ಬೆಂಗಳೂರು: ಬೆಂಗಳೂರು ನಗರದ ಬಹು ನಿರೀಕ್ಷಿತ ಸುರಂಗ ರಸ್ತೆ ಯೋಜನೆಗೆ ಜಾಗತಿಕ ಟೆಂಡರ್ ಕರೆಯಲಾಗಿದೆ. ಹೆಬ್ಬಾಳ-ಸಿಲ್ಕ್ ಬೋರ್ಡ್ ಜಂಕ್ಷನ್ ನಡುವಿನ ಅವಳಿ ಸುರಂಗ ರಸ್ತೆ ಇದಾಗಿದ್ದು, 50 ತಿಂಗಳ ಅವಧಿಯಲ್ಲಿ ಕಾಮಗಾರಿ ನಡೆಸಬೇಕು ಎಂದು ಟೆಂಡರ್‌ನಲ್ಲಿ ತಿಳಿಸಲಾಗಿದೆ.
ಉದ್ಯಾನ ನಗರಿ ಬೆಂಗಳೂರಿನ ಅಭಿವೃದ್ಧಿಗಾಗಿಯೇ ವಿಶೇಷವಾಗಿ ವಿಶೇಷ ಉದ್ದೇಶದ ಸಂಸ್ಥೆ (ಎಸ್‌ಪಿವಿ) ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಸಂಸ್ಥೆ (ಬಿ-ಸ್ಮೈಲ್) ರಚಿಸಲಾಗಿದ್ದು, ಇದರ ವತಿಯಿಂದ ಎರಡು ಪ್ಯಾಕೇಜ್‌ಗಳಡಿ ನಿರ್ಮಾಣ-ಕಾರ್ಯಾಚರಣೆ-ವರ್ಗಾವಣೆ (ಬೂಟ್) ಮಾದರಿಯಲ್ಲಿ ಟೆಂಡರ್ ಆಹ್ವಾನಿಸಲಾಗಿದೆ.
ಹೆಬ್ಬಾಳ ಜಂಕ್ಷನ್‌ನಿಂದ- ಸಿಲ್ಕ್ ಬೋರ್ಡ್ ತನಕ (ಉತ್ತರ-ದಕ್ಷಿಣ ಕಾರಿಡಾರ್) ಮೂರು ಪಥಗಳ ಅವಳಿ ಸುರಂಗ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಗೆ 17,698 ರೂ.ಗಳು ವೆಚ್ಚವಾಗಲಿದೆ ಎಂದು ಟೆಂಡರ್‌ನಲ್ಲಿ ಉಲ್ಲೇಖಿಸಲಾಗಿದೆ.
ಟೆಂಡರ್ ವಿವರಗಳು: ಸುರಂಗ ರಸ್ತೆ ಯೋಜನೆಗೆ ಜಾಗತಿಕ ಟೆಂಡರ್ ಕರೆಯಲಾಗಿದೆ. ಸೆಪ್ಟೆಂಬರ್ 3 ಬಿಡ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಸೆಪ್ಟೆಂಬರ್ 4ರಂದು ಬಿಡ್ ತೆರೆಯಲಾಗುತ್ತದೆ. ಬಿ-ಸ್ಮೈಲ್ ಯಾವುದೇ ಕಾರಣವನ್ನು ನೀಡದೆ ಬಿಡ್ ಅನ್ನು ಒಪ್ಪಿಕೊಳ್ಳವ ಅಥವ ತಿರಸ್ಕರಿಸುವ ಹಕ್ಕನ್ನು ಹೊಂದಿದೆ.
ಈ ರಸ್ತೆ ಯೋಜನೆ ನಿರ್ಮಾಣಕ್ಕೆ ಬಿಬಿಎಂಪಿ, ಬಿ-ಸ್ಮೈಲ್ ನೋಂದಣಿಯಾಗಿರುವ ಗುತ್ತಿಗೆದಾರರು, ಕೇಂದ್ರ ಮತ್ತು ರಾಜ್ಯ ಲೋಕೋಪಯೋಗಿ ಇಲಾಖೆ, ರೈಲ್ವೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೋಂದಣಿಯಾಗಿರುವ ಗುತ್ತಿಗೆದಾರರು ಬಿಡ್ ಸಲ್ಲಿಸಬಹುದು.
ಉತ್ತರ-ದಕ್ಷಿಣ ಕಾರಿಡಾರ್ ಯೋಜನೆ ಉದ್ದ 16.745 ಕಿ. ಮೀ.ಗಳು. ಪ್ಯಾಕೇಜ್-1 ಹೆಬ್ಬಾಳ ಎಸ್ಟೀಮ್ ಮಾಲ್‌ನಿಂದ ಶೇಷಾದ್ರಿ ರಸ್ತೆ ರೇಸ್‌ಕೋರ್ಸ ಜಂಕ್ಷನ್ ತನಕ 8.748 ಕಿ. ಮೀ. ರಸ್ತೆ ನಿರ್ಮಾಣ. ಅಂದಾಜು ವೆಚ್ಚ 8,770 ಕೋಟಿ ರೂ.ಗಳು.
ಪ್ಯಾಕೇಜ್-2ರಲ್ಲಿ 7.997 ಕಿ. ಮೀ. ರಸ್ತೆಯನ್ನು ಶೇಷಾದ್ರಿ ರಸ್ತೆ ರೇಸ್ ಕೋರ್ಸ್ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ತನಕ ನಿರ್ಮಾಣ ಮಾಡಲಾಗುತ್ತದೆ. ಅಂದಾಜು ವೆಚ್ಚ 8,928 ಕೋಟಿ ರೂ.ಗಳು.
ಸುರಂಗ ರಸ್ತೆ ನಿರ್ಮಾಣದ ವಿಚಾರದಲ್ಲಿ ವಿರೋಧ ಪಕ್ಷವಾದ ಬಿಜೆಪಿ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿದೆ. ಆದರೆ ನಗರದ ಸಂಚಾರ ಸಮಸ್ಯೆ ಬಗೆಹರಿಸಲು ಇಂತಹ ಯೋಜನೆ ಅಗತ್ಯವಿದೆ ಎಂದು ಕಾಂಗ್ರೆಸ್ ಸಮರ್ಥನೆ ನೀಡಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, “ಸುರಂಗ ರಸ್ತೆ ಯೋಜನೆ ಹಣ ಲೂಟಿ ಮಾಡುವ ಯೋಜನೆ ಎಂದು ದೂರಿದ್ದರು. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಅನುಷ್ಠಾನ ಮಾಡಲು ಬಿಜೆಪಿ ಬಿಡುವುದಿಲ್ಲ” ಎಂದು ಹೇಳಿದ್ದರು.
“ಕಪ್ಪುಪಟ್ಟಿಗೆ ಸೇರಿದ ಕಂಪನಿಯಿಂದ ಸುರಂಗ ರಸ್ತೆ ಯೋಜನೆ ಡಿಪಿಆರ್ ತಯಾರು ಮಾಡಲಾಗಿದೆ. ಇದಕ್ಕಾಗಿಯೇ 9.5 ಕೋಟಿ ಖರ್ಚು ಮಾಡಲಾಗಿದೆ. ನಮ್ಮ ಮೆಟ್ರೋಗೆ ಸಂಬಂಧಿಸಿದ ಯೋಜನೆಯನ್ನು ಕಟ್, ಕಾಪಿ ಮಾಡಿ ಸುರಂಗ ಮಾರ್ಗ ಯೋಜನೆ ಎಂದು ಹೇಳಲಾಗಿದ್ದು, ಇದು ಕಾಂಗ್ರೆಸ್‌ನ ಜೇಬು ತುಂಬಿಸುವ ಯೋಜನೆ” ಎಂದು ಟೀಕಿಸಿದ್ದರು.
ಕೇವಲ ಕಾರುಗಳು ಮಾತ್ರ ಸಂಚಾರ ನಡೆಸಲು ಮಾಡುತ್ತಿರುವ ಈ ಸುರಂಗ ರಸ್ತೆಯ ಡಿಪಿಆರ್‌ನಲ್ಲಿಯೇ ಹಲವು ದೋಷಗಳಿವೆ. ಡಿಪಿಆರ್ ಮತ್ತು ಕಾರ್ಯ ಸಾಧ್ಯತಾ ವರದಿ ತಯಾರಿಕೆಯಲ್ಲಿಯೇ ಹಲವಾರು ಲೋಪದೋಷಗಳಿದ್ದು, ಅವ್ಯವಹಾರ ಕಂಡುಬರುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಸುರಂಗ ರಸ್ತೆಗೆ ಟೋಲ್ ಶುಲ್ಕ ಇರುತ್ತದೆ ಎಂದು ಈಗಾಗಲೇ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ ಬಸ್‌ಗಳ ಕೊರತೆ ಇದೆ, ಉಪ ನಗರ ರೈಲು ಯೋಜನೆ ನೆನೆಗುದಿಗೆ ಬಿದ್ದಿದೆ. ಮೆಟ್ರೋ ನಿರ್ಮಾಣ ಕಾರ್ಯ ವಿಳಂಬವಾಗುತ್ತಿದೆ. ಆದರೆ ಸರ್ಕಾರ ಸುರಂಗ ಮಾರ್ಗ ರಸ್ತೆ ಮಾಡಲು ಹೊರಟಿದೆ ಎಂದು ಬಿಜೆಪಿ ದೂರಿದೆ.