ನರೇಗಲ್ಲ: ಹೈಕೋರ್ಟ ಆದೇಶಂತೆ ಸುಗ್ಗಿಗಿಂತ ಮೊದಲು ಖರೀದಿ ಕೇಂದ್ರವನ್ನು ಸ್ಥಾಪಿಸಬೇಕು, ಎಂಐಎಸ್-ಪಿಡಿಪಿಎಸ್ ಯೋಜನೆಯಡಿ ರಾಜ್ಯ ಸರ್ಕಾರ ಪ್ರೋತ್ಸಾಹ ಧನ ೧೫೦೦ರೂ. ಕುಸುಬೆಯನ್ನು ಖರೀದಿಸಬೇಕು, ಮುಂಗಾರು ಬೆಳೆ ಪರಿಹಾರ, ಬೆಳೆ ವಿಮೆ ಇವೆಲ್ಲವನ್ನು ತತಕ್ಷಣ ನೀಡಬೇಕೆಂದು ಆಗ್ರಹಿಸಿ ನರೇಗಲ್ಲ ಹೋಬಳಿ ರೈತಸೇನಾ ವತಿಯಿಂದ ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಸೋಮವಾರ ಶ್ರೀ ಗಣೇಶ ದೇವಸ್ಥಾನದಿಂದ ಎತ್ತಿನ ಚಕ್ಕಡಿಯೊಂದಿಗೆ ಪಾದಯಾತ್ರೆ ಪ್ರಾರಂಭಿಸಿ ಅರ್ಧ ಘಂಟೆಗಳ ಕಾಲ ರಾಜ್ಯ ಹೆದ್ದಾರಿ ಬಂದ್ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಬಸ್ ನಿಲ್ದಾಣದ ಮಾರ್ಗವಾಗಿ ಉಪತಹಶೀಲ್ದಾರ್ ಕಚೇರಿ ಎದರು ಪ್ರತಿಭಟನೆ ನಡೆಸಿದರು.
ರೈತಸೇನಾ ಅಧ್ಯಕ್ಷ ಆನಂದ ಕೊಟಗಿ ಮಾತನಾಡಿ, ಅಖಂಡ ಧಾರವಾಡ ಜಿಲ್ಲೆಯಲ್ಲಿಯೇ ಹೆಚ್ಚು ಕಂದಾಯ ಕಟ್ಟುವ ನರೇಗಲ್ಲ ಹೋಬಳಿ ಮಲತಾಯಿ ದೊರಣೆ ಸರ್ಕಾರ ಮಾಡುತ್ತಿದೆ. ನಾವೆಲ್ಲ ರೈತರು ಎಷ್ಟೆ ಕೂಗಿದರೂ ಕೇಳಿಸುತ್ತಿಲ್ಲ ಎಂಬಂತೆ ಯಾವುದೇ ಸರ್ಕಾರದ ವರ್ತಿಸುತ್ತಿದೆ. ಸರ್ಕಾರ ಚರ್ಮ ಬಹಳಷ್ಟು ದಪ್ಪವಿದೆ. ನರೇಗಲ್ಲ ಸುತ್ತಮುತ್ತಲು ಬೆಳೆ ಪರಿಹಾರ, ಹಾನಿ ಬಂದಿದೆ.
ಆದರೆ, ನರೇಗಲ್ಲಿಗೆ ಯಾವುದೇ ಒಂದು ರೂ. ಒಬ್ಬ ರೈತನಿಗೂ ಬಂದಿಲ್ಲ. ಅಧಿಕಾರದಲ್ಲಿರುವ ಜನ ಪ್ರತಿನಿಧಿಗಳು ಅದು ಯಾವುದೇ ಸರ್ಕಾರವಿರಲಿ ಎಂದಿಗೂ ರೈತರ ಬಗ್ಗೆ ಕಾಳಜಿ ವಹಿಸಿರುವುದನ್ನು ಕಂಡೇ ಇಲ್ಲ. ನಾವು ಹೋರಾಟ ಮಾಡಿದರಷ್ಟೇ ಸರ್ಕಾರ ನಮ್ಮ ಬಗ್ಗೆ ಕಣ್ಣು ತೆಗೆಯುತ್ತದೆ. ಇಲ್ಲವಾದರೆ ನಮ್ಮತ್ತ ಹೊಳ್ಳಿ ನೋಡುವುದಿಲ್ಲ. ನಾವು ಹೋರಾಟ ಮಾಡಿನೇ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಂತಹ ಸ್ಥೀತಿ ಬಂದೊದಗಿದೆ.
ಚುನಾವಣೆಯಲ್ಲಿ ವೇಳೆ ಮತ ಬೇಕಾದಾಗ ರೈತರ ಮನೆ ಬಾಗಿಲಿಗೆ ಬರುವ ಜನಪ್ರತಿನಿಧಿಗಳು ನಂತರ ನಮ್ಮನ್ನೇ ಮರೆತುಬಿಡುತ್ತಿರುವುದು ಸ್ಥೀತಿ ಆಗಿದೆ. ಇದಕ್ಕೆ ನಾವು ತಕ್ಕ ಪಾಠವನ್ನು ಅವರಿಗೆ ಕಲಿಸಬೇಕು ಎಂದರು. ರೈತ ಮುಖಂಡರಾದ ಶರಣಪ್ಪ ಧರ್ಮಾಯತ, ಉಮೇಶ ಪಾಟೀಲ, ಚಂದ್ರು ಹೊನವಾಡ ಮಾತನಾಡಿ, ಬೆಂಬಲ ಬೆಲೆ ಘೋಷಿಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಈಗಾಗಲೆ ಹೈಕೋರ್ಟ್ ಸರಕಾರಕ್ಕೆ ಸ್ಪಷ್ಟವಾಗಿ ತಿಳಿಸಿದೆ.
ಆದಾಗ್ಯೂ ಸರ್ಕಾರ ರೈತರ ಬಗ್ಗೆ ಕಣ್ಣು ತೆರೆಯುತ್ತಿಲ್ಲವೆಂದರೆ ಏನರ್ಥ? ರೈತ ಒಕ್ಕದಿರೆ ಬಿಕ್ಕುವುದು ಜಗವೆಲ್ಲ ಎಂಬ ಮಾತನ್ನು ಇವರು ಮರೆತಂತಿದೆ. ಒಮ್ಮೆ ಇವರಿಗೆ ಸರಿಯಾಗಿ ಚಳಿ ಬಿಡಿಸಿದರೆ ಆಗ ರೈತರ ಮಹತ್ವವೇನು ಎಂಬುದು ಗೊತ್ತಾಗುತ್ತದೆ. ಅದಕ್ಕಾಗಿ ನಾವೆಲ್ಲರೂ ಒಮ್ಮನದಿಂದ ಹೋರಾಡೋಣ ಎಂದರು.
ಪೊಲೀಸರ ಫಲ ವಿಫಲ: ಉಪವಿಭಾಗಾಧಿಕಾರಿಗಳನ್ನು ಕರೆಯಿಸಿ, ಸಂಧಾನ ಮಾಡಿಸಬೇಕೆನ್ನುವ ಪೊಲೀಸರ ಪ್ರಯತ್ನ ಫಲ ನೀಡಲಿಲ್ಲ. ಖುದ್ದು ಜಿಲ್ಲಾಧಿಕಾರಿಗಳೆ ಸ್ಥಳಕ್ಕೆ ಬರಬೇಕು. ಅವರು ಬರುವವರೆಗೂ ಅನಿರ್ಧಿಷ್ಟ ಹೋರಾಟ ಮಾಡುತ್ತೇವೆ ಎಂದು ರೈತರು ಪಟ್ಟು ಹಿಡಿದು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.
ಬಾಕ್ಸ: ರೈತರ ಹೋರಾಟದ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಗಜೇಂದ್ರಗಡ ತಹಶಿಲ್ದಾರ ಕಿರಣಕುಮಾರ ಕುಲಕರ್ಣಿಯವರಿಗೆ ರೈತರು ಬೆಳೆ ಹಾನಿ ಪರಿಹಾರವನ್ನು ಬೇಗನೆ ಬಿಡುಗಡೆ ಮಾಡಬೇಕೆಂದು ಮನವಿ ಸಲ್ಲಿಸಿದರು. ತಹಶಿಲ್ದಾರರು ಮನವಿ ಸ್ವೀಕರಿಸಿ, ಶೀಘ್ರವೇ ಪರಿಶೀಲಿಸುವುದಾಗಿ ತಿಳಿಸಿದರು.