ಬೆಂಗಳೂರು: ಬೆಳಗಾವಿ-ದೆಹಲಿ, ಬೆಳಗಾವಿ-ಬೆಂಗಳೂರು ಪ್ರತಿದಿನದ ವಿಮಾನ, ವೇಳಾಪಟ್ಟಿ

0
128

ಬೆಂಗಳೂರು: ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಿದೆ. ಈಗ ಕುಂದಾನಗರಿಯ ಜನರಿಗೆ ಮತ್ತೊಂದು ಸಿಹಿಸುದ್ದಿ ಇದೆ. ಬೆಂಗಳೂರು-ಬೆಳಗಾವಿ ನಡುವೆ ದಿನನಿತ್ಯದ ವಿಮಾನ ಹಾರಾಟ ಆರಂಭವಾಗಿದೆ.

ವಿಮಾನ ಹಾರಾಟ ಸ್ಥಗಿತದ ಕಾರಣಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಸದಾ ಸುದ್ದಿಯಲ್ಲಿ ಇರುತ್ತದೆ. ಆದರೆ ಈಗ ಎರಡು ಹೊಸ ವಿಮಾನ ಸೇವೆ ಆರಂಭದ ಸುದ್ದಿಗಳು ಬಂದಿದೆ.

ಹೌದು, ಬೆಳಗಾವಿ-ಬೆಂಗಳೂರು ಮತ್ತು ಬೆಳಗಾವಿ-ನವದೆಹಲಿ ನಡುವೆ ಪ್ರತಿದಿನದ ವಿಮಾನ ಸೇವೆ ಆರಂಭವಾಗಲಿದೆ. ಇಂಡಿಗೋ ವಿಮಾನಯಾನ ಸಂಸ್ಥೆ ಈ ಸೇವೆಯನ್ನು ನೀಡಲಿದೆ. ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ವೇಳಾಪಟ್ಟಿ: ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಬೆಳಗಾವಿ-ದೆಹಲಿ, ಬೆಂಗಳೂರು-ಬೆಳಗಾವಿ ನಡುವೆ ಪ್ರತಿದಿನವೂ ಇಂಡಿಗೋ ವಿಮಾನ ಸಂಚಾರವನ್ನು ಆರಂಭಿಸಲಿದೆ ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 16, 2025ರಿಂದ ಬೆಳಗಾವಿ-ದೆಹಲಿ ವಿಮಾನ ಸಂಚಾರ ಆರಂಭವಾಗಲಿದೆ. ಈ ವಿಮಾನ ಬೆಳಗ್ಗೆ 9.10ಕ್ಕೆ ಬೆಳಗಾವಿಯಿಂದ ಹೊರಡಲಿದೆ.

ಬೆಳಗಾವಿ-ಬೆಂಗಳೂರು ನಡುವೆ ಸೆಪ್ಟೆಂಬರ್ 21, 2025ರಿಂದ ವಿಮಾನ ಸೇವೆ ಪ್ರಾರಂಭವಾಗಲಿದೆ. ಈ ಮಾರ್ಗದ ವಿಮಾನ ಬೆಳಗ್ಗೆ 8.25ಕ್ಕೆ ಬೆಳಗಾವಿಯಿಂದ ಹೊರಡಲಿದೆ.

ಸದ್ಯ ಬೆಳಗಾವಿ-ದೆಹಲಿ ನಡುವೆ ಎರಡು ದಿನಕ್ಕೊಮ್ಮೆ ಮಾತ್ರ ವಿಮಾನ ಸೇವೆ ಇದೆ. ಬೆಂಗಳೂರು-ಬೆಳಗಾವಿ ನಡುವೆ ಬೆಳಗ್ಗೆ ಹಾರಾಟ ನಡೆಸುತ್ತಿದ್ದ ವಿಮಾನ ಸೇವೆ ಸ್ಥಗಿತವಾಗಿತ್ತು.

ಬೆಳಗಾವಿ-ಬೆಂಗಳೂರು, ಬೆಳಗಾವಿ-ದೆಹಲಿ ವಿಮಾನ ಸೇವೆಗಾಗಿ ಇಂಡಿಗೋ ವಿಮಾನಯಾನ ಸಂಸ್ಥೆ ಜೊತೆ ನಡೆಸಿದ ಮಾತುಕತೆ ಫಲ ನೀಡಿದೆ. ವಿಮಾನ ಸೇವೆ ಆರಂಭವಾಗಲಿದ್ದು, ವೇಳಾಪಟ್ಟಿ ಪ್ರಕಟಿಸಲಾಗಿದೆ.

ಬೆಳಗಾವಿ ವಿಮಾನ ನಿಲ್ದಾಣ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಕ್ಕೆ ಅನುಕೂಲವಾಗಿದೆ. ಮೂರು ರಾಜ್ಯಗಳ ಜನರು ವಿಮಾನ ನಿಲ್ದಾಣ ಬಳಕೆ ಮಾಡುತ್ತಾರೆ. ಆದರೆ ಬೆಳಗಾವಿಯಿಂದ ಇರುವ ವಿಮಾನ ಸೇವೆ ಕೇವಲ 6.

ಉಡಾನ್ ಯೋಜನೆ-3 ಪೂರ್ಣಗೊಂಡ ಬಳಿಕ ಬೆಳಗಾವಿಗೆ ಹಾರಾಟ ನಡೆಸುತ್ತಿದ್ದ ವಿಮಾನಗಳ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ನಿಂತಿರುವ ವಿಮಾನಗಳನ್ನು ಪುನಃ ಆರಂಭಿಸಬೇಕು ಎಂದು ಬೇಡಿಕೆಯನ್ನು ಇಡಲಾಗಿದೆ.

ಬೆಳಗಾವಿ ವಿಮಾನ ನಿಲ್ದಾಣದಿಂದ 2023ರಲ್ಲಿ 2.74 ಲಕ್ಷ, 2024ರಲ್ಲಿ 3.47 ಲಕ್ಷ ಜನರು ಸಂಚಾರವನ್ನು ನಡೆಸಿದ್ದಾರೆ. 2025ರ ಏಪ್ರಿಲ್ ತನಕ 1.09 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಅಂಕಿಸಂಖ್ಯೆಗಳ ಮಾಹಿತಿ ಹೇಳಿದೆ.

ಇಂಡಿಗೋ ಮತ್ತು ಸ್ಟಾರ್ ಏರ್ ಸದ್ಯ ಬೆಳಗಾವಿ ನಗರದಿಂದ ದೆಹಲಿ, ಹೈದರಾಬಾದ್, ಮುಂಬೈ, ಬೆಂಗಳೂರು, ಅಹಮದಾಬಾದ್ ಮತ್ತು ಜೈಪುರ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತಿವೆ. ಬೆಳಗಾವಿಯಿಂದ ಹೆಚ್ಚಿನ ವಿಮಾನಗಳ ಸಂಚಾರ ಆರಂಭಿಸಬೇಕು ಎಂದು ಪದೇ ಪದೇ ಬೇಡಿಕೆ ಇಡಲಾಗುತ್ತಿದೆ.

ಈ ಹಿಂದೆ ಉಡಾನ್ ಯೋಜನೆಯಡಿ ಬೆಳಗಾವಿಯಿಂದ ತಿರುಪತಿ, ಪುಣೆ, ಸೂರತ್, ಕಡಪ. ಮೈಸೂರು, ನಾಸಿಕ್, ನಾಗ್ಪುರಕ್ಕೆ ಸಹ ವಿಮಾನ ಸೇವೆ ಇತ್ತು. ಆದರೆ ಯೋಜನೆ ಮುಕ್ತಾಯವಾದ ಬಳಿಕ ಈ ವಿಮಾನಗಳ ಸಂಚಾರ ರದ್ದುಗೊಂಡಿದೆ.

ಬೆಳಗಾವಿ-ಜೈಪುರ ಮಾರ್ಗದ ಅವಧಿ 2026ರ ತನಕ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳನ್ನು ಹೊಂದಿರುವ ಬೆಳಗಾವಿ ಪ್ರಮುಖ ವಾಣಿಜ್ಯ ಕೇಂದ್ರ. ಅಲ್ಲದೇ ಗಡಿ ಜಿಲ್ಲೆಯಾದ ಇದು ಮಹಾರಾಷ್ಟ್ರ, ಗೋವಾ ರಾಜ್ಯದ ಜನರಿಗೂ ಅನುಕೂಲಕರವಾಗಿದೆ. ಆದ್ದರಿಂದ ಹೆಚ್ಚಿನ ವಿಮಾನಗಳಿಗೆ ಬೇಡಿಕೆ ಇದೆ.

Previous articleಬೀದಿ ನಾಯಿ ಕಡಿತ ಪ್ರಕರಣ: ದೇಶದಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ
Next articleDarshan Bail News: ನಟ ದರ್ಶನ್ ಬಂಧನ

LEAVE A REPLY

Please enter your comment!
Please enter your name here