ಧರ್ಮಸ್ಥಳದಲ್ಲಿ ನಡೆದ ಅನಧಿಕೃತ ಶವ ಹೂತ ಪ್ರಕರಣಗಳ ಆರೋಪ, ನಂತರ ತಮ್ಮ ಮಗಳು ಅನನ್ಯಾ ಭಟ್ ಕಾಣೆಯಾಗಿದ್ದಾರೆಂದು ಸುಳ್ಳು ಹೇಳಿಕೆ ನೀಡಿ ಭಾರೀ ಟೀಕೆಗಳಿಗೆ ಗುರಿಯಾಗಿದ್ದ ಸುಜಾತಾ ಭಟ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.
ಆದರೆ ಈ ಬಾರಿ ದೂರಿಗಲ್ಲ, ಬದಲಿಗೆ ಕ್ಷಮೆ ಕೇಳುವುದಕ್ಕೆ! ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿರುವ ಸುಜಾತಾ ಭಟ್, ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿ, ಅಣ್ಣಪ್ಪ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕ್ಷಮೆ ಯಾಚಿಸುವುದಾಗಿ ಹೇಳಿದ್ದಾರೆ.
ಈ ಹಿಂದೆ ತಾವು “ಪಾತ್ರಧಾರಿ ಮಾತ್ರ, ಸೂತ್ರಧಾರಿ ಎಲ್ಲ ಆ ದೇವರೇ” ಎಂದು ಹೇಳುವ ಮೂಲಕ ತಮ್ಮ ತಪ್ಪುಗಳಿಗೆ ಪರೋಕ್ಷವಾಗಿ ದೈವಿಕ ಪ್ರೇರಣೆಯನ್ನು ಹೊರಿಸಿದ್ದ ಸುಜಾತಾ ಭಟ್, ಈಗಲೂ ಅದೇ ನಿಲುವನ್ನು ಮುಂದುವರೆಸಿದ್ದಾರೆ.
“ಆ ದೇವರೇ ಪ್ರೇರಣೆ ಕೊಟ್ಟಿರುವುದು ಈ ಪಾತ್ರವೂ ಮಾಡಿಬಿಡಿ ಅಂತ ಹಾಗಾಗಿ ಮಾಡಿಬರುತ್ತೇನೆ” ಎಂದು ಹೇಳುವ ಮೂಲಕ ತಮ್ಮ ಕಾರ್ಯಗಳನ್ನು ಒಂದು ದೈವಿಕ ನಾಟಕದ ಭಾಗವೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಸುಜಾತಾ ಭಟ್, “ನಾನು ಧರ್ಮಸ್ಥಳಕ್ಕೆ ಹೋಗುತ್ತೇನೆ, ಹೋಗ್ಲೇಬೇಕು. ನಾನು ಏನು ಮಾತನಾಡಿದ್ದೇನೆ, ಅದರ ಬಗ್ಗೆ ನನಗೆ ಪಶ್ಚಾತಾಪ ಇದೆ. ಅದಕ್ಕೆ ಹೋಗಿ ಧರ್ಮಸ್ಥಳ ಮಂಜುನಾಥ, ಹಾಗೂ ಅಣ್ಣಪ್ಪನಿಗೂ ಕ್ಷಮೆ ಕೇಳಿ, ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಬಳಿಗೂ ಹೋಗಿ ದೀರ್ಘದಂಡ ನಮಸ್ಕಾರ ಮಾಡಿ ಬರುತ್ತೇನೆ. ಸದ್ಯದಲ್ಲೇ ಹೋಗಲಿದ್ದೇನೆ, ಯಾವಾಗೆಂದು ನಿರ್ಧಾರ ಮಾಡಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಬುರುಡೆ ಗ್ಯಾಂಗ್ ಬಗ್ಗೆ ನನಗೆ ಗೊತ್ತಿಲ್ಲ. ನನ್ನದೇ ಪ್ರತ್ಯೇಕ, ಅವರೇ ಪ್ರತ್ಯೇಕ, ಅವರಿಗೆ ಹೋಲಿಸುವಂತದ್ದು ಬೇಡ. ನನ್ನದೇ ರೀತಿಯ ತಾರ್ಕಿಕ ಅಂತ್ಯ ಕೊಡಲು, ಸತ್ಯ ಏನಿದೆ ಅದನ್ನು ಎಸ್ ಐಟಿಗೆ ಹೇಳಿ ಬಂದಿದ್ದೇನೆ” ಎಂದೂ ಹೇಳಿದ್ದಾರೆ.
ತಮ್ಮ ಬಗ್ಗೆ ಹರಡಿರುವ ವದಂತಿಗಳ ಕುರಿತು ಪ್ರತಿಕ್ರಿಯಿಸಿ “ಸುಜಾತಾ ಭಟ್ ಗೆ ವಾಚ್ ಭಾಗ್ಯ, ಮೊಬೈಲ್ ಭಾಗ್ಯ, ದುಡ್ಡಿನ ಭಾಗ್ಯ ಎಂದೆಲ್ಲ ಹೇಳುವವರು ಯಾರೇ ಆಗ್ಲಿ ಕಣ್ಣಾರೆ ಕಾಣಬೇಕು, ಕಿವಿಯಾರೆ ಕೇಳಿದ್ದನ್ನು ಮಾತ್ರ ಮಾತನಾಡಬೇಕು. ಏನಿದೆ, ಯಾರು ಕೊಟ್ಟಿದ್ದಾರೆ ನನಗೆ ದುಡ್ಡು? ನನ್ನ ಬಳಿ ನಾನೇ ಕಷ್ಟಪಟ್ಟು ತಗೊಂಡ ಮೊಬೈಲ್ ಇದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಸುಜಾತಾ ಭಟ್ ಈ ನಡೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ. ಕ್ಷಮೆಯಾಚನೆಯ ಹಿಂದೆ ನಿಜವಾದ ಪಶ್ಚಾತ್ತಾಪವಿದೆಯೇ ಅಥವಾ ಇದು ಮತ್ತೊಂದು “ಪಾತ್ರ”ವೇ ಎಂಬುದು ಕಾಲವೇ ಉತ್ತರಿಸಬೇಕಿದೆ. ಧರ್ಮಸ್ಥಳದಲ್ಲಿ ಸುಜಾತಾ ಯಾವ ರೀತಿಯ ಸ್ವಾಗತ ಪಡೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕು.