ದಾವಣಗೆರೆ: ಕೇಂದ್ರ ಸರ್ಕಾರ ಕುರುಬ ಸಮಾಜಕ್ಕೆ ಎಸ್. ಟಿ. ಮೀಸಲಾತಿ ನೀಡಿದರೆ ಸಹೋದರ ಸಮಾಜವಾದ ನಾಯಕ ಸಮುದಾಯದ ಶೇ. 7 ಮೀಸಲಾತಿಯಲ್ಲಿ ಪಾಲನ್ನು ಪಡೆಯುವುದಿಲ್ಲ. ನಮ್ಮ ಹಕ್ಕನ್ನು ನಾವು ಪಡೆಯುತ್ತೇವೆ. ಆದ್ದರಿಂದ ನಾಯಕ ಸಮಾಜದವರು ಯಾವುದೇ ಊಹಾಪೋಹಾಗಳಿಗೂ ಕಿವಿಕೊಡಬಾರದು ಎಂದು ಶ್ರೀಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮನವಿ ಮಾಡಿದ್ದಾರೆ.
ಕುರುಬ ಸಮಾಜಕ್ಕೆ ಎಸ್.ಟಿ ಮೀಸಲು ನೀಡಬೇಕೆಂದು ಒತ್ತಾಯಿಸಿ ನಡೆಸಿದ ಹಲವಾರು ಹೋರಾಟಗಳ ತರುವಾಯ ಈಗ ಸರ್ಕಾರ ಕುರುಬ ಸಮಾಜಕ್ಕೆ ಎಸ್.ಟಿ. ಮೀಸಲು ನೀಡಲು ಮುಂದಾಗಿದೆ. ಆದರೆ, ನಾಯಕ ಸಮಾಜದವರು ತಮ್ಮ ಮೀಸಲಾತಿಯನ್ನು ಕುರುಬರಿಗೆ ನೀಡಿದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ರವಾನಿಸಿದ್ದಾರೆ.
ಈಗಾಗಲೇ 2ಎ ಮೀಸಲಾತಿಯಲ್ಲಿನ ಕುರುಬರ ಜನಸಂಖ್ಯಾಗನುಣವಾಗಿ ಮೀಸಲಾತಿ ಪ್ರಮಾಣವನ್ನು ಪಡೆದುಕೊಂಡು ನಮ್ಮ ಹಕ್ಕನ್ನು ನಾವು ಪಡೆಯುತ್ತೇವೆ. ಹೊರತು ನಿಮ್ಮ ಸಮಾಜದ ಮೀಸಲಾತಿ ಕಿತ್ತುಕೊಳ್ಳುವುದಿಲ್ಲ ಎಂದು ಸ್ವಾಮೀಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2021 ರಲ್ಲಿ ಶ್ರೀಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠವು ರಾಜ್ಯದ ಕುರುಬರ ಎಸ್.ಟಿ. ಹೋರಾಟ ಸಮಿತಿಯ ಕೆ. ವಿರೂಪಾಕ್ಷಪ್ಪ, ಕೆ. ಎಸ್. ಈಶ್ವರಪ್ಪ, ಹೆಚ್. ವಿಶ್ವನಾಥ, ಹೆಚ್. ಎಂ. ರೇವಣ್ಣ, ಬಂಡೆಪ್ಪ ಕಾಶಂಪೂರ್, ಹಾಲುಮತ ಮಹಾಸಭಾದ ರುದ್ರಣ್ಣ ಗುಳಗುಳಿ ಹಾಗೂ ಮುಖಂಡರು ಮತ್ತು ಕುರುಬ ಸಮಾಜದ ಎಲ್ಲಾ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಕಟ್ಟ ಕಡೆಯ ಕುರುಬರಿಗೂ ಎಸ್. ಟಿ. ಮೀಸಲಾತಿ ನೀಡುವಂತೆ ಕಾಗಿನೆಲೆಯಿಂದ ಬೆಂಗಳೂರಿನವರೆಗೆ 360 ಕಿ. ಮೀ ಪಾದಯಾತ್ರೆ ನಡೆಸಿ, ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು ಎಂದು ವಿವರಿಸಿದ್ದಾರೆ.
ನಿರಂತರ ಪ್ರಯತ್ನ ಹಾಗೂ ಒತ್ತಾಯದಿಂದ ಅಂದಿನ ಬಿಜೆಪಿ ನೇತೃತ್ವದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸರ್ಕಾರವು 2023 ಮಾರ್ಚ್ 24 ರಂದು ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿ, ಮಾರ್ಚ್ 28ರಂದು ಆದೇಶ ಮಾಡಿತು. ತದ ನಂತರದ ಕಾಂಗ್ರೇಸ್ ಸರ್ಕಾರ 2023 ಜುಲೈನಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಕಳುಹಿಸಿ ಕೊಟ್ಟಿತು. ಪ್ರಸ್ತುತ ಕುರುಬರ ಎಸ್. ಟಿ. ಮೀಸಲಾತಿಯ ಕುರಿತು ಕೇಂದ್ರ ಸರ್ಕಾರವು ಹಲವು ಮಾಹಿತಿ ಕೇಳಿದ್ದು, ಅದನ್ನು ರಾಜ್ಯ ಸರ್ಕಾರವು ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಶ್ರೀಕನಕ ಗುರುಪೀಠವು ನಾಯಕ(ವಾಲ್ಮೀಕಿ) ಬಂಧುಗಳಿಗೆ ಕುರುಬ ಸಮುದಾಯದ ಗುರಿ, ಉದ್ದೇಶವನ್ನು ಮನದಟ್ಟು ಮಾಡಿಕೊಡಲು ಬಯಸುತ್ತದೆ. ತಾವುಗಳು ಯಾವುದೇ ಉಹಾಪೋಹ, ಗೊಂದಲಗಳಿಗೆ ಕಿವಿಗೊಡದೇ ಸಂವಿಧಾನಬದ್ಧವಾಗಿ ‘ನಮ್ಮ ಹಕ್ಕುಗಳನ್ನು ನಾವು ಪಡೆಯುತ್ತೇವೆ’. ಸಹೋದರ ಸಮಾಜಗಳಂತಿರುವ ನಾವು – ನೀವುಗಳು ಸಾಂವಿಧಾನಿಕ ಹಕ್ಕುಗಳನ್ನು ಪಡೆದುಕೊಳ್ಳಲು ಸಾಮರಸ್ಯ, ಸೌಹಾರ್ದತೆಯಿಂದ ಇದ್ದು ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳೋಣ ಎಂದು ಈ ಮನವಿ ಮಾಡಿದ್ದಾರೆ.