋಚ್ಚ ನ್ಯಾಯಾಲಯವು ಏಕ ಪಕ್ಷಿಯವಾಗಿ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ಬರುವುದಿಲ್ಲ. ನಮ್ಮ ವಾದವನ್ನು ಸಹ ಆಲಿಸಬೇಕಾಗುತ್ತದೆ” ಎಂದು ಬಿಜೆಪಿ ನಾಯಕ ಮಂಜುನಾಥ ಗೌಡ ವಿವರಿಸಿದರು.
“ಯಾವತ್ತೋ ಮುಗಿಯಬೇಕಾಗಿದ್ದ ಪ್ರಕರಣವನ್ನು ಪ್ರತಿಸ್ಪರ್ಧಿಯು ವಿನಾಕಾರಣ ಕಾಲಹರಣ ಆಗುವಂತೆ ಮಾಡಿದರು. ನ್ಯಾಯಾಲಯವು ಬಯಸಿದ ದಾಖಲೆಗಳನ್ನು ಕೊಡಲು ಅಧಿಕಾರಿಗಳು ವಿಳಂಬ ಮಾಡಿದರು. ಏನೇ ಆಗಲಿ ಕಾನೂನು ಹೋರಾಟದಲ್ಲಿ ಮುಂದುವರೆದು ಯಾವಾಗ ಆದೇಶ ಬಂದರೂ ಪರವಾಗಿಲ್ಲ. ನನ್ನ ಉದ್ದೇಶ ಶಾಸಕ ಸ್ಥಾನ ಅಲ್ಲ. ಪ್ರಜಾಪ್ರಭುತ್ವದ ಕೊಲೆ ಮಾಡಿದವರಿಗೆ ಪಾಠ ಕಲಿಸುವುದಷ್ಟೇ” ಎಂದರು.
ಗೆದ್ದ ನಂತರ ಮತ್ತೊದು ದಾವೆ: “ಮರುಮತ ಎಣಿಕೆಯಲ್ಲಿ ನಾನು ಕನಿಷ್ಠ 300 ಮತಗಳ ಅಂತರದಿಂದ ಗೆಲ್ಲುವುದು ಖಚಿತ. ಗೆದ್ದ ನಂತರ ನ್ಯಾಯಾಲಯಕ್ಕೆ ಮತ್ತೊಂದು ದಾವೆ ಸಲ್ಲಿಸುವೆ” ಎಂದು ಮಂಜುನಾಥ ಗೌಡ ಪುನರುಚ್ಚರಿಸಿದರು.
“ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ. ಪಕ್ಷೇತರ ಅಭ್ಯರ್ಥಿಗಳ ಮತಗಳನ್ನು ಕಾಂಗ್ರೆಸ್‌ಗೆ ಸೇರಿಸಿ ಅಭ್ಯರ್ಥಿ ಗೆಲ್ಲುವಂತೆ ಮಾಡಲಾಗಿದೆ ಎಂದು ಮತ ಎಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳೇ ನನಗೆ ಮಾಹಿತಿ ನೀಡಿದರು. ಹಾಗಾಗಿ ನಾನು ನ್ಯಾಯಾಲಯದ ಮೊರೆ ಹೋದೆ” ಎಂದು ತಿಳಿಸಿದರು.
“ಸಂವಿಧಾನದಲ್ಲಿ ಶಾಸಕ ಸ್ಥಾನದ ಅವಧಿ ಐದು ವರ್ಷ ಇದೆ. ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ನನಗೆ ಅವಧಿ ಕುಂಠಿತಗೊಂಡಿದೆ. ಹಾಗಾಗಿ ನಾನು ಗೆದ್ದ ದಿನದಿಂದ ಐದು ವರ್ಷ ಶಾಸಕ ಸ್ಥಾನದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯಕ್ಕೆ ಮತ್ತೊಮ್ಮೆ ಮೊರೆ ಹೋಗುವೆ” ಎಂದು ಮಂಜುನಾಥ ಗೌಡ ಹೇಳಿದರು.
ಮಂಗಳವಾರ ಕರ್ನಾಟಕ ಹೈಕೋರ್ಟ್ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಎಣಿಕೆಗೆ ಆದೇಶ ನೀಡಿದೆ. ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಶಾಸಕ ಸ್ಥಾನವನ್ನು ಅಸಿಂಧು ಎಂದು ಹೇಳಿದೆ. ಆದ್ದರಿಂದ ಮರು ಮತಎಣಿಕೆ ಕುತೂಹಲಕ್ಕೆ ಕಾರಣವಾಗಿದೆ.
ಹೈಕೋರ್ಟ್ ಆದೇಶದ ಬಳಿಕ ಪ್ರತಿಕ್ರಿಯೆ ನೀಡಿರುವ ಕೆ.ವೈ.ನಂಜೇಗೌಡ “ಹೈಕೋರ್ಟ್ ಆದೇಶದಂತೆ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ನಡೆದು ಕೆ.ಎಸ್.ಮಂಜುನಾಥ ಗೌಡ ಗೆದ್ದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ” ಎಂದು ಸವಾಲು ಹಾಕಿದ್ದಾರೆ.