ದಾವಣಗೆರೆ: ರೈತರು ಬೆಳೆದಿರುವ ಮೆಕ್ಕೆಜೋಳ ಮತ್ತು ಭತ್ತಕ್ಕೆ ಖರೀದಿ ಕೇಂದ್ರ ತೆರೆಯಲು ಮತ್ತು ಕಬ್ಬಿಗೆ ಎಫ್ ಆರ್ ಪಿ ದರ ನಿಗದಿಗೊಳಿಸಲು ಆಗ್ರಹಿಸಿ ರಾಜ್ಯ ಬಿಜೆಪಿಯಿಂದ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ನೆತ್ತಿ ಸುಡುವ ಬಿಸಿಲಿನಲ್ಲೂ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಪ ಸದಸ್ಯ ಸಿ.ಟಿ. ರವಿ ನೇತೃತ್ವದಲ್ಲಿ ಪಕ್ಷದ ನಾಯಕರುಗಳು, ಮುಖಂಡರು ಮತ್ತು ಕಾರ್ಯಕರ್ತರು, ರೈತರೊಂದಿಗೆ ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬರ ಪ್ರತಿಭಟನೆಗೆ ಮಾಲಾರ್ಪಣೆ ಮಾಡಿ, ಬಾರ್ಕೋಲು ತೋರಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಸಿದರು. ಅಲ್ಲಿಂದ ಎತ್ತಿನ ಬಂಡಿಯ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಯ ಮುಂದೆ ಬಹಿರಂಗ ಸಭೆ ನಡೆಸಿ, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಒಂದೂವರೆ ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿ, ರಸ್ತೆ ಬದಿಯಲ್ಲಿ ನಡೆಸಿದ ಬಹಿರಂಗ ಸಭೆಯಿಂದಾಗಿ ವಾಹನ ಸವಾರರಿಗೆ ಪರ್ಯಾಯ ರಸ್ತೆ ಕಲ್ಪಿಸಿದರೂ ಸಹ ವಾಹನ ಸವಾರರು ಪರದಾಡುವಂತಾಯಿತು. ಅಷ್ಟೇ ಅಲ್ಲ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಪಕ್ಷದ ನಾಯಕರು ನೆತ್ತಿ ಸುಡುವ ಬಿಸಿಲ ತಾಪದ ಮಧ್ಯೆಯೂ ಭಾಷಣ ಮಾಡಿ ಕಾಂಗ್ರೆಸ್ ನ ರೈತ ವಿರೊಧಿ ನೀತಿ ಖಂಡಿಸಿದರು.
ಕೇಂದ್ರ ಸರ್ಕಾರ ಈಗಾಗಲೇ ಮೆಕ್ಕೆಜೋಳ ಮತ್ತು ಭತ್ತಕ್ಕೆ ತಲಾ 2400 ರಂತೆ ದರ ನಿಗದಿಗೊಳಿಸಿ ತನ್ನ ಪಾಲನ್ನೂ ನೀಡಿದ್ದರೂ ರಾಜ್ಯ ಸರ್ಕಾರ ಮೆಕ್ಕೆಜೋಳಕ್ಕೆ ತನ್ನ ಪಾಲಿನ 600 ರೂ., ಮತ್ತು ಭತ್ತಕ್ಕೆ 1000 ಹೆಚ್ಚುವರಿಯಾಗಿ ನೀಡಿ ಖರೀದಿಸಲು ಮುಂದಾಗುತ್ತಿಲ್ಲ.ಈದುವರೆಗೂ ಖರೀದಿ ಕೇಂದ್ರಗಳನ್ನು ತೆರೆಯುತ್ತಿಲ್ಲ ಮತ್ತು ಕಬ್ಬಿಗೆ ಬೆಂಬಲ ನಿಗದಿತ ದರ ಘೋಷಿಸುತ್ತಿಲ್ಲ ಎಂದು ಬಿಜೆಪಿ ನಾಯಕರುಗಳು ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್ ಕೇವಲ ಕುರ್ಚಿ ಕಾದಾಟದಲ್ಲಿಯೇ ಮೈ ಮರೆತಿದ್ದು, ದೇಶದ ಆರ್ಥಿಕತೆಗೆ ಪಾಲು ನೀಡುವ ರೈತರನ್ನು ಕಡೆಗಣಿಸಿದೆ. ಕಾಂಗ್ರೆಸ್ ನ ರೈತ ವಿರೋಧಿ ನೀತಿ ಖಂಡಿಸಿಯೇ ಹೊನ್ನಾಳಿಯಿಂದ ಆರಂಭಿಸಿದ ಕಿಚ್ಚು ಈಗ ವಿಧಾನಸೌಧ ಮತ್ತು ಸುವರ್ಣ ಸೌಧವನ್ನೂ ತಲುಪಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಎಂ. ಮಾಡಾಳು ವಿರೂಪಾಕ್ಷಪ್ಪ, ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ, ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಪಕ್ಷದ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಎಂ. ಬಸವರಾಜ್ ನಾಯ್ಕ್, ಬಿ.ಎಂ. ಸತೀಶ್ ಸೇರಿಂದಂತೆ ಮತ್ತಿತರರು ಉಪಸ್ಥಿತರಿದ್ದರು.

























