ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿವೆ. ಕರ್ನಾಟಕ ಸರ್ಕಾರ ಸಬ್ ಅರ್ಬನ್ ರೈಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಈಗ ನಗರಕ್ಕೆ ಆರ್‌ಆರ್‌ಟಿಎಸ್ ಬೇಕು ಎಂದು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಡಲಾಗಿದೆ.
ಭಾನುವಾರ ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮುಂದೆ ಈ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಡಿಕೆ ಇಟ್ಟಿದ್ದಾರೆ. ಆರ್‌ಆರ್‌ಟಿಎಸ್ ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ರೀಜನಲ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಆರ್‌ಆರ್‌ಟಿಎಸ್) ವ್ಯವಸ್ಥೆಯ ರೈಲುಗಳಿಗೆ ‘ನಮೋ ಭಾರತ್’ ರೈಲು ಎಂದು ಕೇಂದ್ರ ಸರ್ಕಾರ ಮರು ನಾಮರಣ ಮಾಡಿದೆ. ಈ ಮಾದರಿಯ 5 ಕಾರಿಡಾರ್‌ಗಳಿಗೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಕೆ ಮಾಡಿದೆ.
ಒಟ್ಟು 5 ಕಾರಿಡಾರ್‌ಗಳು: ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ದೆಹಲಿ ಮೇಲಿನ ಒತ್ತಡ ಕಡಿಮೆ ಮಾಡಲು ಅಕ್ಕಪಕ್ಕದ ರಾಜ್ಯಗಳಲ್ಲಿ ಸ್ಯಾಟಲೈಟ್ ಟೌನ್‌ಗಳ ನಿರ್ಮಾಣದ ಯೋಜನೆ ರೂಪಿಸಿದೆ.
ದೆಹಲಿ ಮೀರತ್ ಸೆಕ್ಷನ್‌ನಲ್ಲಿ ಮಾಡಿರುವ ಮಾದರಿಯಲ್ಲಿಯೇ ಆರ್‌ಆರ್‌ಟಿಎಸ್ ವ್ಯವಸ್ಥೆ ಬೆಂಗಳೂರು ನಗರಕ್ಕೆ ಬೇಕು ಎಂದು ಕರ್ನಾಟಕ ಸರ್ಕಾರ ಮನವಿಯಲ್ಲಿ ಹೇಳಿದೆ. ಬೆಂಗಳೂರು ನಗರ ಭಾರತ ಮಾತ್ರವಲ್ಲ ಏಷ್ಯಾದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ ಎಂದು ಹೇಳಿದೆ.
ಆದ್ದರಿಂದ ನಗರಕ್ಕೆ 5 ಕಾರಿಡಾರ್ ಆರ್‌ಆರ್‌ಟಿಎಸ್ ವ್ಯವಸ್ಥೆ ಬೇಕು ಎಂದು ಕರ್ನಾಟಕ ಸರ್ಕಾರ ಮನವಿ ಮಾಡಿದೆ. ಈ ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಾಗಿದೆ.
5 ಕಾರಿಡಾರ್‌ಗಳು
- ಬೆಂಗಳೂರು-ಬಿಡದಿ-ಮೈಸೂರು. 145 ಕಿ.ಮೀ. ನಮೋ ಭಾರತ್ ರೈಲಿನಲ್ಲಿ ಸುಮಾರು 102 ನಿಮಿಷದ ಪ್ರಯಾಣ
- ಬೆಂಗಳೂರು-ಹಾರೋಹಳ್ಳಿ-ಕನಕಪುರ. 60 ಕಿ.ಮೀ. ನಮೋ ಭಾರತ್ ರೈಲಿನಲ್ಲಿ ಸುಮಾರು 42 ನಿಮಿಷದ ಪ್ರಯಾಣ
- ಬೆಂಗಳೂರು-ನೆಲಮಂಗಲ-ತುಮಕೂರು. 60 ಕಿ.ಮೀ. ನಮೋ ಭಾರತ್ ರೈಲಿನಲ್ಲಿ 42 ನಿಮಿಷದ ಪ್ರಯಾಣ
- ಬೆಂಗಳೂರು-ಏರ್‌ಪೋರ್ಟ್-ಚಿಕ್ಕಬಳ್ಳಾಪುರ. 64 ಕಿ.ಮೀ. ನಮೋ ಭಾರತ್ ರೈಲಿನಲ್ಲಿ ಸುಮಾರು 46 ನಿಮಿಷದ ಪ್ರಯಾಣ
- ಬೆಂಗಳೂರು-ಹೊಸಕೋಟೆ-ಕೋಲಾರ. 65 ಕಿ.ಮೀ. ನಮೋ ಭಾರತ್ ರೈಲಿನಲ್ಲಿ ಸುಮಾರು 46 ನಿಮಿಷದ ಪ್ರಯಾಣ
ದೆಹಲಿ-ಮೀರತ್ ನಡುವಿನ ರೀಜನಲ್ ರ‍್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಆರ್‌ಆರ್‌ಟಿಎಸ್) ವ್ಯವಸ್ಥೆ ದೇಶದ ಮೊದಲ ಈ ಮಾದರಿ ವ್ಯವಸ್ಥೆಯಾಗಿದೆ. 82 ಕಿ.ಮೀ.ಉದ್ದದ ಮಾರ್ಗದಲ್ಲಿ 2023 ಅಕ್ಟೋಬರ್‌ನಲ್ಲಿ 55 ಕಿ.ಮೀ.ರೈಲು ಸಂಚಾರ ಆರಂಭವಾಗಿದೆ. ಈ ಮಾರ್ಗವನ್ನು ಗಂಟೆಗೆ ರೈಲು 160 ಕಿ.ಮೀ.ವೇಗದಲ್ಲಿ ಸಾಗುವಂತೆ ನಿರ್ಮಾಣ ಮಾಡಲಾಗಿದೆ. ಸದ್ಯ ಗಂಟೆಗೆ ರೈಲು 90 ಕಿ.ಮೀ.ವೇಗದಲ್ಲಿ ಸಂಚಾರವನ್ನು ನಡೆಸುತ್ತಿದೆ.
2025ರ ಜನವರಿಯಲ್ಲಿ ಎನ್‌ಸಿಆರ್‌ಟಿಸಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ 4 ಆರ್‌ಆರ್‌ಟಿಎಸ್ ಕಾರಿಡಾರ್ ಅಗತ್ಯವಿದೆ ಎಂದು ಹೇಳಿತ್ತು. ಇವುಗಳಲ್ಲಿ ಬೆಂಗಳೂರು-ಹೊಸಕೋಟೆ-ಕೋಲಾರ, ಬೆಂಗಳೂರು-ಮೈಸೂರು, ಬೆಂಗಳೂರು-ತುಮಕೂರು, ಬೆಂಗಳೂರು-ಹೊಸೂರು-ಕೃಷ್ಣಗಿರಿ-ಧರ್ಮಪುರಿ ಸೇರಿತ್ತು.