ಹೈದರಾಬಾದ್ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಬದಲಾವಣೆಯ ಗಾಳಿ ಬೀಸಿದೆ. ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂದೇ ಮನೆಮಾತಾಗಿರುವ, ಹುಬ್ಬಳ್ಳಿ ಮೂಲದ ಹೆಮ್ಮೆಯ ಕನ್ನಡಿಗ, ಹಿರಿಯ ಐಪಿಎಸ್ ಅಧಿಕಾರಿ ವಿ.ಸಿ. ಸಜ್ಜನರ ಹೈದರಾಬಾದ್ ನಗರದ ನೂತನ ಪೊಲೀಸ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ.
ಈ ನೇಮಕವು ತೆಲಂಗಾಣದಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ. ಇಲ್ಲಿಯವರೆಗೆ ತೆಲಂಗಾಣ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದ ಸಜ್ಜನರ್, ಇನ್ನು ಮುಂದೆ ದೇಶದ ಅತಿ ದೊಡ್ಡ ಮಹಾನಗರಗಳಲ್ಲಿ ಒಂದಾದ ಹೈದರಾಬಾದ್‌ನ ಕಾನೂನು ಸುವ್ಯವಸ್ಥೆಯ ಹೊಣೆ ಹೊರಲಿದ್ದಾರೆ.
ವಿ.ಸಿ. ಸಜ್ಜನರ ಹೆಸರು ಕೇಳಿದಾಕ್ಷಣ ನೆನಪಾಗುವುದು 2019ರಲ್ಲಿ ನಡೆದ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ. ಹೈದರಾಬಾದ್ ಹೊರವಲಯದಲ್ಲಿ ಯುವ ಪಶುವೈದ್ಯೆಯ ಮೇಲೆ ನಡೆದ ಆಘಾತಕಾರಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು.ಆಗ ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿದ್ದ ಸಜ್ಜನರ ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದರು. ಈ ನಿರ್ಧಾರ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಅನೇಕರು ಅವರ ಕ್ರಮವನ್ನು ಬೆಂಬಲಿಸಿದರೆ, ಕೆಲವರು ಟೀಕಿಸಿದ್ದರು. ಆದರೆ, ಈ ಘಟನೆ ಸಜ್ಜನರಗೆ ‘ಸೂಪರ್ ಕಾಪ್’ ಮತ್ತು ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂಬ ಖ್ಯಾತಿಯನ್ನು ಖಂಡಿತವಾಗಿಯೂ ತಂದುಕೊಟ್ಟಿತ್ತು. ಅಕ್ರಮಗಳನ್ನು ಸಹಿಸದ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿತ್ವಕ್ಕೆ ಇದು ಹಿಡಿದ ಕೈಗನ್ನಡಿಯಾಗಿತ್ತು.
ಇನ್ನು, ಸಜ್ಜನರ ಹುಬ್ಬಳ್ಳಿ ಮೂಲವರು ಎಂಬುವದು ಕನ್ನಡಿಗರಿಗೆ ಮತ್ತಷ್ಟು ಹೆಮ್ಮೆಯ ಸಂಗತಿಯಾಗಿದೆ. ತೆಲಂಗಾಣದಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ತಮ್ಮ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ. ಇದಕ್ಕೂ ಮೊದಲು, ವಾರಂಗಲ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದಾಗಲೂ ಸಜ್ಜನರ್ ಕಾರ್ಯವೈಖರಿ ಜನಮೆಚ್ಚುಗೆ ಗಳಿಸಿತ್ತು.
ತೆಲಂಗಾಣದಲ್ಲಿ ಸಿಎಂ ರೇವಂತ್ ರೆಡ್ಡಿ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಆಡಳಿತದಲ್ಲಿ ಅನೇಕ ಬದಲಾವಣೆಗಳನ್ನು ನಿರೀಕ್ಷಿಸಲಾಗಿತ್ತು. ಅದರ ಭಾಗವಾಗಿಯೇ ಈಗ ಬರೋಬ್ಬರಿ 27 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ವರ್ಗಾವಣೆಯಲ್ಲಿ ಸಿ.ವಿ. ಆನಂದ್ ಅವರನ್ನು ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿಯನ್ನಾಗಿ ವರ್ಗಾಯಿಸಿ, ಅವರ ಜಾಗಕ್ಕೆ ಸಜ್ಜನರ್ ಅವರನ್ನು ನೇಮಿಸಲಾಗಿದೆ.
ಯಾರು ಈ ಕರ್ನಾಟಕದ ‘ಸೂಪರ್ ಕಾಪ್’: ತೆಲಂಗಾಣದ ಖಡಕ್ ಐಪಿಎಸ್ ಅಧಿಕಾರಿ ವಿ.ಸಿ.ಸಜ್ಜನರ್! ಕರ್ನಾಟಕ ಗದಗ ಮೂಲದವರಾದ ವಿಶ್ವನಾಥ್ ಚನ್ನಪ್ಪ ಸಜ್ಜನರ, ತೆಲಂಗಾಣದ 1996ರ ಐಪಿಎಸ್ ಬ್ಯಾಚ್ನ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡಿದ್ದರು, ಹುಬ್ಬಳ್ಳಿಯ ಲಯನ್ಸ್ ಶಾಲೆ, ಕೆಎಲ್‌ಇ ಕಾಲೇಜು ಮತ್ತು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ. ಪದವಿ ಪಡೆದು, ನಂತರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಐಪಿಎಸ್ ಅಧಿಕಾರಿಯಾದರು.
ಇತ್ತೀಚೆಗೆ ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ ಪದವಿಯನ್ನೂ ಪಡೆದಿರುವ ಇವರು, ಹುಬ್ಬಳ್ಳಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ತೆಲಂಗಾಣದಲ್ಲಿ ಅನೇಕ ಪ್ರಮುಖ ಪ್ರಕರಣಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ