Home ನಮ್ಮ ಜಿಲ್ಲೆ ಸಹಕಾರ ರಂಗದಿಂದ ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆ: ಶಾಸಕ ಟಿ. ರಘುಮೂರ್ತಿ

ಸಹಕಾರ ರಂಗದಿಂದ ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆ: ಶಾಸಕ ಟಿ. ರಘುಮೂರ್ತಿ

0

ಚಳ್ಳಕೆರೆ: ಸಹಕಾರ ರಂಗವು ದೇಶದ ಗ್ರಾಮೀಣ ಜನರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡುವ ಮೂಲಕ ಅವರಿಗೆ ಶಕ್ತಿಯನ್ನು ತುಂಬಿದೆ. ದೇಶದ ಸಮಗ್ರ ಅಭಿವೃದ್ಧಿಗೆ ಸಹಕಾರ ಕ್ಷೇತ್ರವು ಅಪಾರ ಕೊಡುಗೆ ನೀಡುತ್ತಿದೆ ಎಂದು ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು.

ನಗರದ ಶ್ರೀ ಸಾಯಿ ಮಂದಿರದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸುಮಾರು ಎಂಟೂವರೆ ಲಕ್ಷಕ್ಕೂ ಅಧಿಕ ಸಹಕಾರ ಸಂಘಗಳಿದ್ದು, ಇವೆಲ್ಲವೂ ದೇಶ ಕಟ್ಟುವ ಕಾಯಕದಲ್ಲಿ ನಿರತವಾಗಿವೆ. ಸಹಕಾರಿ ಸಂಘಗಳಿಗೆ ನೂರಾರು ವರ್ಷಗಳ ಇತಿಹಾಸವಿದ್ದು, ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರೂ ಅವರು ಈ ಕ್ಷೇತ್ರದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವು ರೈತರಿಗೆ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಅನ್ನದಾತರ ಬೆನ್ನೆಲುಬಾಗಿ ನಿಂತಿದೆ. ಸಹಕಾರಿ ಸಪ್ತಾಹದಂತಹ ಕಾರ್ಯಕ್ರಮಗಳು ಸಹಕಾರ ತತ್ವಗಳನ್ನು ಜನರಿಗೆ ತಲುಪಿಸಲು ಸಹಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಬಿ.ಸಿ. ಸಂಜೀವಮೂರ್ತಿ ಮಾತನಾಡಿ, ಕಳೆದ ಒಂದು ದಶಕದಲ್ಲಿ ಚಳ್ಳಕೆರೆ ಕ್ಷೇತ್ರ ಕಂಡಿರುವ ಅಭಿವೃದ್ಧಿಯ ಸಂಪೂರ್ಣ ಕೀರ್ತಿ ಶಾಸಕ ರಘುಮೂರ್ತಿ ಅವರಿಗೆ ಸಲ್ಲುತ್ತದೆ. ಪ್ರಸ್ತುತ ಶಾಸಕರು ಡಿಸಿಸಿ ಬ್ಯಾಂಕ್‌ನಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಸಹಕಾರಿ ರಂಗವನ್ನು ಪ್ರತಿನಿಧಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ, ಎಂದು ಶ್ಲಾಘಿಸಿದರು.

ಇದೇ ವೇಳೆ, ಸಮಸ್ತ ಸಹಕಾರಿಗಳ ಪರವಾಗಿ ಶಾಸಕರಲ್ಲಿ ವಿಶೇಷ ಮನವಿಯೊಂದನ್ನು ಮುಂದಿಟ್ಟ ಅವರು,ಸಹಕಾರಿಗಳ ಅನುಕೂಲಕ್ಕಾಗಿ ನಗರದಲ್ಲಿ ಒಂದು ಸುಸಜ್ಜಿತವಾದ ‘ಸಹಕಾರಿ ಭವನ’ ನಿರ್ಮಿಸುವ ಅಗತ್ಯವಿದೆ. ಶಾಸಕರು ಇತ್ತ ಗಮನಹರಿಸಿ, ಭವನ ನಿರ್ಮಾಣಕ್ಕೆ ಸೂಕ್ತವಾದ ಜಾಗವನ್ನು ಮಂಜೂರು ಮಾಡಿಸಿ, ಅಗತ್ಯ ಅನುದಾನವನ್ನು ಒದಗಿಸಿಕೊಡಬೇಕು,ಎಂದು ಕೋರಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹೆಚ್.ಎನ್. ತಿಪ್ಪೇಸ್ವಾಮಿ, ಉಪಾಧ್ಯಕ್ಷ ರವಿಕುಮಾರ್, ಸಹಕಾರ ರತ್ನ ಪುರಸ್ಕೃತರಾದ ಆರ್. ರಾಮರೆಡ್ಡಿ ಹಾಗೂ ಆರ್. ಮಲ್ಲೇಶಪ್ಪ ನಿರ್ದೇಶಕರಾದ ಜಗ್ಗಣ್ಣ, ಅಜ್ಜಪ್ಪ, ಮಂಜಣ್ಣ, ಚನ್ನಬಸಪ್ಪ, ಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್ ಉಲ್ಲಾ ಷರೀಫ್, ಪ್ರಮುಖರಾದ ದಿಲೀಪ್, ಶೇಖರ್, ಅಂಜಿನಮೂರ್ತಿ, ಮಲ್ಲಿಕಾರ್ಜುನ ಸೇರಿದಂತೆ ಸಹಕಾರ ಇಲಾಖೆಯ ಅಧಿಕಾರಿಗಳು, ಸಂಘದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version