ಹಾವೇರಿ(ಶಿಗ್ಗಾವಿ): ಎಲ್ಲ ದೇಶಗಳ ಜನರಿಗಿಂತ ಭಾರತೀಯರು ಬುದ್ದಿವಂತರಿದ್ದಾರೆ. ನಮ್ಮ ಮಕ್ಕಳಿಗೆ ಅವಕಾಶ ಕೊಟ್ಟರೆ ಜಗತ್ತನ್ನು ಆಳುತ್ತಾರೆ. ಇದು ಭಾರತದ ಯುಗ, 2047ಕ್ಕೆ ವಿಕಸಿತ ಭಾರತ ಮಾಡುವ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಿಸನಳ್ಳಿ ಗ್ರಾಮದ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ್ಯ ಪಾಠಶಾಲೆಯ ಆವರಣದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯರ ಸಾನಿಧ್ಯದಲ್ಲಿ ಏರ್ಪಡಿಸಿದ ಮಾನವ ಧರ್ಮ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇದೊಂದು ಪುಣ್ಯ ಭೂಮಿ ಕಾಶಿ ಜಗದ್ಗುರುಗಳು ಪಾಠ ಶಾಲೆ ಆರಂಭ ಮಾಡಿದಾಗಲೇ ಬಿಸನಳ್ಳಿ ಪುಣ್ಯಭೂಮಿಯಾಗಿದೆ. ನೂರಾರು ಸಣ್ಣ ವಿದ್ಯಾರ್ಥಿಗಳು, ಆಗಮ, ವೇದ, ಸಂಸ್ಕೃತ, ಜ್ಯೋತಿಷ್ಯದಲ್ಲಿ ಪರಿಣಿತರಾಗುತ್ತಿದ್ದಾರೆ. ಮುಂದಿನ ಜನಾಂಗಕ್ಕೆ ಸಂಸ್ಕೃತಿ ಸಂಸ್ಕಾರ ಹೇಳಿಕೊಡುವ ವಟುಗಳನ್ನು ತಯಾರು ಮಾಡದೇ ಹೋದರೆ ನಮ್ಮ ದೇಶದ ಪರಿಸ್ಥಿತಿ ಏನಾಗುತ್ತದೆ ಯೋಚಿಸಿ. ಹಿಂದಿನವರು ಇದನ್ನು ಮಾಡಿಕೊಂಡು ಬಂದಿದ್ದಾರೆ. ಪರಮಪೂಜ್ಯರ ವಾಣಿ ಮುಖಾಂತರ ನಮ್ಮ ಬದುಕನ್ನು ಸಹಜವಾಗಿ ತಿಳಿದುಕೊಳ್ಳಲು ಸಾಧ್ಯವಾಯಿತು. ಇದು ನಿರಂತರ ನಡೆಯುತ್ತಿರುವ ಸಂಸ್ಕೃತಿಕ ಚಳುವಳಿ, ಕಾಶಿ ಜಗದ್ಗುರುಗಳು ಮಾಡುತ್ತಿರುವುದು ಪುಣ್ಯ ಕಾರ್ಯ. ಅವರ ಪಾದಕ್ಕೆ ಕೋಟಿ ಕೋಟಿ ನಮನಗಳು ಎಂದು ಹೇಳಿದರು.
ಮನುಷ್ಯನ ಜೀವನ ತಾಯಿ ಗರ್ಭದಿಂದ ಭೂತಾಯಿ ಗರ್ಭದವರೆಗೆ ಇರುತ್ತದೆ. ಎರಡನೇಯದಾಗಿ ಜನ್ಮ ಪೂರ್ವದ ಸಂಬಂಧ ಅದು ಕೇವಲ ತಾಯಿಯ ಜೊತೆಗೆ ತಂದೆ ಜೊತೆಗೂ ಅಲ್ಲ, ಅಣ್ಣ ತಮ್ಮಂದಿರ ಜೊತೆಗೂ ಅಲ್ಲ, ತಾಯಿ ಎನ್ನುವ ಶ್ರೇಷ್ಠ ಸಂಬಂಧ ಜನ್ಮ ಪೂರ್ವದ್ದು ಆದ್ದರಿಂದ ತಾಯಿಯ ಮಮತೆ, ತಾಯಿಯ ಋಣ ಅಂತ ಕರೆಯುತ್ತೇವೆ. ಮಮಕಾರ ಹುಟ್ಟುವುದು ತಾಯಿಯಿಂದ ಎಷ್ಟೇ ಶ್ರೀಮಂತ, ಪರಾಕ್ರಮಿಯಾಗಿರಬಹುದು. ಆದರೆ ಋಣಮುಕ್ತವಾಗಿರುವ ಬದುಕು ಯಾರೂ ಹೊಂದಲು ಸಾಧ್ಯವಿಲ್ಲ. ಹೆತ್ತ ತಾಯಿಯ ಋಣ, ತಂದೆಯ ಋಣ, ಅಣ್ಣ ತಮ್ಮಂದಿರ ಋಣ, ಪಾಠ ಮಾಡಿದ ಗುರುಗಳ ಋಣ, ಮಕ್ಕಳು ಕೊಟ್ಟ ಪ್ರೀತಿಯ ಋಣ ಯಾವುದನ್ನು ತೀರಿಸಲು ಸಾಧ್ಯವಿಲ್ಲ. ಋಣಮುಕ್ತರಾಗಲು ಸಾಧ್ಯವಿಲ್ಲ. ತನಗಾಗಿ ಬದುಕುವಂಥದ್ದು ಸಹಜ, ಅದು ಬದುಕಲ್ಲ ಇತರರಿಗೆ ಬುದುಕುವುದು ನಿಜವಾದ ಬದುಕು ಅಂತ ಸ್ವಾಮಿ ವಿವೇಕಾನಂದರು ಹೇಳಿದ್ದಾರೆ ಎಂದರು.
ತಾಯಂದಿರು ತಮಗೆ ಗೊತ್ತಿಲ್ಲದೇ ಅನೇಕ ಒಳ್ಳೆಯ ಕೆಲಸ ಮಾಡುತ್ತಾರೆ. ಮನೆಯಲ್ಲಿ ಎಲ್ಲ ಕೆಲಸ ಮಾಡಿ, ಮಕ್ಕಳನ್ನು ಬೆಳೆಸಿ, ಆಳು ಕಾಳುಗಳನ್ನು ಮಕ್ಕಳಂತೆ ನೋಡಿಕೊಂಡು, ಬಂದವರಿಗೆ ಆಹಾರದ ಪ್ರೀತಿ ಕೊಟ್ಟು ನಿರಂತರವಾಗಿ ಸಂಸಾರದ ಚಕ್ರದಲ್ಲಿ ಮುಳುಗಿರುತ್ತಾರೆ. ಆದರೆ, ಒಂದು ದಿನವೂ ಅವರು ನಾನೇಕೆ ಇದನ್ನೆಲ್ಲ ಮಾಡಲಿ ಎಂದು ಹೇಳುವುದಿಲ್ಲ. ಹೀಗೆ ಪ್ರತಿಯೊಬ್ಬರು ಒಳ್ಳೆಯ ಕೆಲಸವನ್ನು ಮಾಡುವುದನ್ನು ಗುರುತಿಸಬೇಕು. ತಾಯಂದಿರು ಮಾಡುವ ಕೆಲಸವನ್ನು ನಾವು ಗುರುತಿಸಬೇಕು. ದುಡಿದು ಬರುವ ಗಂಡನ ಕೆಲಸವನ್ನು ಮನೆಯವರು ಗುರುತಿಸಬೇಕು. ಅಣ್ಣ ತಮ್ಮಂದಿರ ಸಹಾಯ ಗುರುತಿಸಬೇಕು. ಒಬ್ಬರೊಬ್ಬರ ಒಳ್ಳೆಯತನವನ್ನು ಗುರುತಿಸಿದರೆ ಈ ಸಂಸಾರ, ದೇಶ ಸುಭೀಕ್ಷವಾಗಿರುತ್ತದೆ. ಆದರೆ, ನಾವು ಬೇರೆಯವರ ಬಗ್ಗೆ ಕೆಟ್ಟದ್ದನ್ನು ಮಾತ್ರ ಮಾತನಾಡುತ್ತೇವೆ. ಮೂವರು ಸ್ನೇಹಿತರಲ್ಲಿ ಇಲ್ಲದವನ ಬಗ್ಗೆ ಮಾತನಾಡುವುದೇ ಕೆಲಸ. ಈ ಥರದ ಭಾವನೆ ಇಲ್ಲದೇ ಹೋದರೆ, ಧರ್ಮ, ದೇಶ ಭಕ್ತಿ ಇಂತಹ ಆಯ್ಕೆಗಳಿವೆ. ಸನ್ಮಾರ್ಗ ಸತ್ಕಾರ್ಯದಲ್ಲಿ ಹೋಗುವುದು ಒಂದು ಮಾರ್ಗವಾದರೆ, ದ್ವೇಷ ಸಾಧಿಸುವ ವಿಚಾರ ಇನ್ನೊಂದು ಎಂದು ಹೇಳಿದರು.
ಮಾನವ ಧರ್ಮಕ್ಕೆ ಜಯವಾಗಲಿ: ಆದಿ ಗುರು ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದ್ದಾರೆ. ಕಾಮ, ಕೋಧ ಮದ, ಮತ್ಸರದ ಸಂಕೋಲೆಯಲ್ಲಿ ಸಿಲುಕಿದವನೇ ಮನಷ್ಯ ಕಾಮ, ಕ್ರೋಧ, ಮದ, ಮತ್ಸರದ ಸಂಕೋಲೆಯಿಂದ ಹೊರ ಬಂದು ಪ್ರೀತಿ, ಪ್ರೇಮ, ಧರ್ಮ, ಸತ್ಯ, ವಿಶ್ವಾಸದ ಸಂಕೋಲೆಯಲ್ಲಿ ಸಿಲುಕಿದವನೇ ಮಾನವ. ಅದನ್ನೇ ಬಸವಣ್ಣ ಕಳಬೇಡ ಕೊಲಬೇಡ ಹುಸಿಯ ನುಡಿಯಬೇಡ ಎಂದು ಹೇಳಿದ್ದಾರೆ. ದಯವೇ ಧರ್ಮದ ಮೂಲವಯ್ಯ ದಯವಿಲ್ಲದ ಧರ್ಮ ಅದಾವುದಯ್ಯ ಎಂದು ಹೇಳಿದ್ದಾರೆ. ತಿಳಿದುಕೊಂಡು ನಡೆದರೆ ಎಲ್ಲವೂ ಒಂದೇ ತಿಳಿಯದೇ ತೆಗಳಿಸಿ ನೋಡುವ ಗುಣ ಹೊಂದಿದ್ದರೆ ಎಲ್ಲವೂ ಎರಡೆರಡು ಕಾಣಿಸುತ್ತವೆ. ಯಾವುದು ಸರಿ ಯಾವುದು ತಪ್ಪು ಎನ್ನುವ ತಿಳುವಳಿಕೆ ಇರಬೇಕು. ಸರಿ ತಪ್ಪು ತಿಳಿಯುವ ಆಚರಣೆಗೆ ಧರ್ಮ ಅನ್ನುವುದು ಬೇಕು. ಮೊದಲು ಇದ್ದದ್ದು ಸತ್ಯ ಯುಗ, ಮೊದಲು ಏಕಾತ್ಮ ಇತ್ತು. ಆಮೇಲೆ ದ್ವಾಪಾರ ಯುಗದಲ್ಲಿ ಆತ್ಮ ಪರಮಾತ್ಮ ನಂತರ ತ್ರೇತಾಯುಗದಲ್ಲಿ ಪರಮಾತ್ಮನ ಮಾರ್ಗ ತೋರಿಸಲು ಗುರುಗಳು ಬಂದರು. ಇದು ಕಲಿಯುಗ ವಿಜ್ಞಾನ ಯುಗ ಎಲ್ಲವನ್ನು ಪ್ರಶ್ನೆ ಮಾಡಿ ತಾರ್ಕಿಕವಾಗಿ ತೆಗೆದುಕೊಂಡು ಹೋಗುವುದು. ಇದು ಜ್ಞಾನದ ಯುಗ, ಮಕ್ಕಳಿಗೆ ಜ್ಞಾನ ಕೊಡಬೇಕು. ಒಂದು ಕಾಲದಲ್ಲಿ ಯಾರಿಗೆ ಭೂಮಿ ಇತ್ತೊ ಅವರು ಜಗತ್ತನ್ನು ಆಳುತ್ತಿದ್ದರು. ಅಲೆಕ್ಸಾಂಡರ ವಿಶ್ವವನ್ನು ಗೆದ್ದು ಭಾರತಕ್ಕೆ ಬಂದು ಯುದ್ಧ ನಿಲ್ಲಿಸುತ್ತಾನೆ. ಆತ ತನ್ನ ಶಿಷ್ಯರಿಗೆ ಹೇಳುತ್ತಾನೆ. ತಾನು ನಿಧನ ಹೊಂದಿದಾಗ ಹೋಗುವಾಗ ನನ್ನ ಎರಡೂ ಕೈಗಳನ್ನು ಶವದ ಪೆಟ್ಟಿಗೆ ಹೊರಗೆ ಬಿಡಿ, ಜಗತ್ತು ಗೆದ್ದ ಅಲೆಕ್ಸಾಂಡರ್ ಹೋಗುವಾಗ ಬರಿ ಕೈಯಲ್ಲಿ ಹೋದ ಎಂದು ತಿಳೀಯಬೇಕು ಎಂದು ಹೇಳಿದಾ. ಆ ಮೇಲೆ ಸಂಪತ್ತು ಹೊಂದಿದ್ದ ಬ್ರಿಟೀಷರು ಜಗತ್ತು ಆಳಿದರು ಎಂದು ಹೇಳಿದರು.
ಜ್ಞಾನದ ಯುಗ: ಈಗ ಜ್ಞಾನದ ಯುಗ ನಮ್ಮಲ್ಲಿ ಜ್ಞಾನ ಇರುವುದರಿಂದ ಅಮೇರಿಕಾ ಅಧ್ಯಕ್ಷರು ನೇರವಾಗಿ ಬೆಂಗಳೂರಿಗೆ ಬರುತ್ತಾರೆ. ನಮ್ಮ ಮಕ್ಕಳು ಕೂಡ ಜ್ಞಾನ ಪಡೆಯಬೇಕು. ಎಲ್ಲ ದೇಶಗಳ ಜನರಿಗಿಂತ ಭಾರತೀಯರು ಬುದ್ಧಿವಂತರಿದ್ದಾರೆ. ನಾನು ಅಮೇರಿಕಾದ ಶಾಲೆಗೆ ಹೋಗಿದ್ದೆ ಅಲ್ಲಿ ಏಳನೇ ಕ್ಲಾಸಿನಲ್ಲಿ ಭಾಗಾಕಾರ ಕಲಿಸುತ್ತಿದ್ದರು. ನಮ್ಮ ದೇಶದಲ್ಲಿ ಎರಡನೇ ಕ್ಲಾಸಿನಲ್ಲಿಯೇ ಭಾಗಾಕಾರ ಕಲಿಸುತ್ತಾರೆ. ನಮ್ಮ ಮಕ್ಕಳಿಗೆ ಅವಕಾಶ ಕೊಟ್ಟರೆ ಜಗತ್ತನ್ನು ಆಳುತ್ತಾರೆ. ಇದು ಭಾರತದ ಯುಗ, 2047 ಕೈ ವಿಕಸಿತ ಭಾರತ ಆಗಬೇಕು. 2047 ಕ್ಕೆ ವಿಕಸಿತ ಭಾರತ ಮಾಡುವ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಒಬ್ಬರು 2047 ಕ್ಕೆ ಪ್ರಧಾನಿ ಮೋದಿಯವರು ಇರುತ್ತಾರಾ ಎಂದು ಕೇಳಿದರು. ಆದರೆ, 2047 ಕ್ಕೆ ನಾವ್ಯಾರು ಇಲ್ಲದಿದ್ದರೂ ಮುಂದಿನ ಜನಾಂಗ ಇರುತ್ತದೆ. ಅವರಿಗಾಗಿ ನಾವು ಕೆಲಸ ಮಾಡಬೇಕು ಎಂದು ನಾನು ಹೇಳಿದೆ. ನಿನ್ನೆ ಮೋದಿಯವರೂ ಹೇಳಿದ್ದಾರೆ. ನಾನು ಹುಟ್ಟುವ ಮೊದಲೂ ಭಾರತ ಇತ್ತು ಮುಂದೆಯೂ ಇರುತ್ತದೆ. ಧರ್ಮ ಮತ್ತು ರಾಜಕಾರಣಕ್ಕೂ ಅರಮನೆಗೂ ಗುರುಮನೆಗೂ ಇರುವ ಸಂಬಂಧ ಇದ್ದಹಾಗೆ, ಗುರುವಿನ ಮಾರ್ಗದರ್ಶನದಲ್ಲಿ ರಾಜ್ಯಭಾರ ಮಾಡಿದರೆ, ಸರ್ವರಿಗೂ ಪ್ರೀಯವಾದ ಮುಂದಿನ ಜನಾಂಗಕ್ಕೆ ದಾರಿ ತೋರುವ ಸುಭೀಕ್ಷೆ ರಾಜ್ಯವಾಗುತ್ತದೆ. ನನಗೆ ಏನು ಸಂಸ್ಕಾರ ಇದೆ ನನ್ನ ಕೈಯಲ್ಲಿ ಅಧಿಕಾರ ಬಂದಾಗ ಅದರ ಆಧಾರದ ಮೇಲೆ ನಾವು ನಿರ್ಣಯ ಮಾಡುತ್ತೇವೆ. ಸಂಸ್ಕಾರ ಆಚರಣೆ ವಿಚಾರಣೆಯಿಂದ ಬರುತ್ತದೆ, ನ್ಯಾಯ ನೀತಿ, ಸತ್ಯ ಒಳಗೊಂಡಿರುವುದೇ ಧರ್ಮ, ಇಂತಹ ವಿಚಾರ ಹಂಚಿಕೊಳ್ಳಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ, ಕಾಶಿ ಜಗದ್ಗುರುಗಳ ಆಶೀರ್ವಾದ ನನ್ನ ಮೇಲೆ ಸದಾ ಇದೆ ಎಂದು ಹೇಳಿದರು.

























