ದಾವಣಗೆರೆ: ಸರ್ಕಾರ ಸಂಪೂರ್ಣ ನಿಷ್ಕ್ರೀಯಗೊಂಡಿದ್ದು, ಗೊಂದಲದ ಗೂಡಾಗಿದೆ. ಹಿಂದೆ ವೀರಪ್ಪ ಮೊಯ್ಲಿ ಅವರ ಕಾಲದಲ್ಲಿ ನಡೆದ ಘಟನೆ ಮರುಕಳಿಸಬಹುದು. ಆಗಿನ ಚಾಕು ಚೂರಿ ಸಂಸ್ಕೃತಿ ಮತ್ತೆ ಮರುಕಳಿಸುವ ಸಾಧ್ಯತೆ ಇದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದೃಷ್ಟದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಬ್ಬು, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಕೊಟ್ಟು ಅಗತ್ಯ ವಸ್ತುಗಳ ಬೆಲೆ ಇಳಿಸಿ. ರೈತರ ಸಂಕಷ್ಟಕ್ಕೆ ಸ್ಪಂದಿಸುವುದ ಬಿಟ್ಟು ಕುರ್ಚಿ ಕಾಳಗದಲ್ಲಿ ಮೈಮರೆತಿದೆ. ಅಂತರಿಕ ಕಚ್ಚಾಟದಿಂದ ಈ ಸರ್ಕಾರ ಪತನ ಆಗಬಹುದು ಎಂದರು.
ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರ ಸಂಪೂರ್ಣ ನಿಷ್ಕ್ರೀಯವಾಗಿದೆ. ಶಾಸಕರು, ಸಚಿವರು ಯಾರ ಮನೆಗೆ ಭೇಟಿ ನೀಡಬೇಕು ಎನ್ನುವ ಗೊಂದಲದಲ್ಲಿ ಇದ್ದಾರೆ. ಕಾಂಗ್ರೇಸ್‌ನಲ್ಲಿ ಹೈಕಮಾಂಡ್ ಈಗ ಲೋ ಕಮಾಂಡ್ ಆಗಿದೆ. ಡಿಕೆಶಿಯವರೇ ನಿಮ್ಮ ಹೈ ಕಮಾಂಡ್ ಏನು ಒಪ್ಪಂದ ಮಾಡಿದೆ ಎಂದು ಬಹಿರಂಗಪಡಿಸಿ ಎಂದು ಆಗ್ರಹಿಸಿದರು.
ಸಿದ್ಧರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಟ್ವಿಟ್ ವಾರ್ ಆರಂಭವಾಗಿದೆ, ಕೊಟ್ಟ ಮಾತು ಉಳಿಸಿಕೊಳ್ಳಬೇಕು ಅಂತಾ ಉಪಮುಖ್ಯ ಮಂತ್ರಿ ಹೇಳಿದರೆ, ಕೊಟ್ಟ ಭರವಸೆಗಳನ್ನು ಈಡೇರಿಸಿಕೊಳ್ಳಬೇಕು ಅಂತಾ ಸಿಎಂ ಹೇಳುತ್ತಾರೆ. ಇವೆರಡರ ಮಧ್ಯೆ ಗೃಹಮಂತ್ರಿ ಡಾ.ಜಿ. ಪರಮೇಶ್ವರ್ ದಲಿತ ಮುಖ್ಯಮಂತ್ರಿ ಆಗಬೇಕು ಅನ್ನುತ್ತಾರೆ ಇವರೆಲ್ಲಾ ಕುರ್ಚಿಗಾಗಿ ಕಾಳಗ ಮಾಡುತ್ತಿದ್ದಾರೆ ಹೊರತು ಜನಪರ ಆಡಳಿತ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿಕೆಶಿ ಬಿಜೆಪಿಗೆ ಬರ್ತಾರೆ ಎನ್ನುವ ವದಂತಿ ಕುರಿತು ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಬಿಜೆಪಿ ಸಿದ್ಧಾಂತ ಒಪ್ಪಿಕೊಂಡು ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು. ಪಕ್ಷದ ನಾಯಕರು ತೀರ್ಮಾನ ಮಾಡಿದ್ರೆ ಡಿ.ಕೆ. ಶಿವಕುಮಾರ್ ಅವರನ್ನು ಸ್ವಾಗತಿಸಲು ಒಪ್ಪುತ್ತೇವೆ ಎಂದು ಪರೋಕ್ಷವಾಗಿ ಡಿಕೆಶಿಯನ್ನು ಸ್ವಾಗತಿಸಿದರು.
ಆದರೆ, ಕಾಂಗ್ರೆಸ್ ಸಂಸ್ಕೃತಿ, ಸಿದ್ದಾಂತ ನಮ್ಮ ಪಕ್ಷದಲ್ಲಿ ಒಗ್ಗಲ್ಲ. ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿ ಮಾರನೇ ದಿನವೇ ಉಲ್ಟಾ ಹೊಡೆದರು. ಇದು ಬಿಜೆಪಿ ಪಕ್ಷದ ತತ್ವ ಸಿದ್ದಾಂತಕ್ಕೆ ಒಪ್ಪೋದಿಲ್ಲ ಎಂದರು.
