ಧಾರವಾಡ: ಸೆ. 13ರಿಂದ ಕೃಷಿಮೇಳ, ವಿಶೇಷತೆಗಳು

0
50

ಧಾರವಾಡ ಕೃಷಿ ಮೇಳ ಉತ್ತರ ಕರ್ನಾಟಕದ ರೈತರ ಜಾತ್ರೆ ಎಂದೇ ಖ್ಯಾತಿ ಪಡೆದಿದೆ. 2025ರ ಧಾರವಾಡ ಕೃಷಿ ಮೇಳದ ದಿನಾಂಕ ಘೋಷಣೆಯಾಗಿದೆ. ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುವ ಈ ಬಾರಿಯ ಕೃಷಿ ಮೇಳದ ವಿಶೇಷತೆಗಳ ಮಾಹಿತಿ ಇಲ್ಲಿದೆ.

ಧಾರವಾಡ ಕೃಷಿ ಮೇಳ-2025 ಸೆಪ್ಟೆಂಬರ್ 13 ರಿಂದ 16ರ ತನಕ ನಡೆಯಲಿದೆ. ಕೃಷಿ ವಿಶ್ವವಿದ್ಯಾಲಯ ರೈತರ ವಿಶ್ವವಿದ್ಯಾಲಯ ಎಂದು ಖ್ಯಾತಿ ಪಡೆದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮೇಳಕ್ಕೆ ಸಾವಿರಾರು ರೈತರು ಆಗಮಿಸುವ ನಿರೀಕ್ಷೆ ಇದೆ.

ನಾಲ್ಕು ದಿನಗಳ ಕಾಲ ನಡೆಯುವ ಕೃಷಿ ಮೇಳಕ್ಕೆ ತಯಾರಿ ನಡೆಯುತ್ತಿದೆ. ಈ ಬಾರಿ ಮೇಳದ ಘೋಷವಾಕ್ಯ ‘ಪೌಷ್ಟಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು’. ಕೃಷಿ ವಿವಿ ಕುಲಪತಿ ಪ್ರೊ.ಪಿ.ಎಲ್‌. ಪಾಟೀಲ ಮೇಳದ ತಯಾರಿ, ವಿಶೇಷತೆಗಳ ಮಾಹಿತ ನೀಡಿದ್ದಾರೆ.

ಮೇಳದ ವಿಶೇಷತೆಗಳು: ಕೃಷಿ ಮೇಳ 2025ರಲ್ಲಿ ಸುಮಾರು 700ಕ್ಕಿಂತ ಹೆಚ್ಚು ಮಳಿಗೆಗಳನ್ನು ವಿವಿಧ ವಿಷಯಗಳಲ್ಲಿ ಏರ್ಪಾಡು ಮಾಡಲಾಗಿದೆ. ಪ್ರತಿ ವರ್ಷದಂತೆ ಬೀಜ ವಿತರಣೆ, ಗೊಬ್ಬರ, ಔಷಧಿಗಳು ಹಾಗೂ ಕೃಷಿಗೆ ಸಂಬಂಧಪಟ್ಟ ಸಣ್ಣ ಯಂತ್ರೋಪಕರಣದಿಂದ ದೊಡ್ಡ ಮಟ್ಟದ ಯಂತ್ರೋಪಕರಣಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶವಿದೆ.

ಇದರ ಜೊತೆಗೆ, ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವಂತಹ 7 ಜಿಲ್ಲೆಗಳಲ್ಲಿರುವ ಎಲ್ಲಾ 26 ಸಂಶೋಧನಾ ಕೇಂದ್ರಗಳ ಫಲಿತಾಂಶ ಮತ್ತು ಅಖಿಲ ಭಾರತ ಸಮನ್ವಯ ಸಂಶೋಧನಾ ಕೇಂದ್ರಗಳ ವಿವಿಧ ಬೆಳೆಗಳಲ್ಲಿ ನಡೆಯುತ್ತಿರುವಂತಹ ಸಂಶೋಧನೆಗಳ ಫಲಿತಾಂಶವನ್ನು ಕೂಡ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.

ರೈತರಿಗೆ ಯಾವುದೇ ಒಂದು ವಿಷಯದಲ್ಲಿ ಪರಿಹಾರಗಳು ಬೇಕಾದಲ್ಲಿ, ಎಲ್ಲಾ ವಿಷಯದ ತಜ್ಞರು ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಉಪಸ್ಥಿತರಿರುತ್ತಾರೆ. ಅವರನ್ನು ಸಂಪರ್ಕಿಸಿ ತಮ್ಮ ಮುಂಗಾರು ಹಂಗಾಮಿನಲ್ಲಿ ಬರುವಂತಹ ಬೆಳೆಗಳ ವಿಷಯಗಳಾಗಲಿ ಅಥವಾ ಹಿಂಗಾರು ಹಂಗಾಮಿನಲ್ಲಿ ಬರುವಂತಹ ವಿಷಯಗಳ ಬಗ್ಗೆ ಚರ್ಚೆ ಮಾಡಿ ರೈತರು ಪರಿಹಾರ ಪಡೆಯಬಹುದು.

ಬಿತ್ತನೆ ಬೀಜಗಳು: 2,548 ಕ್ವಿಂಟಾಲ್ ಕುಸುಬೆ, 581 ಕ್ವಿಂಟಾಲ್ ಕಡಲೆ, 45 ಕ್ವಿಂಟಾಲ್ ಅಲಸಂದಿ, 81 ಕ್ವಿಂಟಾಲ್ ಉದ್ದು, 29 ಕ್ವಿಂಟಾಲ್ ಶೇಂಗಾ, 11 ಕ್ವಿಂಟಾಲ್ ಊದಲು, 3516.91 ಕ್ವಿಂಟಾಲ್ ಬಿತ್ತನೆ ಬೀಜಗಳು ಹಾಗೂ 21 ಕ್ವಿಂಟಾಲ್ ಜೈವಿಕ ಪೀಡೆನಾಶಕ, 17 ಕ್ವಿಂಟಾಲ್ ಜೈವಿಕ ಗೊಬ್ಬರ ಪುಡಿ ಮಾರಾಟಕ್ಕೆ ಲಭ್ಯವಿರುತ್ತದೆ.

ಕೃಷಿಮೇಳದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಶಾಸಕರು, ಕೃಷಿ & ತೋಟಗಾರಿಕಾ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಸಾಂಪ್ರದಾಯಿಕ ತಳಿಗಳ ಪ್ರಾಮುಖ್ಯತೆ ಹಾಗೂ ಸಂರಕ್ಷಣೆ ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಪೌಷ್ಟಿಕ ಆಹಾರ ಭದ್ರತೆ ವಿಚಾರಗಳ ಕುರಿತು ಗೋಷ್ಠಿ ನಡೆಯಲಿದೆ.

ಎಐ ತಂತ್ರತಜ್ಞಾನದ ಕುರಿತು ಭಾರೀ ಚರ್ಚೆಯಾಗುತ್ತಿದೆ. ಆದ್ದರಿಂದ ಸೆಪ್ಟೆಂಬರ್ 16ರಂದು ಬೆಳಗ್ಗೆ 11ಕ್ಕೆ ‘ಕೃಷಿಯಲ್ಲಿ ಕೃತಕ ಬುದ್ಧಿಮತ್ತೆಯ ಉಪಯೋಗ- ಅವಕಾಶಗಳು ಹಾಗೂ ಸವಾಲುಗಳು’ ಕುರಿತು ಗೋಷ್ಠಿ ನಡೆಯಲಿದೆ. ಕೃಷಿ ಮೇಳದಲ್ಲಿ ಲಕ್ಷಾಂತರ ರೈತರು ಭಾಗವಹಿಸುವ ನಿರೀಕ್ಷೆ ಇದೆ.

Previous articleMovie Review: ಪರಮಶ್ರೇಷ್ಠ ಪ್ರೀತಿಗೆ ಏಳುಮಲೆ ಸಾಕ್ಷಿ
Next articleಬಾಲಿವುಡ್ ನಟ ಆಶಿಷ್ ವಾರಂಗ್ ನಿಧನ

LEAVE A REPLY

Please enter your comment!
Please enter your name here