ಜಾತಿಗಣತಿ: ಕೊಡಗಿನಲ್ಲಿ ಶೇ 77ರಷ್ಟು ಸಮೀಕ್ಷೆ ಪೂರ್ಣ

0
40

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ಸೆಪ್ಟೆಂಬರ್ 22ರಂದು ಪ್ರಾರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮೀಕ್ಷೆಯನ್ನು ಅಕ್ಟೋಬರ್ 18ರ ತನಕ ವಿಸ್ತರಣೆ ಮಾಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಸಮೀಕ್ಷೆಯಲ್ಲಿ ಶೇ.77.86 ರಷ್ಟು ಪ್ರಗತಿಯಾಗಿದೆ. ಜಿಲ್ಲೆಯ ಎಲ್ಲಾ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ನಿಖರವಾದ ಮಾಹಿತಿ ಸಂಗ್ರಹಿಸುವ ಕಾರ್ಯವು ಜಿಲ್ಲೆಯಾದ್ಯಂತ ನಡೆಯುತ್ತಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಈಗಾಗಲೇ ಗುರುತಿಸಲಾಗಿರುವ ಎಲ್ಲಾ ಮನೆಗಳಿಗೆ ಗಣತಿದಾರರು ಭೇಟಿ ನೀಡಿ, ಗಣತಿ ಕಾರ್ಯ ನಡೆಸುತ್ತಿದ್ದು, ಸಾರ್ವಜನಿಕರು ಕೂಡ ಸ್ವಯಂ ಆಗಿ ತಮ್ಮ ಮನೆಯ ಗಣತಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಸೌಲಭ್ಯ ಸಿದ್ಧಪಡಿಸಲಾಗಿದೆ. ಸಾರ್ವಜನಿಕರು https://kscbcselfdeclaration.karnataka.gov.in/ ನಲ್ಲಿ ಸ್ವಯಂ ಮಾಹಿತಿ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಲಿಂಕ್‍ಅನ್ನು ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಪುಟದಲ್ಲಿ ʼನಾಗರಿಕʼ ಎಂಬುದನ್ನು ಆಯ್ಕೆ ಮಾಡಿದ್ದಲ್ಲಿ ಲಾಗಿನ್‍ನಲ್ಲಿ ಮುಂದುವರೆಯಲು ಕೋರಲಾಗುತ್ತದೆ. ನಂತರದಲ್ಲಿ ತಮ್ಮ ಮೊಬೈಲ್ ಸಂಖ್ಯೆ ನೀಡಿದ್ದಲ್ಲಿ, ಒಟಿಪಿ ಬರಲಿದ್ದು, ಅದನ್ನು ದಾಖಲು ಮಾಡಬೇಕಿದೆ.

ನಂತರ ತೆರೆಯುವ ಪುಟದಲ್ಲಿ ತಮ್ಮ ಸಮೀಕ್ಷೆಯ ಸ್ಥಿತಿಗತಿ ಕುರಿತಂತೆ ನಿಮ್ಮ ಸಮೀಕ್ಷೆ ಪೂರ್ಣಗೊಂಡಿದೆ ಅಥವಾ ಬಾಕಿ ಎಂದು ಕಾಣಬಹುದಾಗಿದ್ದು, ಇದುವರೆಗೆ ಸಮೀಕ್ಷೆ ನಡೆಯದೇ ಬಾಕಿ ಇದ್ದಲ್ಲಿ, ಇನ್ನೂ ಯಾವುದೇ ಕುಟುಂಬ ಸದಸ್ಯರನ್ನು ಸೇರಿಸಿಲ್ಲ ಫಾರ್ಮ್ ಭರ್ತಿ ಮಾಡಲು ಆರಂಭಿಸಿ ಎಂಬ ಸಂದೇಶ ಕಾಣಲಿದ್ದು, ಹೊಸ ಸಮೀಕ್ಷೆ ಆರಂಭಿಸಿ ಎಂಬುದನ್ನು ಕ್ಲಿಕ್ ಮಾಡಬೇಕಿದೆ. ನಂತರದ ಪುಟದಲ್ಲಿ ಈಗಾಗಲೇ ತಮ್ಮ ಮನೆಗೆ ಅಂಟಿಸಲಾಗಿರುವ ಸ್ಟಿಕ್ಕರ್‍ನಲ್ಲಿರುವ ನಂಬರ್ ಸಂಖ್ಯೆಯನ್ನು ದಾಖಲಿಸಿ ಸ್ಕ್ರೀನ್‍ನಲ್ಲಿ ಕೋರುವ ಮಾಹಿತಿ ದಾಖಲು ಮಾಡಬೇಕಿದೆ.

ಈ ಸಮೀಕ್ಷೆಗೆ ದಾಖಲೆಗಳ ಮಾಹಿತಿ ನೀಡುವ ಅವಶ್ಯಕತೆ ಇರುವುದರಿಂದ ತಮ್ಮ ಕುಟುಂಬದ ಸದಸ್ಯರ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿಕಲಚೇತನರಾಗಿದ್ದರೆ ಯುಐಡಿ ಕಾರ್ಡ್ ಅಥವಾ ಅಂಗವಿಕಲ ಪ್ರಮಾಣ ಪತ್ರದ ದಾಖಲೆಗಳನ್ನು ತೆಗೆದಿರಿಸಿಕೊಂಡು ಸುಲಭವಾಗಿ ಈ ಸಮೀಕ್ಷೆ ಕಾರ್ಯದಲ್ಲಿ ತಾವೇ ಸ್ವಯಂ ಆಗಿ ಭಾಗವಹಿಸಬಹುದಾಗಿದ್ದು, ಸಮೀಕ್ಷೆ ಯಶಸ್ವಿಯಾದ ನಂತರ ಈ ಬಗ್ಗೆ ಮೊಬೈಲ್‍ಗೆ ಸಂದೇಶ ಬರಲಿದೆ.

ಗಣತಿದಾರರು ತಮ್ಮ ಮನೆಗೆ ಬರುವವರೆಗೆ ಕಾಯದೇ ಸಾರ್ವಜನಿಕರು ತಮಗೆ ಅನುಕೂಲವಾದ ಅವಧಿಯಲ್ಲಿ ಯಾವುದೇ ಪ್ರದೇಶದಿಂದ ಸಮೀಕ್ಷೆಯಲ್ಲಿ ಭಾಗವಹಿಸಬಹುದಾಗಿದ್ದು, ತಾವೇ ತಮ್ಮ ಮಾಹಿತಿಯನ್ನು ದಾಖಲು ಮಾಡುವುದರಿಂದ, ಯಾವುದೇ ಗೊಂದಲಗಳಿಲ್ಲದೆ ನಿಖರವಾಗಿ ತಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಸಮೀಕ್ಷೆಯಲ್ಲಿ ತಿಳಿಸಲು ಸಾಧ್ಯವಾಗಲಿದೆ.

ಕೊಡಗು ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧಿಸಿದಂತೆ 1131 ಬ್ಲಾಕ್‍ಗಳಿದ್ದು, ಇದರಲ್ಲಿ 1,34,396 ಕುಟುಂಬಗಳ ಗುರಿಯಲ್ಲಿ ಈಗಾಗಲೇ 1,04,644 ಕುಟುಂಬಗಳ ಸಮೀಕ್ಷೆ ಆಗಿದ್ದು, ಶೇ.77.86 ರಷ್ಟು ಸಮೀಕ್ಷೆ ನಡೆದಿದೆ.

ತಾಲ್ಲೂಕುವಾರು ಸಮೀಕ್ಷೆಯ ಮಾಹಿತಿಯಂತೆ ಕುಶಾಲನಗರ ತಾಲ್ಲೂಕಿನಲ್ಲಿ 304 ಬ್ಲಾಕ್‍ಗಳಲ್ಲಿ 34,637 ಕುಟುಂಬಗಳಲ್ಲಿ 26,819 ಕುಟುಂಬಗಳ ಸಮೀಕ್ಷೆ ಆಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 264 ಬ್ಲಾಕ್‍ಗಳಲ್ಲಿ 35,127 ಕುಟುಂಬಗಳಲ್ಲಿ 25,610 ಕುಟುಂಬಗಳ ಸಮೀಕ್ಷೆ ಆಗಿದೆ. ಪೊನ್ನಂಪೇಟೆ ತಾಲ್ಲೂಕಿನಲ್ಲಿ 87 ಬ್ಲಾಕ್‍ಗಳಲ್ಲಿ 10,337 ಕುಟುಂಬಗಳಲ್ಲಿ 8,743 ಕುಟುಂಬಗಳ ಸಮೀಕ್ಷೆ ಆಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 266 ಬ್ಲಾಕ್‍ಗಳಲ್ಲಿ 29,402 ಕುಟುಂಬಗಳ ಗುರಿಯಲ್ಲಿ 24,428 ಕುಟುಂಬಗಳ ಸಮೀಕ್ಷೆ ಆಗಿದೆ.

ಹಾಗೆಯೇ ವಿರಾಜಪೇಟೆ ತಾಲ್ಲೂಕಿನಲ್ಲಿ 210 ಬ್ಲಾಕ್‍ಗಳಲ್ಲಿ 24,893 ಕುಟುಂಬಗಳ ಗುರಿಯಲ್ಲಿ 19,044 ಕುಟುಂಬಗಳ ಸರ್ವೇ ಆಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎ.ಎಸ್.ದೀಪಕ್ ತಿಳಿಸಿದ್ದಾರೆ.

Previous articleಸೆಹ್ವಾಗ್ ದಾಂಪತ್ಯದಲ್ಲಿ ಬಿರುಕು: ಕಾರಣ ಬಿಸಿಸಿಐ ಅಧ್ಯಕ್ಷ? ವೈರಲ್ ಆಗ್ತಿರುವ ಸುದ್ದಿಗಳು!
Next articleUKಯ 9 ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್ ತೆರೆಯಲು ಸಿದ್ಧ

LEAVE A REPLY

Please enter your comment!
Please enter your name here