ಮಂಗಳೂರು: ಭೀಕರ ಅಪಘಾತ ಸ್ಥಳದಲ್ಲೇ 5 ಜನರು ಸಾವು

0
31

ಮಂಗಳೂರು ತಲಪಾಡಿ ಬಳಿ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಬಸ್ ಹಿಮ್ಮುಖವಾಗಿ ಚಲಿಸಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ 6 ಮಂದಿ ಮೃತಪಟ್ಟಿದ್ದಾರೆ.

ಗುರುವಾರ ಮಧ್ಯಾಹ್ನದ ವೇಳೆಗೆ ತಲಪಾಡಿಯ ಮೇಲಿನ ಪೇಟೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ರಸ್ತೆ ಅಪಘಾತದಲ್ಲಿ 5 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ಆಸ್ಪತೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತರು ಕೆಸಿ ರೋಡ್ ಮೂಲದವರೆಂದು ತಿಳಿದುಬಂದಿದೆ. ಘಟನೆ ಮಧ್ಯಾಹ್ನ 1.30ರ ಸುಮಾರಿಗೆ ನಡೆದಿದ್ದು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದಂತೆ ಮೃತರೆಲ್ಲರೂ ಒಂದೇ ಕುಟುಂಬದವರು ಎಂದು ಪೊಲೀಸರು ದೃಢಪಡಿಸಿದ್ದಾರೆ.

ಇದಲ್ಲದೆ ಒಂದು ಮಗು ಕೂಡ ಸಾವನ್ನಪ್ಪಿದೆ. ಅಪಘಾತದ ಸಮಯದಲ್ಲಿ ಆಶ್ರಯ ನಿಲ್ದಾಣದ ಬಳಿ ನಿಲ್ಲಿಸಿದ್ದ ಆಟೋರಿಕ್ಷಾದಲ್ಲಿ ಕೆಲವರು ಕುಳಿತಿದ್ದರು. ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಎಸ್ಆರ್‌ಟಿಸಿ ಪ್ರಕಟಣೆ: ಈ ಅಪಘಾತದ ಬಗ್ಗೆ ಕೆಎಸ್ಆರ್‌ಟಿಸಿ ಪ್ರಕಟಣೆ ಬಿಡುಗಡೆ ಮಾಡಿದೆ. ಅಕ್ರಂ‌ ಪಾಷ, ವ್ಯವಸ್ಥಾಪಕ ನಿರ್ದೇಶಕರು, ಕೆ‌ಎಸ್‌ಆರ್ ಟಿ‌ಸಿ ಈ ಕುರಿತು ಮಾಹಿತಿ ನೀಡಿದ್ದಾರೆ.

ದಿನಾಂಕ 28.08.2025ರಂದು ವಿಭಾಗದ ಮಂಗಳೂರು-1ನೇ ಘಟಕದ ವಾಹನ ಸಂಖ್ಯೆ ಏಂ19ಈ3407 ಮಾರ್ಗಸಂಖ್ಯೆ 129/130 ಕಾಸರಗೋಡು – ಮಂಗಳೂರು ಮಾರ್ಗದಲ್ಲಿ ಚಾಲಕರಾಗಿ ನಿಜಲಿಂಗಪ್ಪ ಚಲವಾದಿ ಕರ್ತವ್ಯ ನಿರ್ವಹಿಸುವಾಗ ಸಮಯ ಸುಮಾರು 12.30 – 12.35 ರಲ್ಲಿ ಕಾಸರಗೋಡು ನಿಂದ ನಿರ್ಗಮಿಸಿ ಸಮಯ 13:45ಕ್ಕೆ ತಲಪಾಡಿ ಟೋಲ್ ಗಿಂತ 150 ಮೀಟರ್ ಹಿಂದಕ್ಕೆ ನಿಗಮದ ಚಾಲಕರು ತಮ್ಮ ವಾಹನವನ್ನು ಅತೀವೇಗವಾಗಿ ಚಾಲನೆ ಮಾಡಿಕೊಂಡು ಬರುವ ಸಮಯದಲ್ಲಿ ಏಕಾಏಕಿ ರಸ್ತೆಗೆ ಅಡ್ಡ ಬಂದ ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ವಾಹನದ ಬ್ರೇಕ್ ಹಾಕಿದ್ದಾರೆ.

ಅಷ್ಟರಲ್ಲಿ ನಿಗಮದ ವಾಹನ ಆಟೋಗೆ ಮಾರಣಾಂತಿಕ ಡಿಕ್ಕಿಯಾಗಿದ್ದು, ಆ ಸಂದರ್ಭದಲ್ಲಿ ನಿಗಮದ ವಾಹನವು ಡಿಕ್ಕಿಯಾಗಿ ಹಠಾತ್ತನೆ ಸ್ಕಿಡ್‌ ಆಗಿ ತಿರುಗಿ ನಿಂತಿದ್ದು, ಚಾಲಕರು ಚಾಲನಾ ಸೀಟಿನಿಂದ ಓಡಿ ಹೋಗಿದ್ದು, ವಾಹನವು ಇಳಿಜಾರು ರಸ್ತೆಯಲ್ಲಿ ಹಿಮ್ಮುಖವಾಗಿ ಚಲಿಸಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಅಟೋ ಮತ್ತು ಬಸ್ಸಿಗೆ ಕಾಯುತ್ತಿದ್ದ ಪ್ರಯಾಣಿಕರಿಗೆ ಡಿಕ್ಕಿಯಾಗಿ ನಿಂತಿರುತ್ತದೆ.

ಅಪಘಾತದಲ್ಲಿ ಮುಂದಿನಿಂದ ಡಿಕ್ಕಿಹೊಡೆದ ಆಟೋದಲ್ಲಿ 2 ಜನ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನುಳಿದ ಆಟೋ ಚಾಲಕ ಸೇರಿ 4 ಜನ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಹಿಂಬದಿಯಿಂದ ಡಿಕ್ಕಿಯಾಗಿದ್ದ 2 ಜನ ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ.

ಸದರಿ ಚಾಲಕರು ಸುಮಾರು 14 ವರ್ಷಗಳಿಂದ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿ ಮಾರ್ಗದಲ್ಲಿಯೇ ಸುಮಾರು 3 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಚಾಲಕರ ಅತಿಯಾದ ವೇಗ ಮತ್ತು ಅಜಾಗರೂಕತೆ ಈ ಅಪಘಾತಕ್ಕೆ ಕಾರಣವಾಗಿದೆ. ಗಾಯಗೊಂಡ ಇತರೆ ಸಾರ್ವಜನಿಕರ ವೈದ್ಯಕೀಯ ವೆಚ್ಚವನ್ನು ನಿಗಮವು ಭರಿಸಲಿದೆ. ನಿಗಮವು ಈ ಅಪಘಾತಕ್ಕೆ ತೀವ್ರ ವಿಷಾದವನ್ನು ವ್ಯಕ್ತಪಡಿಸುತ್ತದೆ ಎಂದು ಹೇಳಿದೆ.

Previous articleಹಾಸನ: ಗ್ರಾಮೀಣ ಪ್ರದೇಶಗಳಲ್ಲಿ ಭತ್ತ ನಾಟಿ ಬಹುತೇಕ ಪೂರ್ಣ
Next articleಹುಬ್ಬಳ್ಳಿ: ಚನ್ನಮ್ಮ ಮೈದಾನದಲ್ಲಿ ಕೃಷ್ಣರೂಪಿ ಗಣಪತಿ ಪ್ರತಿಷ್ಠಾಪನೆ

LEAVE A REPLY

Please enter your comment!
Please enter your name here