ಮೈಸೂರು: “ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೋ ಹೇಳಿದರು ಎಂದ ಮಾತ್ರಕ್ಕೆ ದಿಢೀರ್‌ನೆ ಎಸ್‌ಐಟಿ ಮಾಡಲು ಆಗುವುದಿಲ್ಲ. ಯಾವುದೇ ಒತ್ತಡ ಬಂದಿಲ್ಲ, ಬಂದರೂ ಅದಕ್ಕೆ ಬಗ್ಗುವುದಿಲ್ಲ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ಮೈಸೂರಿನಲ್ಲಿ ಮಾತನಾಡಿದ ಅವರು, “ಎತ್ತು ಮರಿ ಹಾಕಿತ್ತು ಅಂಥ ಕೊಟ್ಟಿಗೆ ರೆಡಿ ಮಾಡಲು ಸಾಧ್ಯನಾ?. ಇದು ಅದೇ ರೀತಿ ಒಬ್ಬ ವ್ಯಕ್ತಿ ಬಂದು ಸ್ವ-ಇಚ್ಛಾ ಹೇಳಿಕೆ ಕೊಟ್ಟಿದ್ದಾನೆ. ನಾನು ಧರ್ಮಸ್ಥಳದಲ್ಲಿ ಎಷ್ಟೋ ಶವಗಳನ್ನ ಹೂತು ಹಾಕಿದ್ದೇನೆ ಎಂದು ಹೇಳಿದ್ದಾನೆ. ಪೊಲೀಸರು ಅದರ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಪೊಲೀಸರು ಏನು ವರದಿ ಕೊಡುತ್ತಾರೆ? ನೋಡೋಣ” ಎಂದರು.
“ಆ ವರದಿ ಆಧಾರದ ಮೇಲೆ ನಾವು ಮುಂದಿನ ಕ್ರಮ ಹೇಳುತ್ತೇವೆ. ಈಗಲೇ ಯಾರೋ ಹೇಳಿದರು ಎಂದು ಏನೇನೊ ಘೋಷಣೆ ಮಾಡಲು ಸಾಧ್ಯವಿಲ್ಲ. ಧರ್ಮಸ್ಥಳದ ಪ್ರಕರಣದಲ್ಲಿ ನಮ್ಮ ಮೇಲೆ ಯಾರ ಒತ್ತಡವೂ ಇಲ್ಲ. ಒತ್ತಡ ಬಂದರೂ ನಾವು ಅದಕ್ಕೆ ಬಗ್ಗುವುದಿಲ್ಲ” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ: ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಎಸ್‌ಐಟಿ ರಚನೆ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ. ಒಂದು ಲಕ್ಷ ಸಹಿಯನ್ನು ಸಂಗ್ರಹ ಮಾಡುವುದು ಗುರಿಯಾಗಿದೆ.
ಈ ಕುರಿತು ನಟ, ಹೋರಾಟಗಾರ ಪ್ರಕಾಶ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ. ಸೌಜನ್ಯ ಹತ್ಯೆ ಮತ್ತು ಧರ್ಮಸ್ಥಳದಲ್ಲಿ ದಶಕಗಳಿಂದ ಆದ ನಿಗೂಢ ಸಾವುಗಳ ಬಗ್ಗೆ
- ಸುಪ್ರೀಂಕೋರ್ಟ್ ಹಾಲಿ/ ನಿವೃತ್ತ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಎಸ್‌ಐಟಿ ತನಿಖೆ ಆಗಬೇಕು.
- ಕೋರ್ಟ್ ಈಗಾಗಲೇ ನೀಡಿರುವ ಆದೇಶದಂತೆ ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು
ನಿಮಗೂ ಒಪ್ಪಿಗೆ ಇದ್ದರೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳನ್ನು ಈ ಕುರಿತು ಒತ್ತಾಯಿಸುವ ಅಭಿಯಾನದಲ್ಲಿ ನಿಮ್ಮ ಸಹಿ ದಾಖಲಿಸಿ ಎಂದು ಮನವಿ ಮಾಡಲಾಗಿದೆ.
ಸುಪ್ರೀಂಕೋರ್ಟ್‌ನ ನಿವೃತ್ತಿ ನ್ಯಾಯಮೂರ್ತಿ ವಿ. ಗೋಪಾಲ ಗೌಡ ಸಹ ಈ ಕುರಿತು ಮಾತನಾಡಿದ್ದರು. ಧರ್ಮಸ್ಥಳದಲ್ಲಿ ಹಲವಾರು ಅತ್ಯಾಚಾರ, ಹತ್ಯೆ ಮತ್ತು ಕಾಡಿನಲ್ಲಿ ಶವಗಳನ್ನು ಹೂತಿರುವ ಪ್ರಕರಣದಲ್ಲಿ ದೂರುದಾರನಿಗೆ ತಕ್ಷಣವೇ ಸರ್ಕಾರ ಭದ್ರತೆ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು.
ಸುಪ್ರೀಂಕೋರ್ಟ್ ಅಥವ ಹೈಕೋರ್ಟ್ ಹಾಲಿ ಅಥವ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ಎಸ್‌ಐಟಿ ರಚಿಸಬೇಕು ಎಂದು ಹೇಳಿದ್ದರು. ಈ ಅಪರಾಧಗಳ ಕುರಿತು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಳಿಕೆ ದಾಖಲು ಮಾಡಿದ ಬಳಿಕವೂ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಅವರು ಹೇಳಿದ್ದರು.
ಶವಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ಖಾಲಿ ಹಾಳೆಯ ಮೇಲೆ ಗುರುತು ಮಾಡಿಕೊಂಡು ಪೊಲೀಸರು ಸಾಕ್ಷಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಆತ ನೀಡಿರುವ ಹೇಳಿಕೆಗಳು ಸೋರಿಕೆಯಾಗುತ್ತಿವೆ ಎಂದು ತಿಳಿಸಿದ್ದರು.
ದೂರು ದಾರ ಸಾಕ್ಷಿಗಳ ಜೊತೆ ಒಂದು ಸ್ಥಳಕ್ಕೆ ತೆರಳಿ ಹೂತಿರುವ ಹೆಣವನ್ನು ತೆಗೆಯುವುದಾಗಿ ಕೋರ್ಟ್ ಮತ್ತು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಆದರೂ ಪೊಲೀಸರು ಸ್ಥಳಕ್ಕೆ ಹೋಗಿಲ್ಲ. ತನಿಖಾಧಿಕಾರಿ ಯಾರಿಗೂ ಕರೆ ಮಾಡಿ ಅವರ ಸೂಚನೆಯಂತೆ ಹೇಳಿಕೆ ದಾಖಲು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ತನಿಖಾ ತಂಡ ಬದಲಿಸಿ ಎಸ್‌ಟಿ ರಚನೆ ಮಾಡಬೇಕು ಎಂದು ವಿ. ಗೋಪಾಲ ಗೌಡ ಆಗ್ರಹಿಸಿದ್ದರು.