ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ತನ್ನ ವಾಣಿಜ್ಯ ಮಳಿಗೆಗಳ ಬಾಡಿಗೆ ದರವನ್ನು ಏಕಾಏಕಿ ಹೆಚ್ಚಿಸಿದ್ದು, ವ್ಯಾಪಾರಿ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. 2019ರ ಸುತ್ತೋಲೆಯನ್ನು ಆಧರಿಸಿ ಈ ಪರಿಷ್ಕರಣೆ ಮಾಡಲಾಗಿದ್ದು, ಈಗಾಗಲೇ ಒಂದು ತಿಂಗಳ ಅವಧಿಯಲ್ಲಿ ಸುಮಾರು 2 ಕೋಟಿ ರೂ. ಬಾಡಿಗೆ ಸಂಗ್ರಹವಾಗಿದೆ ಎಂದು ಪಾಲಿಕೆ ತಿಳಿಸಿದೆ.
ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಒಟ್ಟು 1,545 ಮಳಿಗೆಗಳಿದ್ದು, ಪ್ರದೇಶ ಮತ್ತು ಮಾರುಕಟ್ಟೆ ದರಗಳನ್ನು ಪರಿಗಣಿಸಿ ಬಾಡಿಗೆ ಹೆಚ್ಚಿಸಲಾಗಿದೆ.ಪಾಲಿಕೆಯು 2025-26ನೇ ಸಾಲಿನಲ್ಲಿ ದಂಡ ರಹಿತವಾಗಿ 7 ಕೋಟಿ ರೂ. ಬಾಡಿಗೆ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಕಳೆದ ಸಾಲಿನಲ್ಲಿ 3.70 ಕೋಟಿ ರೂ. ಸಂಗ್ರಹವಾಗಿತ್ತು. ಪಾಲಿಕೆಯ ಉಪ ಆಯುಕ್ತ ಅಶೋಕ ಗುರಾಣಿ ಅವರು, “ಏಳು ವರ್ಷಗಳ ನಂತರ ದರ ಹೆಚ್ಚಳವಾಗಿದೆ. ಸಾರ್ವಜನಿಕರು, ವ್ಯಾಪಾರಿಗಳಿಗೆ ಹೊರೆಯಾಗಲಿ ಎಂಬ ಉದ್ದೇಶದಿಂದ ಹೆಚ್ಚಳ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ವ್ಯಾಪಾರಿಗಳು ಪಾಲಿಕೆಯ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಶೇ. 200ರಿಂದ 300ರಷ್ಟು ಬಾಡಿಗೆ ಹೆಚ್ಚಳವಾಗಿದ್ದರೆ, ಧಾರವಾಡದಲ್ಲಿ ಶೇ. 50ರಿಂದ 80ರಷ್ಟು ಮಾತ್ರ ಹೆಚ್ಚಿಸುವ ಮೂಲಕ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. “ಈ ಹಿಂದೆ ವಾರ್ಷಿಕ 45 ಸಾವಿರ ರೂ. ಬಾಡಿಗೆ ಕಟ್ಟುತ್ತಿದ್ದೆವು, ಈಗ ಅದನ್ನು 1.30 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಮೂರು ಪಟ್ಟು ಬಾಡಿಗೆ ಹೆಚ್ಚಳ ವ್ಯಾಪಾರಿಗಳಿಗೆ ಭಾರೀ ಹೊರೆಯಾಗಿದೆ” ಎಂದು ಸ್ವಿಮ್ಮಿಂಗ್‌ಪೂಲ್ ಸ್ಟಾಲ್ ಹೋಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಜೆ.ಎಚ್.ಜಾದವ ಅಳಲು ತೋಡಿಕೊಂಡಿದ್ದಾರೆ.
ವ್ಯಾಪಾರ ಕುಸಿತದ ಜೊತೆಗೆ ಬಾಡಿಗೆ ಏರಿಕೆ: ಕೊರೊನಾ ನಂತರ ಆನ್‌ಲೈನ್ ವಹಿವಾಟು ಹೆಚ್ಚಾಗಿದ್ದು, ಜನ ಮಾರುಕಟ್ಟೆಗಳಿಗೆ ಬರುವುದು ಕಡಿಮೆಯಾಗಿದೆ. ಮೇಲ್ಸೇತುವೆ ಕಾಮಗಾರಿಗಳಂತಹ ಅಭಿವೃದ್ಧಿ ಕಾರ್ಯಗಳಿಂದಲೂ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಡಿಗೆ ಏರಿಕೆ ವರ್ತಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. “ಪಾಲಿಕೆ ಮಳಿಗೆಗಳಲ್ಲಿ ಸೂಕ್ತ ಪಾರ್ಕಿಂಗ್, ಶೌಚಾಲಯ, ನೀರಿನ ವ್ಯವಸ್ಥೆ ಇಲ್ಲ. ಹೀಗಿರುವಾಗ ಏಕಾಏಕಿ ದರ ಹೆಚ್ಚಿಸುವುದು ಅವೈಜ್ಞಾನಿಕ” ಎಂದು ದುರ್ಗದಬೈಲ್‌ನ ಎಂ.ಜಿ. ಮಾರುಕಟ್ಟೆಯ ವ್ಯಾಪಾರಿ ಹೇಳಿದರು.
ನ್ಯಾಯಾಲಯದ ಮೊರೆ ಹೋಗುವ ಎಚ್ಚರಿಕೆ: ವ್ಯಾಪಾರಿಗಳು ಬಾಡಿಗೆ ಏರಿಕೆ ದರವನ್ನು ಕಡಿಮೆ ಮಾಡುವಂತೆ ಮತ್ತು ನ್ಯಾಯಯುತವಾಗಿ ಬಾಡಿಗೆ ನಿಗದಿಪಡಿಸುವಂತೆ ಪಾಲಿಕೆಯನ್ನು ಒತ್ತಾಯಿಸಿದ್ದಾರೆ. ಅಲ್ಲದೆ, “ಮಾರ್ಚ್‌ನಲ್ಲಿ ನೀಡಬೇಕಿದ್ದ ಚಲನ್‌ಗಳನ್ನು ಆಗಸ್ಟ್‌ನಲ್ಲಿ ನೀಡಿ ಒಂದು ತಿಂಗಳ ಕಾಲಾವಕಾಶ ನೀಡಿದ್ದಾರೆ. ಅವೈಜ್ಞಾನಿಕವಾಗಿ ದರ ಹೆಚ್ಚಿಸಿರುವುದನ್ನು ಖಂಡಿಸಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗಿದೆ” ಎಂದು ಎಚ್ಚರಿಕೆ ನೀಡಿದ್ದಾರೆ. ವ್ಯಾಪಾರಿಗಳನ್ನು ಕರೆದು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಶಿಥಿಲಗೊಂಡ ಮಳಿಗೆಗಳ ಸಮಸ್ಯೆ: ಪಾಲಿಕೆಯ ಹೊಸೂರು ಮತ್ತು ಹಳೇ ಹುಬ್ಬಳ್ಳಿಯ ಎರಡು ವಾಣಿಜ್ಯ ಸಂಕೀರ್ಣಗಳು ಶಿಥಿಲಗೊಂಡಿದ್ದು, ಅವುಗಳನ್ನು ನೆಲಸಮ ಮಾಡಬೇಕಿದೆ. ಆದರೆ ವ್ಯಾಪಾರಿಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದರಿಂದ ಈ ಮಳಿಗೆಗಳ ಬಾಡಿಗೆದಾರರಿಗೆ ಈ ಬಾರಿ ಚಲನ್ ನೀಡಿಲ್ಲ.”ಕಟ್ಟಡಗಳು ಶಿಥಿಲಗೊಂಡಿರುವುದು ಸಾಮರ್ಥ್ಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನ್ಯಾಯಾಲಯದಲ್ಲಿ ಇತ್ಯರ್ಥವಾದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹೇಳಿದ್ದಾರೆ.
ಈ ಮಧ್ಯೆ, ಪ್ರಸ್ತುತ ಮಾರ್ಗಸೂಚಿ ದರದ ಅನ್ವಯ ಬಾಡಿಗೆ ದರವನ್ನು ಪರಿಷ್ಕರಿಸಲಾಗಿದೆ. ಬಾಡಿಗೆ ಪಾವತಿಸದ ಮಳಿಗೆಗಳನ್ನು ಮುಚ್ಚಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.