ಹಾವೇರಿ: ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರವು ಹಿಂದೂ ವಿರೋಧಿ ನಿಲುವು ತಳೆದಿದ್ದು, ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್, ಸ್ವಾಮೀಜಿಗಳ ವಿಚಾರದಿಂದ ಹಿಡಿದು ಗುತ್ತಿಗೆದಾರರ ಬಿಲ್ ಪಾವತಿಯವರೆಗೂ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದರು.
“RSS ಸಿದ್ಧಾಂತವೇ ದೇಶದ ಸಿದ್ಧಾಂತ”: ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದ ಸರ್ಕಾರಿ ನೌಕರನ ಅಮಾನತು ಕ್ರಮವನ್ನು ತೀವ್ರವಾಗಿ ಖಂಡಿಸಿದ ಬೊಮ್ಮಾಯಿ, ಸರ್ಕಾರಕ್ಕೆ ಆರ್‌ಎಸ್‌ಎಸ್ ಅನ್ನು ಏನೂ ಮಾಡಲು ಸಾಧ್ಯವಿಲ್ಲ. ಆರ್‌ಎಸ್‌ಎಸ್ ಸಿದ್ಧಾಂತವೇ ಈ ದೇಶದ ಸಿದ್ಧಾಂತ.
ಆರ್‌ಎಸ್‌ಎಸ್ ಯಾವುದೇ ರಾಜಕೀಯ ಸಂಘಟನೆಯಲ್ಲ, ಅದು ಸಾಂಸ್ಕೃತಿಕ ಸಂಘಟನೆ. ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಆರ್‌ಎಸ್‌ಎಸ್ ಸದಸ್ಯರು. ಸರ್ಕಾರಿ ನೌಕರರು ಇಂತಹ ಸಂಘಟನೆಗಳಲ್ಲಿ ಭಾಗವಹಿಸಬಾರದು ಎಂದು ಯಾವ ಕಾನೂನಿನಲ್ಲಿದೆ? ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ನಡೆಯನ್ನು ನಾಗರಿಕರ ಹಕ್ಕುಗಳ ದಮನಕ್ಕೆ ಹೋಲಿಸಿದರು.
‘ಜನಶಕ್ತಿ’ vs ‘ರಾಜ್ಯಶಕ್ತಿ’ ಸಂಘರ್ಷದ ಎಚ್ಚರಿಕೆ: ಕನ್ನೇರಿ ಮಠದ ಸ್ವಾಮೀಜಿಗಳ ಮೇಲೆ ವಿಜಯಪುರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿರುವುದನ್ನು ಉಲ್ಲೇಖಿಸಿದ ಅವರು, “ಉತ್ತರ ಪ್ರದೇಶ, ಬಿಹಾರಗಳಿಂದ ಬಂದು ಪ್ರಚೋದನಕಾರಿ ಭಾಷಣ ಮಾಡುವ ಧರ್ಮಗುರುಗಳಿಗೆ ಯಾವುದೇ ನಿರ್ಬಂಧವಿಲ್ಲ, ಆದರೆ ಸಮಾಜಕ್ಕೆ ಒಳ್ಳೆಯದನ್ನು ಬಯಸುವ ನಮ್ಮ ಸ್ವಾಮೀಜಿಗಳಿಗೆ ನಿರ್ಬಂಧ ಹೇರಲಾಗುತ್ತದೆ. ಇದು ಹೀಗೆಯೇ ಮುಂದುವರಿದರೆ, ಮುಂದೆ ‘ಜನಶಕ್ತಿ’ ಮತ್ತು ‘ರಾಜ್ಯಶಕ್ತಿ’ ನಡುವೆ ದೊಡ್ಡ ಸಂಘರ್ಷ ನಡೆಯಲಿದೆ,” ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
“ಕಮಿಷನ್ ಕೇಳುತ್ತಿರುವುದೇ ಕಗ್ಗಂಟಿಗೆ ಕಾರಣ”: ಗುತ್ತಿಗೆದಾರರ ಬಿಲ್ ಪಾವತಿ ವಿಳಂಬದ ಬಗ್ಗೆ ಮಾತನಾಡಿದ ಅವರು, “ಕೆಲವು ಸಚಿವರು ಅಭಿವೃದ್ಧಿ ಮಾಡಿದ್ದೇವೆ, ಗ್ಯಾರಂಟಿ ಕೊಟ್ಟಿದ್ದೇವೆ ಎನ್ನುತ್ತಾರೆ. ಹಾಗಾದರೆ ಮೂರು ವರ್ಷವಾದರೂ ಅನುದಾನ ಬಿಡುಗಡೆ ಮಾಡಲು ಯಾಕೆ ಸಾಧ್ಯವಾಗಿಲ್ಲ? ಇದರ ಹಿಂದೆ ಕಮಿಷನ್ ಆಟವಿದೆ. ಸರ್ಕಾರದ ಸಚಿವರು ಹೆಚ್ಚಿನ ಕಮಿಷನ್‌ಗೆ ಬೇಡಿಕೆ ಇಡುತ್ತಿರುವುದೇ ಈ ಕಗ್ಗಂಟಿಗೆ ಕಾರಣ. ಗುತ್ತಿಗೆದಾರರು ಮನೆ-ಮಠ ಮಾರಿ ಕಮಿಷನ್ ಕೊಡುವ ಸ್ಥಿತಿ ನಿರ್ಮಾಣವಾಗಿದೆ,” ಎಂದು ನೇರ ಆರೋಪ ಮಾಡಿದರು.