ಗದಗ: ರೈಲು ಯೋಜನೆಗಳು ಕೇವಲ ಪ್ರಯಾಣಿಕರ ಸಂಚಾರ ಮಾತ್ರವಲ್ಲದೆ ಸರಕು ಸಾಗಾಣಿಕೆ ಹಾಗೂ ಸ್ಥಳೀಯ ಮತ್ತು ರಾಜ್ಯದ ಆರ್ಥಿಕ ಚಟುವಟಿಕೆ ಮೇಲ್ದರ್ಜೆಗೇರಿಸಲು ಸಹಾಯವಾಗುವ ಯೋಜನೆಗಳಾಗಿವೆ.
ಉತ್ತರ ಕರ್ನಾಟಕದ ಗದಗ-ಯಲವಿಗಿ ರೈಲ್ವೆ ಯೋಜನೆ ಬಹು ದಿನಗಳಿಂದ ನೀರಿಕ್ಷೆಗಳನ್ನು ಮೂಡಿಸಿವೆ. ಯೋಜನೆಗೆ ಈ ಹಿಂದೆಯೇ ಅನುಮತಿ ಸಿಕ್ಕಿದೆ. ಆದರೆ ಕಾಮಗಾರಿ ಆರಂಭವಾಗಿಲ್ಲ.
ಈ ಕುರಿತಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ರನ್ನು ಗದಗ-ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದಾರೆ. ಗದಗ – ಯಲವಿಗಿ ರೈಲು ಯೋಜನೆಯನ್ನು ಆದಷ್ಟು ಬೇಗ ಪ್ರಾರಂಭಿಸುವಂತೆ ಮನವಿ ಮಾಡಿದ್ದಾರೆ.
ಗದಗ ಯಲವಿಗಿ ರೈಲ್ವೆ ಯೋಜನೆ ಹಾವೇರಿ-ಗದಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತಿದ್ದು, ಸುಮಾರು 58 ಕಿ.ಮೀ. ಉದ್ದದ ಈ ಯೋಜನೆಗೆ 2017-18ರಲ್ಲಿ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಈ ಯೋಜನೆ ಗದಗ-ಹಾವೇರಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಷ್ಟೇ ಅಲ್ಲದೇ ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಸಂಪರ್ಕ ಕಲ್ಪಿಸುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಯಾಣಿಕರ ಸಂಚಾರ ಹಾಗೂ ಸರಕು ಸಾಗಾಣಿಕೆಗೆ ಅನುಕೂಲವಾಗುವುದರಿಂದ ಕರ್ನಾಟಕದ ಆರ್ಥಿಕ ಚಟುವಟಿಕೆಗಳನ್ನು ಮೇಲ್ದರ್ಜೆಗೇರಿಸಲು ಸಹಾಯವಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ.
ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು 50/50 ಅನುಪಾತದಲ್ಲಿ ಹಣಕಾಸು ಒದಗಿಸುತ್ತಿದ್ದು, ಯೋಜನೆಗೆ ಅಗತ್ಯವಿರುವ ಭೂಮಿಯನ್ನು ರಾಜ್ಯ ಸರ್ಕಾರ ಒದಗಿಸಲಿದೆ. ಕರ್ನಾಟಕ ಸರ್ಕಾರ ಈಗಾಗಲೇ ತನ್ನ ಆದೇಶ ನಂ ಐಡಿಡಿ/91/ಎನ್ಎಸ್ಡಬ್ಲ್ಯು/2022 ರಲ್ಲಿ ದಿನಾಂಕ 18-04-2022 ರಂದು (ನಾನು ಮುಖ್ಯಮಂತ್ರಿ ಇದ್ದಾಗ) ಯೋಜನೆಯ ಶೇ 50ರಷ್ಟು ಯೋಜನಾ ವೆಚ್ಚವನ್ನು ಹಾಗೂ ಉಚಿತ ಭೂಮಿ ಕೊಡುವುದಾಗಿ ತಿಳಿಸಲಾಗಿದೆ.
ದಿನಾಂಕ 17-12-2022 ರಂದು ಪರಿಷ್ಕೃತ ಎಫ್ಎಸ್ಎಲ್ ಅಂದಾಜು 1.45 ಕೋಟಿ ವೆಚ್ಚದ ಟೆಂಡರ್ ಕರೆಯಲಾಗಿದ್ದು, ಸರ್ವೆ ಕಾರ್ಯ ಮುಕ್ತಾಯವಾಗಿದೆ. ಆಗಸ್ಟ್ 2025ರ ಅಂತ್ಯದೊಳಗೆ ಪರಿಷ್ಕೃತ ಡಿಪಿಆರ್ ಸಿದ್ಧವಾಗಲಿದೆ. ಆದ್ದರಿಂದ ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ತಕ್ಷಣವೇ ಸಮನ್ವಯ ಸಾಧಿಸಿ ಡಿಪಿಆರ್ ಪಡೆಯುವಂತೆ ನೈರುತ್ಯ ರೈಲ್ವೆ ವಲಯ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದಾರೆ.
ಗದಗ-ಯಲವಿಗಿ ಯೋಜನೆಯ ಮೊದಲ ಹಂತದ ಯೋಜನಾ ವೆಚ್ಚ ಸುಮಾರು 650 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಂಡು, ಅದೇ ಸಮಯದಲ್ಲಿ ಕರ್ನಾಟಕ ಸರ್ಕಾರದ ಅಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆಯನ್ನೂ ಕೈಗೊಂಡು ಪ್ರಸ್ತುತ 2025-26 ನೇ ಆರ್ಥಿಕ ವರ್ಷದಲ್ಲಿ ಯೋಜನೆ ಕಾರ್ಯಾರಂಭವಾಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ತಾವು ಅಗತ್ಯ ಕ್ರಮ ಕೈಗೊಳ್ಳುತ್ತೀರಿ ಎಂಬ ಭರವಸೆ ಇದೆ ಎಂದು ಮನವಿಯಲ್ಲಿ ಸಂಸದರು ಸಚಿವರಿಗೆ ತಿಳಿಸಿದ್ದಾರೆ.