ಸಂ. ಕ. ಸಮಾಚಾರ, ಮಂಜೇಶ್ವರ: ರೌಡಿ ಟೋಪಿ ನೌಫಾಲ್ (೩೮) ಎಂಬಾತನನ್ನು ಮಂಜೇಶ್ವರ ಠಾಣೆ ವ್ಯಾಪ್ತಿಯ ಉಪ್ಪಳ ರೈಲ್ವೇ ಗೇಟ್ ಬಳಿ ಬರ್ಬರವಾಗಿ ಕಡಿದು ಕೊಲೆ ಮಾಡಿರುವ ಘಟನೆ ಇಂದು ನಡೆದಿದೆ.
ಟೋಪಿ ನೌಫಾಲ್ ಮಂಗಳೂರು ನಗರದ ಬಜಾಲ್ ಫೈಸಲ್ ನಗರದ ನಿವಾಸಿಯಾಗಿದ್ದು, ಮಂಗಳೂರಿನಲ್ಲಿ ಡ್ರಗ್ಸ್ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೆಚ್ಚಿದ ನಂತರ ಕಾಸರಗೋಡು ಭಾಗದಲ್ಲಿ ಸಕ್ರಿಯವಾಗಿದ್ದ. ಇಂದು ಬೆಳಗ್ಗೆ ೮ ಗಂಟೆ ವೇಳೆಗೆ ಉಪ್ಪಳ ಗೇಟ್ ಬಳಿಗೆ ಕರೆಸಿದ್ದ ತಂಡ ತಲವಾರುಗಳಿಂದ ಕಡಿದು ಹಾಕಿದೆ.
ಮಂಜೇಶ್ವರ ಪೊಲೀಸರು ಶವವನ್ನು ಪೆರಿಯಾರಂ ಮೆಡಿಕಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ೨೦೧೭ ರಲ್ಲಿ ಫರಂಗಿಪೇಟೆಯಲ್ಲಿ ನಡೆದ ಜಿಯಾ ಮತ್ತು ಇನ್ನೋರ್ವನ ಡಬಲ್ ಮರ್ಡರ್ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿದ್ದ, ಆ ಸಂದರ್ಭದಲ್ಲಿ ಮಾರಿಪಳ್ಳ ಜಬ್ಬಾರ್, ತಲ್ಲತ್ ಗ್ಯಾಂಗ್ ಜೊತೆಗೆ ಗುರುತಿಸಿಕೊಂಡಿದ್ದ.
ಈತ ವಸೂಲಿ, ಡ್ರಗ್ಸ್, ಅಕ್ರಮ ಗೋಲ್ಡ್ ವಹಿವಾಟಿನಲ್ಲಿ ಇದ್ದ ಎನ್ನಲಾಗಿದೆ. ವಾಮಂಜೂರು, ಸುರತ್ಕಲ್, ಕಾವೂರು ಸೇರಿ ಹಲವು ಕಡೆಗಳಲ್ಲಿ ಕೇಸುಗಳು ಮೃತನ ಮೇಲೆ ಇದ್ದವು. ಜಿಯಾ ಕೇಸಿನಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ. ಉಪ್ಪಳ ಗೇಟ್ ಬಳಿಯಲ್ಲಿ ಕೊಲೆ ಆಗಿರುವುದರಿಂದ ಅಲ್ಲಿನದ್ದೇ ಗ್ಯಾಂಗ್ ಈ ಕೃತ್ಯ ಮಾಡಿರುವ ಸಾಧ್ಯತೆಯಿದೆ ಎನ್ನಲಾಗಿದ್ದು, ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

























