ದಾವಣಗೆರೆ: ಆರೆಸ್ಸೆಸ್ ಶತಮಾನದ ಸಂಭ್ರಮಾರಣೆ ವೇಳೆ ಸರ್ಕಾರಿ ನೌಕರರಿಗೆ ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಭಯ ಹುಟ್ಟು ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತ ನೌಕರರು ರಸ್ತೆಯಲ್ಲೇ ಪ್ರಾರ್ಥನೆ ಮಾಡುತ್ತಾ, ಸಂಚಾರಕ್ಕೆ ಅಡ್ಡಿಪಡಿಸುತ್ತಾರಲ್ಲಾ ಅವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತದೆ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಎಂಬ ಗಾದೆಯಂತೆ ಕಾಂಗ್ರೆಸ್‌ಗೆ ಕೇಡುಗಾಲ ಶುರುವಾಗಿದೆ ಎಂದು ಬಿಜೆಪಿ ಶಾಸಕ ಬಿ.ಪಿ.ಹರೀಶ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಂಘದ ಚಟುವಟಿಕೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಬಾರದೆಂದು ಯಾವ ಕಾನೂನಿನಲ್ಲಿ ಹೇಳಿದೆ? ಸೇವಾ ಮನೋಭಾವದ ಆರೆಸ್ಸೆಸ್ ಬಗ್ಗೆ ಕಾಂಗ್ರೆಸ್ಸಿಗರು ಹಗುರವಾಗಿ ಮಾತನಾಡಿದರೆ ಸುಮ್ಮನಿರುವುದಿಲ್ಲ ಎಂದರು.
ಸಂಘದ ದಾವಣಗೆರೆ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಕಾಂಗ್ರೆಸ್ಸಿಗರು ಹೇಳಿದ್ದಾರೆ. ಅದು ಯಾರು ಬಂದು ಸಂಘ ಪರಿವಾರದ ಕಚೇರಿಗೆ ಮುತ್ತಿಗೆ ಹಾಕುತ್ತಾರೋ ನೋಡೋಣ. ಸಂಘ ಪರಿವಾರ ಮುತ್ತಿಗೆ ಹಾಕುವಂತಹದ್ದು ಏನು ಮಾಡಿದೆ? ದೇಶ ವಿರೋಧಿ ಚಟುವಟಿಕೆ ಕೈಗೊಂಡಿದೆನಾ? ಪಾಕಿಸ್ಥಾನ ಜಿಂದಾಬಾದ್ ಅಂತಾ ಘೋಷಣೆಯನ್ನೇನಾದರೂ ಕೂಗಿದೆಯಾ ಎಂದು ಕಿಡಿಕಾರಿದರು.
ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಕುರ್ಚಿಯನ್ನು ಅತಿಕ್ರಮಿಸಿಕೊಳ್ಳಬಹುದೆಂಬ ಭಯದಲ್ಲಿ ಸಿಎಂ ಸಿದ್ದರಾಮಯ್ಯ ಶಾಸಕರ, ಸಚಿವರ ಗಮನ ಬೇರೆಡೆ ಸೆಳೆಯಲು ಸಂಘ ಪರಿವಾರದ ಮೇಲೆ ಆಕ್ರಮಣಕ್ಕೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು, ಹಿಂದೂ ಸಂಘಟನೆಗಳು ಗಮನಿಸುತ್ತಿವೆ. ಮುಂದಿನ ದಿನಗಳಲ್ಲಿ ಏನೇ ಅನಾಹುತವಾದರೂ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.