ದಾಂಡೇಲಿ : ರಾಜ್ಯ ಉಚ್ಛ ನ್ಯಾಯಾಲಯ ಧಾರವಾಡ ಪೀಠದಲ್ಲಿ ಒಂದೇ ಪ್ರಕರಣಕ್ಕೆ ಸೇರಿದ ಎರಡು ಸಿವಿಲ್ ಕಂಟೆಪ್ಪ್ ಪಿಟಿಷನ್ ನ್ಯಾಯಾಲಯದ ಗಮನಕ್ಕೆ ಬಂದಿದ್ದು, ದಾಂಡೇಲಿ ನಗರಸಭೆ ಪೌರಾಯುಕ್ತ ವಿವೇಕ ಬನ್ನೆ ಅವರು ಹೈಕೋರ್ಟ್ ಆದೇಶದ ಉಲ್ಲಂಘನೆ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಿಂದಿನ ಪೌರಾಯುಕ್ತ ರಾಜಾರಾಮ ಪವಾರ ನಿರ್ಲಕ್ಷಕ್ಕೆ ನೂತನವಾಗಿ ವರ್ಗವಾಗಿ ಬಂದ ಪೌರಾಯುಕ್ತ ವಿವೇಕ ಬನ್ನೆ ನ್ಯಾಯಾಲಯದ ವಿಚಾರಣೆ ಎದುರಿಸುವಂತಾಗಿತ್ತು. ದಾಂಡೇಲಿಯ ಅಂಬೇವಾಡಿಯ ಬರ್ಚಿ ರಸ್ತೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿ.ಆರ್.ಪಾಟೀಲ ಮತ್ತು ಚೆನ್ನವೀರಪ್ಪ ಕಲ್ಲಪ್ಪ ಸುಳ್ಳದ ನಡುವೆ ದಾಂಡೇಲಿ ಸಿವಿಲ್ ನ್ಯಾಯಾಲಯದಲ್ಲಿ ವ್ಯಾಜ್ಯವೊಂದು ನಡೆದಿತ್ತು.
ದಾಂಡೇಲಿ ಸಿವಿಲ್ ನ್ಯಾಯಾಲಯ ಚೆನ್ನವೀರಪ್ಪ ಸುಳ್ಳದ ವಿರುದ್ಧ ಖಾಯಂ ಮನಾಯಿ ಹುಕುಂ ಆದೇಶ ನೀಡಿತ್ತು. ಮನಾಯಿ ಹುಕುಂ ಆದೇಶವಿದ್ದಾಗ್ಯೂ ಚೆನ್ನವೀರಪ್ಪ ಸುಳ್ಳದ ಕಟ್ಟಡ ಕಟ್ಟುವ ಕಾರ್ಯ ಮುಂದುವರೆಸಿದ್ದರು. ಎದುರುದಾರ ಬಿ.ಆರ್.ಪಾಟೀಲ ನಗರ ಸಭೆ ಪೌರಾಯುಕ್ತರ ಗಮನಕ್ಕೆ ನ್ಯಾಯಾಲಯದ ಆದೇಶ ತಂದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಈ ಹಿನ್ನಲೆಯಲ್ಲಿ ಬಿ.ಆರ್.ಪಾಟೀಲ ಧಾರವಾಡದ ಹೈಕೋರ್ಟ ಪೀಠಕ್ಕೆ ರಿಟ್ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ ರಿಟ್ ಅರ್ಜಿ ವಿಚಾರಣೆ ನಡೆಸಿ ನಗರಸಭೆಗೆ ಅನಧಿಕ್ರತ ನಿರ್ಮಾಣ ತೆರವುಗೊಳಿಸಿ ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ಹೈಕೋರ್ಟಿನ ಆದೇಶವನ್ನು ಪೌರಾಯುಕ್ತರು ನಾಲ್ಕು ತಿಂಗಳಾದರೂ ಪಾಲಿಸದೇ ಕಡೆಗಣಿಸಿರುವುದನ್ನು ಅರ್ಜಿದಾರರು ಸಿವಿಲ್ ಕಂಟೆಫ್ಟ್ ಪಿಟಿಶನ್ ಸಲ್ಲಿಸಿ ಹೈಕೋರ್ಟಿನ ಗಮನಕ್ಕೆ ತಂದಿದ್ದು, ಹೈಕೋರ್ಟ ಪೌರಾಯುಕ್ತ ವಿವೇಕ ಬನ್ನೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿತು.
ಪೌರಾಯುಕ್ತರು ಹಾಜರಾಗಿ ಹಿಂದಿನ ಪೌರಾಯುಕ್ತರ ಅವಧಿಯಲ್ಲಿ ಆದದ್ದು, ತಾನು ಈಗಷ್ಟೆ ವರ್ಗವಾಗಿ ಬಂದಿರುವುದಾಗಿ ನ್ಯಾಯಾಲಯದ ಗಮನಕ್ಕೆ ತಂದು ನ್ಯಾಯಾಲಯ ಆದೇಶ ಪಾಲಿಸುವುದಾಗಿ ಹೇಳಿದ್ದರಿಂದ ಹೈ ಕೋರ್ಟ್ ಕಟ್ಟಡ ಕೆಡವಿ ವರದಿ ಸಲ್ಲಿಸಲು ಆದೇಶ ನೀಡಿ ಕಂಟೆ ಪ್ಟ್ ಪಿಟಿಶನ್ ಇತ್ಯರ್ಥಪಡಿಸಿತು.
ಪೌರಾಯುಕ್ತರು ನಂತರ ಚೆನ್ನವೀರಪ್ಪ ಸುಳ್ಳದ ಅವರಿಗೆ ಕಟ್ಟಡ ತೆರವುಗೊಳಿಸುವಂತೆ ಎರಡು ನೋಟಿಸು ನೀಡಿ, ಪೋಲಿಸ್ ಠಾಣೆಗೂ ಕಟ್ಟಡ ಕೆಡವಲು ಹೋಗುವಾಗ ಬಂದೋಬಸ್ತ ನೀಡುವಂತೆ ಪತ್ರ ಬರೆದು ವಿಳಂಬಿಸಿದರು. ಈ ನಡುವೆ ನಗರಸಭೆಯ ನೋಟಿಸು ಪಡೆದು ಚೆನ್ನವೀರಪ್ಪ ಹೈಕೋರ್ಟಿಗೆ ನಗರಸಭೆ ವಿರುದ್ಧ ರಿಟ್ ಅರ್ಜಿ ದಾಖಲಿಸಿ ತಡೆಯಾಜ್ಞೆ ಕೇಳಿದ್ದು ನ್ಯಾಯಾಲಯ ರಿಟ್ ಅರ್ಜಿಯನ್ನು ತಿರಸ್ಕರಿಸಿದೆ.
ನಗರಸಭೆಯಿಂದ ಹೈಕೋರ್ಟಿನ ಆದೇಶದ ಪಾಲನೆಯಾಗುತ್ತಿಲ್ಲ ಎಂದು ಬಿ.ಆರ್.ಪಾಟೀಲ ಮತ್ತೇ ಹೈಕೋರ್ಟಿಗೆ ಎರಡನೇ ಬಾರಿಗೆ ಸಿವಿಲ್ ಕಂಟೆಪ್ಟ್ ಪಿಟಿಶನ್ (FR No.100353 / 2025) ಗುರುವಾರ ಸಲ್ಲಿಸಿದ್ದು ಅರ್ಜಿ ವಿಚಾರಣೆಗೆ ಸ್ವೀಕೃತವಾಗಿದೆ. ದಾಂಡೇಲಿ ನಗರಸಭಾ ಪೌರಾಯುಕ್ತರು ನ್ಯಾಯಾಲಯದ ಕಟಕಟೆಗೆ ಮತ್ತೊಮ್ಮೆ ನಿಲ್ಲುವಂತ ಸಂಕಟ ಎದುರಾಗಿದೆ.