ದಾವಣಗೆರೆ: ಬಿಜೆಪಿಯಲ್ಲಿ ಈಗಿರುವ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬದಲಾವಣೆ ಆಗದಿದ್ದರೆ ನಾವೇನೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಬದಲಿಗೆ ನಮ್ಮ ಶಕ್ತಿಯೇನೆಂದು ತೋರಿಸುತ್ತೇವೆ.
ಈಗಾಗಲೇ ತಿಳಿಸಿದಂತೆ ಜೆಸಿಬಿ ಪಕ್ಷ ಕಟ್ಟಿ, ಬಿಜೆಪಿಯಲ್ಲಿ ಅನ್ಯಾಯವಾಗಿರುವ ಅಭ್ಯರ್ಥಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಯತ್ನಾಳ್, ನನ್ನ ಪಕ್ಷಕ್ಕೆ ಹಿಂದೂಪರ ಸಂಘಟನೆ ಅಲೆ ಎದ್ದಿದೆ. ಯಾರೂ ನೀರಿಕ್ಷೆ ಮಾಡದ ಫಲಿತಾಂಶ ಈ ರಾಜ್ಯದಲ್ಲಿ ಬರುತ್ತದೆ. ಪಕ್ಷ ಕಟ್ಟುತ್ತೇವೆ ಎಂದ ಮಾತ್ರಕ್ಕೆ ನಾವು ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ ವಿರುದ್ಧವಲ್. ನಿಷ್ಠಾವಂತ ರಾಷ್ಟ್ರೀಯ ನಾಯಕರ ಪರವಾಗಿ ಇದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.
ವಿಜಯೇಂದ್ರ ಬದಲಾವಣೆಗೆ ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳಬೇಕು. ಹಾಗೊಂದು ವೇಳೆ ಬದಲಾವಣೆ ಆಗದಿದ್ದರೆ ಬಿಜೆಪಿಯಲ್ಲಿ ಅನ್ಯಾಯಕ್ಕೊಳಗಾಗಿರುವ ಒಳ್ಳೊಳ್ಳೆ ಕ್ಯಾಂಡಿಡೇಟ್ ಗಳನ್ನು ಮತ್ತು ಕಾಂಗ್ರೆಸ್ ನಲ್ಲಿ ಯಾರು ನಿಷ್ಠಾವಂತರಿದ್ದಾರೆ ಅವರನ್ನು ನಮ್ಮ ಜೆಸಿಬಿ ಪಕ್ಷಕ್ಕೆ ಕರೆದುಕೊಳ್ಳುತ್ತೇವೆ ಎಂದರು.
ಹಾಸನದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮುಂದುವರೆದರೆ ಪ್ರೀತಂಗೌಡಗೆ ಟಿಕೆಟ್ ಗೆ ಗತಿಯಿಲ್ಲ. ಅವನು ಬಿಜೆಪಿಯಲ್ಲಿ ಉಳಿಯುತ್ತಾನಾ? ಈಗಾಗಲೇ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾನೆ. ಇಲ್ಲಿ ದಾವಣಗೆರೆ ಬಂದೂ ನೀವು ಹೇಳಿದವರಿಗೆ ಟಿಕೆಟ್ ಕೊಡಿಸುವೆ ಅಂತಾನಂತೆ, ಈತ ಬಿಜೆಪಿ ಪ್ರಧಾನ ಕಾರ್ಯದರ್ಶಿ ಇಂತವರಿದ್ದರೆ ಬಿಜೆಪಿ ಎಲ್ಲಿ ಉದ್ದಾರ ಆಗುತ್ತೆ ಎಂದು ಪ್ರಶ್ನಿಸಿದರು.
ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಜಿ.ಎಂ. ಸಿದ್ದೇಶ್ವರ ಇವರೆಲ್ಲಾ ಯತ್ನಾಳ್ ಜೊತೆ ಬರುವುದಿಲ್ಲ ಎಂದು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಅವರಿಗೆ ನಾನು ಒತ್ತಾಯ ಮಾಡಲ್ಲ. ಅವರಾಗಿ ಬಂದರೆ ಮಾತ್ರ ಕರೆದುಕೊಳ್ಳುತ್ತೇವೆ ಎಂದರು.

























