Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ: ವಿವಾದಕ್ಕೆ ಕಾರಣವಾದ ಆಕ್ಷೇಪಾರ್ಹ ಫ್ಲೆಕ್ಸ್

ದಾವಣಗೆರೆ: ವಿವಾದಕ್ಕೆ ಕಾರಣವಾದ ಆಕ್ಷೇಪಾರ್ಹ ಫ್ಲೆಕ್ಸ್

0

ದಾವಣಗೆರೆ: ಅನ್ಯ ಕೋಮಿನ ಫ್ಲೆಕ್ಸ್ ಬೋರ್ಡ್ ಅಳವಡಿಕೆ ವಿಚಾರಕ್ಕೆ ಇಲ್ಲಿನ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಬುಧವಾರ ರಾತ್ರಿ ಕಲ್ಲು ತೂರಾಟವಾದ ಘಟನೆ ನಡೆದಿದೆ. ಉತ್ತರ ಭಾರತದಲ್ಲಿ ಕಂಡು ಬಂದ ‘ಐ ಲವ್ ಮೊಹಮ್ಮದ್’ ಫಲಕಗಳನ್ನು ದಾವಣಗೆರೆಯಲ್ಲೂ ರಾತ್ರೋ ರಾತ್ರಿ ಅನ್ಯ ಕೋಮಿನ ಜನರು ವಾಸಿಸುವ ಪ್ರದೇಶ, ದೇವಸ್ಥಾನದ ಬಳಿ ಅಳವಡಿಸಲು ಕೆಲವರು ವಿರೋಧ ವ್ಯಕ್ತಪಡಿಸಿದ್ದೇ ಗಲಾಟೆಗೆ ಕಾರಣ.

ಹಲವು ಮನೆಗಳನ್ನೇ ಗುರಿಯಾಗಿಸಿ ಅನ್ಯ ಕೋಮಿನವರು ಕಲ್ಲು ತೂರಾಟ ಮಾಡಿದ್ದಾರೆಂಬುದು ಮತ್ತೊಂದು ಕೋಮಿನವರು ಆರೋಪಿಸಿದ್ದಾರೆ. ಕಾರ್ಲ್ ಮಾರ್ಕ್ಸ್ ನಗರದಲ್ಲಿ ಬುಧವಾರ ರಾತ್ರಿಯಿಂದಲೇ ಬಿಗುವಿನ ಸ್ಥಿತಿ ನಿರ್ಮಾಣವಾಗಿದೆ.

ತಮ್ಮ ಪಾಡಿಗೆ ತಾವು ಮನೆ ಬಾಗಿಲು ಹಾಕಿ ಮಲಗಿದ್ದವರ ಮನೆಗಳ ಮೇಲೆ ಕಲ್ಲು ತೂರಿದ್ದರಿಂದ ಮಹಿಳೆಯರು, ಮಕ್ಕಳು, ವಯೋವೃದ್ಧರು, ವಿಕಲಚೇತನರು ಪ್ರಾಣ ಕೈಯಲ್ಲಿಡಿದು ರಾತ್ರಿ ಕಳೆಯುವಂತಾಯಿತು. ಸ್ಥಳೀಯ ನಿವಾಸಿ ಮಹಿಳೆ, ಆಕೆಯ ಮಗ ಕಾರ್ಲ್ ಮಾರ್ಕ್ಸ್ ನಗರದ  ಘಟನೆಯ ಭೀಕರತೆಯನ್ನು ಮಾಧ್ಯಮದವರ ಮುಂದೆ ಬಿಚ್ಚಿಟ್ಟು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಇದೇ ಕಾರ್ಲ್ ಮಾರ್ಕ್ಸ್ ನಗರದ 1ನೇ ಕ್ರಾಸ್, 1ನೇ ಮುಖ್ಯರಸ್ತೆಯ ಕಸ್ತೂರಮ್ಮ, ಚಿತ್ರವೇಲು ಎಂಬುವರ ಮನೆಗಳ ಮೇಲೂ ಕಲ್ಲು ತೂರಾಟ ಮಾಡಲಾಗಿದೆ. ಆ ಭಾಗದಲ್ಲಿ ‘ಐ ಲವ್ ಮಹಮ್ಮದ್’ ಎಂಬ ಫ್ಲೆಕ್ಸ್ ಬೋರ್ಡ್ ಹಾಕಲಾಗಿತ್ತು.

ಬೋರ್ಡ್ ಹಾಕಿದ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಆರಂಭದಲ್ಲಿ ಸಣ್ಣ ವಾಗ್ವಾದ ಶುರುವಾಗಿ ಅದು ಗಲಾಟೆಗೆ ತಿರುಗಿದೆ. ಸ್ಥಳಕ್ಕೆ ಆಜಾದ್ ನಗರ ಠಾಣೆ ಅಧಿಕಾರಿ, ಸಿಬ್ಬಂದಿ ಸೇರಿದಂತೆ ವಿವಿಧ ಠಾಣೆ ಅಧಿಕಾರಿ, ಸಿಬ್ಬಂದಿ ದೌಡಾಯಿಸಿ, ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಗಾಯಾಳುಗಳಿಗೆ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ.

ಸದ್ಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಿದ್ದು, ಗಸ್ತು ಹೆಚ್ಚಿಸಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಉಭಯ ಸಮಾಜದ ಮುಖಂಡರನ್ನು ಸ್ಥಳಕ್ಕೆ ಕರೆಸಿ, ಮಾತುಕತೆ ನಡೆಸಿದ್ದಾರೆ.

ನಾವೆಲ್ಲರೂ ಹಿಂದಿನಿಂದಲೂ ಅನ್ಯೋನ್ಯವಾಗಿದ್ದೇವೆ, ನಮ್ಮವರು ಯಾರೂ ಕಲ್ಲೆಸೆದಿಲ್ಲ. ಸುಳ್ಳು ಹೇಳಬೇಡಿ ಎಂದು ಒಂದು ಸಮುದಾಯದ ಜನರು ಹೇಳುತ್ತಿದ್ದಾರೆ. ಮತ್ತೊಂದು ಕಡೆ ಮನೆ ಮೇಲೆ ಕಲ್ಲುಗಳನ್ನು ಎಸೆದು, ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ ಎಂದೂ ಆರೋಪಿಸಲಾಗಿದೆ.

ಎರಡೂ ಸಮಯದಾಯದವರು ಪರಸ್ಪರ ಆರೋಪಗಳನ್ನು ಮಾಡಿದ್ದು, ಸಮಾಧಾನಪಡಿಸಲು ಪೊಲೀಸರು ಹರಸಾಹಸಪಟ್ಟರು. ಇತ್ತ ಜಿಲ್ಲಾ ಆಸ್ಪತ್ರೆಯ ಬಳಿ ಗಾಯಾಳುಗಳಿಗೆ ಚಿಕಿತ್ಸೆಗೆ ಆಗಮಿಸಿದಾಗ ವಿವಿಧ ಸಂಘನೆಯ ಮುಖಂಡರು ಬಂದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version