ಶಿವಮೊಗ್ಗ: ಗಣೇಶ ಚರ್ತುರ್ಥಿಗೆ ಡ್ರೋನ್, ಸಿಸಿಟಿವಿ ಕಣ್ಗಾವಲು

0
100

ಶಿವಮೊಗ್ಗ, ಆಗಸ್ಟ್ 14: ಶಿವಮೊಗ್ಗ ಜಿಲ್ಲೆಯಲ್ಲಿ ಗಣೇಶ ಚತುರ್ಥಿ 2025 ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶಾಂತಿ, ಸೌಹಾರ್ದಯುತವಾಗಿ ಸಡಗರದಿಂದ ಹಬ್ಬಗಳನ್ನು ಆಚರಿಸಬೇಕು ಎಂದು ಜಿಲ್ಲಾಡಳಿತ ಕರೆ ನೀಡಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಮ್ಮ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ಜಿಲ್ಲೆಯಾದ್ಯಂತ ಆಗಸ್ಟ್ 27ರಂದು ನಡೆಯಲಿರುವ ಗಣೇಶ ಚತುರ್ಥಿ ಮತ್ತು ಸೆಪ್ಟಂಬರ್ 5ರಂದು ನಡೆಯಲಿರುವ ಈದ್ ಮಿಲಾದ್ ಹಬ್ಬಗಳನ್ನು ಸರ್ವಧರ್ಮಗಳ ಬಂಧುಗಳು ಸೌಹಾರ್ದಯುತವಾಗಿ ಸಡಗರ ಸಂಭ್ರಮಗಳಿಂದ ಆಚರಿಸಬೇಕು” ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಹೇಗಿದೆ ಹಬ್ಬಕ್ಕೆ ಭದ್ರತೆ?: ಈ ಹಬ್ಬಗಳ ಸಂದರ್ಭದಲ್ಲಿ ಬೈಕ್ ಜಾಥಾ ನಡೆಸದಂತೆ, ಡಿಜೆ ಧ್ವನಿವರ್ಧಕಗಳನ್ನು ಬಳಸಿ ಮೆರವಣಿಗೆ ಮಾಡದಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಅಲ್ಲದೇ ವಿಶೇಷವಾಗಿ ಗಣಪತಿ ವಿಸರ್ಜನಾ ಸ್ಥಳಗಳಲ್ಲಿ ತೆಪ್ಪ ಇಟ್ಟುಕೊಂಡಿರಬೇಕು. ನೀರಿಗಿಳಿಯುವವರು ಈಜು ಬಲ್ಲವರಾಗಿದ್ದು, 3-4 ಸಂಖ್ಯೆಯ ಜನ ನೀರಿಗೆ ಇಳಿಯಬಾರದು. ಅಲ್ಲದೇ ಲೈಫ್‌ ಜಾಕೆಟ್‌ಗಳನ್ನು ಕಡ್ಡಾಯವಾಗಿ ಧರಿಸಿರಬೇಕು ಎಂದು ಸೂಚಿಸಲಾಗಿದೆ.

ಗಣಪತಿ ಅಥವಾ ಈದ್ ಮಿಲಾದ್ ಹಬ್ಬದ ಸಂಭ್ರಮದ ಮೆರವಣಿಗೆಗಳು ಅತ್ಯಂತ ಶಾಂತಿಯುತವಾಗಿದ್ದು, ಮತ್ತೊಂದು ಸಮುದಾಯ, ಧರ್ಮ, ಜನಾಂಗಕ್ಕೆ ಅಥವಾ ಅವರ ಭಾವನೆಗಳಿಗೆ ಧಕ್ಕೆ ಉಂಟಾಗದಂತಿರಲಿ ಎಂದು ಸಲಹೆ ನೀಡಲಾಗಿದೆ.

ಮೆರವಣಿಗೆ ನಡೆಯುವ ಪ್ರಮುಖ ಬೀದಿಗಳಲ್ಲಿ, ಸರ್ಕಲ್‌ಗಳಲ್ಲಿ ಸಾಕಷ್ಟು ಬೀದಿದೀಪಗಳನ್ನು ಅಳವಡಿಸಲು ಸೂಚಿಸಲಾಗಿದೆ. ಅಲ್ಲದೇ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅಗತ್ಯವಿರುವಲ್ಲಿ ಡ್ರೋಣ್ ಕಣ್ಗಾವಲು ಇಡಲಾಗುತ್ತದೆ.

ಗಣಪತಿ ವಿಸರ್ಜನಾ ಸ್ಥಳಗಳಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಕೆರೆ, ಕಟ್ಟೆ-ಕಾಲುವೆಗಳು ಸುರಕ್ಷಿತ ತಾಣಗಳಾಗಿರುವ ಬಗ್ಗೆ ಹಾಗೂ ಅಗತ್ಯವಿರುವಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ಈ ಬಗ್ಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಲಾಗಿದೆ.

ಎಸ್‌ಪಿ ಜಿ.ಕೆ.ಮಿಥುನ್ ಮಾತನಾಡಿ, “ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಧರ್ಮಗಳ ಹಬ್ಬ ಆಚರಣೆಗಳು ಶಾಂತಿ-ಸೌಹಾರ್ದಯುತವಾಗಿ ನಡೆಯುವಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳು ಸ್ಥಳೀಯ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸಬೇಕು” ಎಂದರು.

“ಉತ್ಸವ, ಮೆರವಣಿಗೆಗಳು ನಡೆಯುವ ಸ್ಥಳಗಳಲ್ಲಿ ಸಿಸಿ ಕ್ಯಾಮರಾ, ಬೀದಿದೀಪ ಅಳವಡಿಕೆ ಹಾಗೂ ರಾಜಬೀದಿಗಳ ಸ್ವಚ್ಚತೆ ಹಾಗೂ ಕಲ್ಲುಮಣ್ಣುಗಳ ರಾಶಿಗಳು ಇಲ್ಲದಿರುವಂತೆ ಗಮನಹರಿಸಬೇಕು. ಆರೋಗ್ಯ ಇಲಾಖೆಯಿಂದ ಅಂಬುಲೆನ್ಸ್‌ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಶುದ್ಧ ಕುಡಿಯುವ ನೀರಿನ ಸ್ಥಾವರಗಳನ್ನು ಅಗತ್ಯವಿರುವಲ್ಲಿ ಸ್ಥಾಪಿಸುವಂತೆ ಸೂಚಿಸಲಾಗಿದೆ. ಈ ಕಾರ್ಯದಲ್ಲಿ ಪೊಲೀಸ್ ಇಲಾಖೆ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡಲಿದೆ” ಎಂದು ಹೇಳಿದರು.

“ಶಿವಮೊಗ್ಗ, ಭದ್ರಾವತಿ ಸೇರಿದಂತೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲು ಸ್ಥಳೀಯ ಆಡಳಿತ ಗಮನಹರಿಸಬೇಕು. ಸಂಘ-ಸಂಸ್ಥೆಗಳ ಹಲವು ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಸ್ಥಳೀಯ ಸಂಸ್ಥೆಗಳು ನೀಡಿರುವ ಪ್ರಚಾರ ಸಾಮಗ್ರಿಗಳನ್ನು ತಕ್ಷಣದಿಂದಲೇ ತೆರವುಗೊಳಿಸಲು ಸೂಚಿಸಬೇಕು. ಸರ್ಕಾರಿ ಸ್ವತ್ತುಗಳಿಗೆ ಹಾನಿ ಉಂಟಾದಲ್ಲಿ ಕಾರ್ಯಕ್ರಮಗಳ ಆಯೋಜಕರೇ ಹೊಣೆಗಾರರಾಗಿದ್ದು, ಅಲ್ಲಿನ ನಷ್ಟವನ್ನು ಭರಿಸಿಕೊಡಲು ಬದ್ದರಾಗಿರಬೇಕು” ಎಂದು ಎಚ್ಚರಿಸಿದರು.

“ಈ ಹಬ್ಬಗಳ ಆಚರಣೆಯ ದಿನಗಳಲ್ಲಿ, ಮೆರವಣಿಗೆ ಸಾಗುವಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂ ಅಧಿಕಾರಿಗಳು ವಿಶೇಷ ಗಮನಹರಿಸಬೇಕು. ಗಣಪತಿ ಪ್ರತಿಷ್ಠಾಪನೆಗಾಗಿ ಏಕಗವಾಕ್ಷಿ ಸೌಲಭ್ಯದ ಮೂಲಕ ನಿಬಂಧನೆಗಳಿಗೊಳಪಟ್ಟು ಅನುಮತಿ ನೀಡಲು ಸೂಚಿಸಲಾಗಿದೆ” ಎಂದು ಎಸ್ಪಿ ತಿಳಿಸಿದರು.

ಥರ್ಮೋಕೋಲ್, ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಲ್ಪಟ್ಟ ಗಣೇಶನ ವಿಗ್ರಹಗಳನ್ನು ಪೂಜೆಗೆ ಬಳಸದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಇವು ನೈಸರ್ಗಿಕವಾಗಿ ಜೈವಿಕವಾಗಿ ವಿಘಟನೀಯವಲ್ಲದವು ಮತ್ತು ಅವುಗಳು ದೀರ್ಘಕಾಲದವರೆಗೆ ನೀರಿನ ಮೇಲೆ ತೇಲುತ್ತಲೇ ಇರುತ್ತವೆ, ಇದರಿಂದಾಗಿ ಜಲಮೂಲಗಳು ಮತ್ತು ಜಲ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ವಿಗ್ರಹಗಳನ್ನು ಹೆಚ್ಚಾಗಿ ಸೀಸ ಮತ್ತು ಪಾದರಸದಿಂದ ಕೂಡಿದ ಬಣ್ಣಗಳಿಂದ ಅಲಂಕರಿಸಲಾಗುತ್ತದೆ. ಇದು ಜಲಮೂಲಗಳ ಸಸ್ಯ ಮತ್ತು ಪ್ರಾಣಿಗಳನ್ನು ನಾಶಮಾಡುವ ನಿರಂತರ ಪ್ರಕ್ರಿಯೆಗೆ ಕಾರಣವಾಗುತ್ತದೆ.

ಜೇಡಿಮಣ್ಣಿನ ಗಣೇಶ ವಿಗ್ರಹಗಳನ್ನು ನೈಸರ್ಗಿಕ ಮಣ್ಣು ಮತ್ತು ಸರಳ ಜೇಡಿಮಣ್ಣಿನಿಂದ ತಯಾರಿಸಲಾಗುತ್ತದೆ. ನೈಸರ್ಗಿಕ ರಾಸಾಯನಿಕಗಳಿಂದ ಅಲಂಕರಿಸಲಾಗುತ್ತದೆ. ಈ ವಿಗ್ರಹಗಳನ್ನು ನೀರಿನಲ್ಲಿ ಮುಳುಗಿಸಿದಾಗ ಅಥವಾ ಪ್ರಕೃತಿಗೆ ಬಿಟ್ಟಾಗ, ಅವು ಯಾವುದೇ ವಿಷಕಾರಿ ವಸ್ತುಗಳನ್ನು ಬಿಡುಗಡೆ ಮಾಡದೆ ಕರಗುತ್ತವೆ. ಪ್ರಕೃತಿ ಪರಿಸರ ಸ್ನೇಹಿ ಜೇಡಿಮಣ್ಣಿನ ಗಣಪತಿ ವಿಗ್ರಹಗಳನ್ನು ಸ್ಥಳೀಯ ಕುಶಲಕರ್ಮಿಗಳಿಂದ ಪಡೆಯಲಾಗುತ್ತದೆ, ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯನ್ನಾಗಿ ಆಚರಿಸಲು ಎಲ್ಲರೂ ಸಂಕಲ್ಪ ಮಾಡೋಣ ಎಂದು ಜಿಲ್ಲಾಧಿಕಾರಿಗಳು ಕರೆ ನೀಡಿದ್ದಾರೆ.

Previous articleಶಿಕ್ಷಣ ಇಲಾಖೆಯ ಹತ್ತಾರು ಸಮಸ್ಯೆಗೆ ಶೀಘ್ರ ಪರಿಹಾರ
Next articleಬೆಂಗಳೂರು: ಏರ್‌ಪೋರ್ಟ್‌ಗೆ ಬಿಎಂಟಿಸಿ ಎಸಿ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭ

LEAVE A REPLY

Please enter your comment!
Please enter your name here