Namma Metro: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಡಿಕೆಶಿ ರೌಂಡ್ಸ್

0
122

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ನಮ್ಮ ಮೆಟ್ರೋ ಮಾರ್ಗ ಉದ್ಘಾಟನೆಗೆ ತಯಾರಾಗಿದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 10ರಂದು ಉದ್ಘಾಟಿಸಲಿದ್ದಾರೆ.

ಉಪ ಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಮಂಗಳವಾರ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಪರಿಶೀಲನೆ ನಡೆಸಿದರು. ಮೆಟ್ರೋದಲ್ಲಿ ಸಂಚಾರವನ್ನು ನಡೆಸಿದರು.

ಈ ಕುರಿತು ಡಿ.ಕೆ.ಶಿವಕುಮಾರ್ ಪೋಸ್ಟ್ ಹಾಕಿದ್ದಾರೆ. ‘ಬೆಂಗಳೂರು ದಕ್ಷಿಣ ಭಾಗದ ಜನರ ಕನಸು ನನಸು. ಆಗಸ್ಟ್​ 10ರಂದು ಬಹು ನಿರೀಕ್ಷಿತ ಮೆಟ್ರೋ ಹಳದಿ ಮಾರ್ಗವನ್ನು ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ನಾನು ಇಂದು ಮೆಟ್ರೋ ಹಳದಿ ಮಾರ್ಗದಲ್ಲಿ ಪ್ರಯಾಣಿಸುವ ಮೂಲಕ ಕಾಮಗಾರಿ ಹಾಗೂ ಪೂರ್ವಸಿದ್ಧತೆಯನ್ನು ಪರಿಶೀಲಿಸಿದೆನು’ ಎಂದು ಹೇಳಿದ್ದಾರೆ.

‘ಮೆಟ್ರೋ 3ನೇ ಹಂತದ ಹಳದಿ ಮಾರ್ಗವು ಆರ್​.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸುಮಾರು 19.15 ಕಿಲೋ ಮೀಟರ್​ ಉದ್ದವಿದ್ದು, 16 ನಿಲ್ದಾಣಗಳಿವೆ. ಹಳದಿ ಮಾರ್ಗ ಮೆಟ್ರೋ ಸಂಚಾರದಿಂದ ಸುಮಾರು 8 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಸಿಲ್ಕ್ ಬೋರ್ಡ್ ಸೇರಿದಂತೆ ಹಲವಾರು ಭಾಗದಲ್ಲಿ ಸಂಚಾರ ದಟ್ಟಣೆಗೆ ಪರಿಹಾರವಾಗಲಿದೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ವೇಳಾಪಟ್ಟಿ, ನಿಲ್ದಾಣಗಳು: ಬಿಎಂಆರ್‌ಸಿಎಲ್ ಈ ಮಾರ್ಗದಲ್ಲಿ ಬೆಳಗ್ಗೆ 5 ರಿಂದ 11ರ ತನಕ ರೈಲುಗಳನ್ನು ಓಡಿಸಲಿದೆ. ಈ ಮಾರ್ಗದ ರೈಲು ಸಂಚಾರದಿಂದ ನಮ್ಮ ಮೆಟ್ರೋ ರೈಲು ಜಾಲ 96.1 ಕಿ.ಮೀ.ಗೆ ವಿಸ್ತರಣೆಯಾಗಲಿದೆ.

ಬಿಎಂಆರ್‌ಸಿಎಲ್‌ ಈ ಮಾರ್ಗದಲ್ಲಿ ಪ್ರತಿ 25 ನಿಮಿಷಕ್ಕೊಂದು ರೈಲು ಓಡಿಸಲಿದೆ. ರೈಲು ಓಡಿಸಲು ಈಗ ರೈಲುಗಳ ಕೊರತೆ ಇದೆ. ಸದ್ಯ ಇರುವ ಮೂರು ರೈಲುಗಳನ್ನು ಮಾತ್ರ ಮಾರ್ಗದಲ್ಲಿ ಓಡಿಸಲಾಗುತ್ತದೆ.

ಈ ಮಾರ್ಗದಲ್ಲಿ 7 ನಿಲ್ದಾಣಗಳಲ್ಲಿ ಮಾತ್ರ ರೈಲುಗಳ ಸಂಚಾರವನ್ನು ನಡೆಸಲು ಬಿಎಂಆರ್‌ಸಿಎಲ್ ಮೊದಲು ಚಿಂತನೆ ನಡೆಸಿತ್ತು. ಈಗ 16 ನಿಲ್ದಾಣಗಳನ್ನು ಸಂಪರ್ಕಿಸುವಂತೆ ರೈಲು ಓಡಿಸಲು ಮುಂದಾಗಿದೆ.

ನಿಲ್ದಾಣಗಳು: ಹಳದಿ ಮಾರ್ಗದಲ್ಲಿ ಆರ್.ವಿ.ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕುಡ್ಲುಗೇಟ್, ಸಿಂಗಸಂದ್ರ, ಹೊಸ ರಸ್ತೆ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಇನ್ಫೋಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಹುಸ್ಕೂರ್ ರಸ್ತೆ, ಬಯೋಕಾನ್ ಹೆಬ್ಬಗೋಡಿ, ಡೆಲ್ಟಾ ಬೊಮ್ಮಸಂದ್ರ ನಿಲ್ದಾಣಗಳಿವೆ.

ಸದ್ಯ ಬೆಂಗಳೂರು ನಗರದಲ್ಲಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರವನ್ನು ನಡೆಸುತ್ತಿದೆ. ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ನಗರದ 3ನೇ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ರವಿಶಂಕರ್ ಆಗಸ್ಟ್ 2ರಂದು ಹಳದಿ ಮಾರ್ಗದ ಬೊಮ್ಮಸಂದ್ರ-ಆರ್.ವಿ.ರಸ್ತೆ ನಡುವೆ ಬರುವ ನಿಲ್ದಾಣಗಳನ್ನು ಹಾಗೂ ಹೆಬ್ಬಗೋಡಿ ಡಿಪೋವನ್ನು ಪರಿಶೀಲಿಸಿದ್ದರು. ಸದ್ಯಕ್ಕೆ ಈ ಮಾರ್ಗದಲ್ಲಿ ಸಂಚಾರ ನಡೆಸುವ ರೈಲುಗಳನ್ನು ಹೆಬ್ಬಗೋಡಿಯಲ್ಲಿ ನಿರ್ವಹಣೆ ಮಾಡಲಾಗುತ್ತದೆ.

ನಮ್ಮ ಮೆಟ್ರೋದ ಹಿರಿಯ ಅಧಿಕಾರಿಗಳ ಜೊತೆ ಮಾರ್ಗದ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಿ, ಸಾರ್ವಜನಿಕರಿಗೆ ಮುಕ್ತಗೊಳಿಸಲು ಮಾಡಿಕೊಂಡಿರುವ ತಯಾರಿಗಳ ಕುರಿತು ಮಾಹಿತಿ ಸಂಗ್ರಹ ಮಾಡಿದ್ದರು.

19.15 ಕಿ.ಮೀ.ಉದ್ದದ ಹಳದಿ ಮಾರ್ಗವು ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆಯನ್ನು ಸುಧಾರಿಸಲು ಪ್ರಮುಖ ಪಾತ್ರ ವಹಿಸಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಜುಲೈ 22 ರಿಂದ 25ರ ತನಕ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗವನ್ನು ಪರಿಶೀಲನೆ ನಡೆಸಿ, ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಿದ್ದರು.

Previous articleಉತ್ತರಾಖಂಡದಲ್ಲಿ ಮೇಘಸ್ಫೋಟ: ನಾಲ್ವರು ಸಾವು, ಹಲವರು ನಾಪತ್ತೆ, ಕೊಚ್ಚಿ ಹೋದ ಮನೆಗಳು
Next articleಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿ ದಾಖಲೆ ಮುರಿದ ಅಮಿತ್ ಶಾ

LEAVE A REPLY

Please enter your comment!
Please enter your name here