ಕೇರಳದ 11 ವಿದ್ಯಾರ್ಥಿಗಳಿಂದ ಬರೋಬ್ಬರಿ 12 ಕೆಜಿ ಗಾಂಜಾ ವಶ: ಮಂಗಳೂರಿನಲ್ಲಿ ಭಾರಿ ಕಾರ್ಯಾಚರಣೆ

0
8

ಮಾದಕವಸ್ತು ಜಾಲದ ವಿರುದ್ಧ ಮಂಗಳೂರು ಪೊಲೀಸರು ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕೇರಳ ಮೂಲದ 11 ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿ, ಅವರಿಂದ ಬರೋಬ್ಬರಿ 12.26 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.

ಖಚಿತ ಸುಳಿವಿನ ಮೇರೆಗೆ ಮಂಗಳೂರು ದಕ್ಷಿಣ ಠಾಣೆಯ ಪಿಎಸ್‌ಐ ಶೀತಲ್ ಅಲಗೂರ್ ನೇತೃತ್ವದ ತಂಡ ಅತ್ತಾವರದ ಕಪ್ರಿಗುಡ್ಡೆ ಮಸೀದಿ ಸಮೀಪದ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ನಡೆಸಿತು. ಈ ವೇಳೆ, ಒಡಿಶಾದಿಂದ ತರಲಾದ ಬರೋಬ್ಬರಿ 12.26 ಕೆಜಿ ಗಾಂಜಾ ಪತ್ತೆಯಾಗಿದೆ. ಅದನ್ನು ಏಳು ಸಣ್ಣ ಪೊಟ್ಟಣಗಳಲ್ಲಿ ಪ್ಯಾಕ್ ಮಾಡಿ ಮಾರಾಟಕ್ಕೆ ಸಿದ್ಧಪಡಿಸಲಾಗಿತ್ತು. ಇದರ ಮೌಲ್ಯ ಸುಮಾರು 2.45 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ವಶಪಡಿಸಿಕೊಂಡ ಇತರೆ ವಸ್ತುಗಳು: ಪೊಲೀಸರು ಗಾಂಜಾದೊಂದಿಗೆ 2,000 ರೂಪಾಯಿ ಮೌಲ್ಯದ ತೂಕದ ಯಂತ್ರಗಳು ಮತ್ತು 1.05 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಒಟ್ಟು ಆಸ್ತಿಯ ಮೌಲ್ಯ ಸುಮಾರು 3.52 ಲಕ್ಷ ರೂಪಾಯಿಗಳಾಗಿದೆ. ಈ ವಿದ್ಯಾರ್ಥಿಗಳು ಕಾಲೇಜು ವ್ಯಾಸಂಗಕ್ಕಾಗಿ ನಗರದಲ್ಲಿ ತಂಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಂದಿನ ತನಿಖೆ: ಈ ಪ್ರಕರಣದ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 1985ರ ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯಡಿ (NDPS) ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಈ ಜಾಲದಲ್ಲಿ ಭಾಗಿಯಾಗಿರುವ ಇತರೆ ಶಂಕಿತರನ್ನು ಮತ್ತು ದೊಡ್ಡ ಮಟ್ಟದ ಜಾಲವನ್ನು ಪತ್ತೆಹಚ್ಚುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿಕ್ಷಣದ ನೆಪದಲ್ಲಿ ಮಾದಕವಸ್ತು ಮಾರಾಟದಲ್ಲಿ ತೊಡಗಿದ್ದ ವಿದ್ಯಾರ್ಥಿಗಳ ಬಂಧನ ನಗರದಲ್ಲಿ ಸಂಚಲನ ಮೂಡಿಸಿದೆ.

ಪೋಲೀಸ್ ರಿಯಾಕ್ಷನ್: ಮಂಗಳೂರು ನಗರದ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ  ಮಾತನಾಡಿ, ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳಿಗೆ ಸಪ್ಲೈ ಮಾಡಲು, ಎಲ್ಲ ಸಿದ್ಧತೆ ಮಾಹಿತಿ ತಿಳಿದು ಬಂದಿತ್ತು. ಖಚಿತ ಮಾಹಿತಿ ಮೇರೆಗೆ ನಮ್ಮ ಅಧಿಕಾರಿಗಳು ಗಾಂಜಾ ಮತ್ತು ಎಲ್ಲ ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ. ಮಾಹಿತಿ ನೀಡಿದವರಿಗೆ ಧನ್ಯವಾದಗಳು ಎಂದಿದ್ದಾರೆ.

Previous articleಸೈಬರ್ ವಂಚನೆ ಪ್ರಯತ್ನ: ಜಾಗೃತಿ ಮೂಡಿಸಿದ ಸುಧಾ ಮೂರ್ತಿ
Next articleಉತ್ತರ ಕನ್ನಡ ಜಿಲ್ಲೆಗೆ ಅಘನಾಶಿನಿ – ವೇದಾವತಿ ನದಿ ತಿರುವು ಯೋಜನೆ – ಪೂರ್ವ ಸಾಧ್ಯತಾ ವರದಿಯ ಮಾಹಿತಿ ಬಹಿರಂಗ

LEAVE A REPLY

Please enter your comment!
Please enter your name here