ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸೈಟ್ ಕೊಳ್ಳಬೇಕು ಎಂಬ ಜನರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಗುಡ್‌ನ್ಯೂಸ್ ನೀಡಿದೆ. ನಗರದ ಬಹು ನಿರೀಕ್ಷಿತ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಸುತ್ತಲೂ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದೆ.
ಬೆಂಗಳೂರು ನಗರದಲ್ಲಿ ಹೊಸದಾಗಿ 6 ಬಡಾವಣೆಗಳನ್ನು ನಿರ್ಮಾಣ ಮಾಡಲು ಭೂ ಸ್ವಾಧೀನಕ್ಕೆ ನಗರಾಭಿವೃದ್ಧಿ ಇಲಾಖೆ ಬಿಡಿಎಗೆ ಅನುಮೋದನೆ ನೀಡಿದೆ. ಸುಮಾರು 6217 ಎಕರೆ ಭೂ ಸ್ವಾಧೀನ ಆಗಲಿದ್ದು, ಭೂಮಿ ನೀಡಿದ ಮಾಲೀಕರಿಗೆ 40:60ರ ಅನುಪಾತದಲ್ಲಿ ಪರಿಹಾರ ಸಿಗಲಿದೆ.
ಎಲ್ಲಿ ಬಡಾವಣೆಗಳ ನಿರ್ಮಾಣ?; ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆ ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ ಮೂಲಕ ಮೈಸೂರು ರಸ್ತೆ ತನಕ ಇರಲಿದೆ. ಇದಕ್ಕೆ ಹೊಂದಿಕೊಂಡತೆ 6 ಹೊಸ ಬಡಾವಣೆಗಳು ನಿರ್ಮಾಣವಾಗಲಿದೆ.
ಮಾರಗೊಂಡನಹಳ್ಳಿ, ಹುಲಿಮಂಗಲ, ಬೆಟ್ಟದಾಸನಪುರ, ಎಸ್.ಬಿಂಗೀಪುರ, ಹುಲ್ಲಹಳ್ಳಿ, ಬೇಗೂರು, ಹೊಮ್ಮದೇವನಹಳ್ಳಿ, ಕಮ್ಮನಹಳ್ಳಿ, ಮೈಲಸಂದ್ರ, ಎಲ್ಲೇನಹಳ್ಳಿ, ಹುಲ್ಲಳ್ಳಿ, ಬಿ.ಎಂ.ಕಾವಲ್, ಕಗ್ಗಲಿಪುರ, ಯು.ಎಂ.ಕಾವಲ್, ಅಗರ, ಗುಳಕಮಲೈ, ಒ.ಬಿ.ಚೂಡನಹಳ್ಳಿ, ಉತ್ತರಿ, ದೇವಗೆರೆ, ಗಂಗಸಂದ್ರ, ಗುಡಿಮಾವು ಗ್ರಾಮಗಳಲ್ಲಿ ಬಡಾವಣೆಗಳು ನಿರ್ಮಾಣಗೊಳ್ಳಲಿವೆ.
ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆ ರೂಪಿಸಲಾಗಿದೆ. ಈ ರಸ್ತೆಗಳ ಅಕ್ಕಪಕ್ಕದಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಿ, ಜನರಿಗೆ ಸೈಟುಗಳನ್ನು ಹಂಚುವುದು ಬಿಡಿಎ ಗುರಿಯಾಗಿದೆ.
6 ಬಡಾವಣೆಗಳಲ್ಲಿ ಸುಮಾರು 50 ಸಾವಿರ ನಿವೇಶನಗಳನ್ನು ನಿರ್ಮಾಣ ಮಾಡಲಾಗುತ್ತದೆ. ಸಂಪರ್ಕ ರಸ್ತೆ, ವಾಣಿಜ್ಯ ಚಟುವಟಿಕೆಗಳಿಗೆ ಸಹ ಭೂಮಿಯನ್ನು ರಸ್ತೆಗಾಗಿ ಭೂ ಸ್ವಾಧೀನ ಮಾಡಿಕೊಳ್ಳುವಾಗಲೇ ಸ್ವಾಧೀನ ಮಾಡಿಕೊಳ್ಳಲಾಗುತ್ತದೆ.
ಆರು ಬಡಾವಣೆಗಳಿಗೆ ಸುಮಾರು 6217 ಎಕರೆ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಪ್ರಾಧಿಕಾರ ಯೋಜನಾಬದ್ಧವಾಗಿ ಬಡಾವಣೆಗಳನ್ನು ನಿರ್ಮಾಣ ಮಾಡಿ, ಜನರಿಗೆ ಹಂಚಿಕೆ ಮಾಡಬೇಕು ಎಂದು ನಗರಾಭಿವೃದ್ಧಿ ಇಲಾಖೆ ಹೇಳಿದೆ.
ಬಡಾವಣೆ ನಿರ್ಮಾಣಕ್ಕೆ 22 ಸರ್ವೆ ನಂಬರ್‌ಗಳನ್ನು ಗುರುತಿಸಲಾಗಿದೆ. ಈಗಾಗಲೇ ರೈತರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಭೂಮಿ ನೀಡಿದ ರೈತರಿಗೆ ಅಭಿವೃದ್ಧಿಗೊಳಿಸಿವ ನಿವೇಶನ ನೀಡುವ ಜೊತೆಗೆ ಪರಿಹಾರವನ್ನು ಕಾನೂನಾತ್ಮಕವಾಗಿ ನೀಡಲಾಗುತ್ತದೆ.
ಕರ್ನಾಟಕ ಸರ್ಕಾರ ಬಿಡಿಎ ಮೂಲಕ 73.5 ಕಿ.ಮೀ.ಉದ್ದದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ. ಬಹಳ ಹಿಂದೆಯೇ ರೂಪಿಸಿದ್ದ ಈ ಯೋಜನೆ ವಿವಿಧ ಕಾರಣಕ್ಕೆ ಜಾರಿಯಾಗಿರಲಿಲ್ಲ. ಈಗ ಈ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆಯನ್ನು ನೀಡಿದೆ.
ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು 8 ಪಥದ ರಸ್ತೆ ನಿರ್ಮಾಣ ಮಾಡುವುದು ಯೋಜನೆಯಾಗಿದೆ. ಈಗಾಗಲೇ ಯೋಜನೆ ಹಾದು ಹೋಗುವ ಹಳ್ಳಿಗಳ ಪಟ್ಟಿ ಮಾಡಲಾಗಿದೆ. ಬಿಡಿಎ ಈ ಯೋಜನೆಯ ಭೂ ಸ್ವಾಧೀನಕ್ಕಾಗಿಯೇ 8 ವಿಶೇಷ ಭೂ ಸ್ವಾಧೀನ ಅಧಿಕಾರಿಗಳನ್ನು ನೇಮಕ ಮಾಡಿದೆ.
ಈ ಹಿಂದೆ ಫೆರಿಫೆರಲ್ ರಿಂಗ್ ರೋಡ್-2 ಎಂಬ ಹೆಸರಿನ ಯೋಜನೆಯನ್ನು ಈಗ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಎಂದು ಪುನರ್ ನಾಮಕರಣ ಮಾಡಿ ಜಾರಿಗೊಳಿಸಲಾಗುತ್ತಿದೆ. ಈ ರಸ್ತೆ ಯೋಜನೆಗೆ 2,600 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ ಮತ್ತು ಈ ರಸ್ತೆಯ ಪಕ್ಕದಲ್ಲಿಯೇ ಹೊಸ ಬಡಾವಣೆ ನಿರ್ಮಾಣ ಮಾಡಲಾಗುತ್ತದೆ.
ಹುಡ್ಕೋ ಈ ಯೋಜನೆಗೆ ಬಿಡಿಎಗೆ 27 ಸಾವಿರ ಕೋಟಿ ರೂ. ಸಾಲ ನೀಡಲಿದೆ. ಮೂರು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಬಿಡಿಎ ಯೋಜನೆಯನ್ನು ಜಾರಿಗೊಳಿಸುವ ಕೆಲಸಗಳನ್ನು ಈಗಾಗಲೇ ಆರಂಭಿಸಿದೆ.