ಮಂಗಳೂರು: ಬಿಜೆಪಿ ನಾಯಕರು ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಎಸ್‌ಐಟಿ ತನಿಖೆಯ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಬಿಜೆಪಿ ನಾಯಕರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕರ್ನಾಟಕದ ಬಿಜೆಪಿ ನಾಯಕರು ಭಾನುವಾರ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದರು ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಭೇಟಿ ಮಾಡಿದರು.
ಈ ಕುರಿತು ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು,’ಧರ್ಮಸ್ಥಳ ಕ್ಷೇತ್ರದ ಕುರಿತು ನಿರಂತರವಾಗಿ ನಡೆಯುತ್ತಿರುವ ಅಪಪ್ರಚಾರದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ಶಾಸಕರ ನಿಯೋಗವು ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿತು’ ಎಂದು ಪೋಸ್ಟ್‌ನಲ್ಲಿ ಹೇಳಿದೆ.
‘ನಿಯೋಗದಲ್ಲಿ ಸಂಸದರಾದ ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸ್ಥಳೀಯ ಶಾಸಕರಾದ ಶ್ರೀ ಹರೀಶ್ ಪೂಂಜಾ, ಬಿಜಿಪಿ ಶಾಸಕರು, ಪರಿಷತ್ ಸದಸ್ಯರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು’ ಎಂದು ಬಿಜೆಪಿ ತಿಳಿಸಿದೆ.
ಬಿ.ವೈ.ವಿಜಯೇಂದ್ರ ಪೋಸ್ಟ್: ಧರ್ಮಸ್ಥಳ ಭೇಟಿ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪೋಸ್ಟ್ ಹಾಕಿದ್ದು, “ಸತ್ಯದ ಬಾಗಿಲು ತೆರೆಯಲಿದೆ ಧರ್ಮದ ಬೆಳಕು ಬೆಳಗಲಿದೆ” ಎಂದು ಹೇಳಿದ್ದಾರೆ.
ಪಕ್ಷದ ಕರಾವಳಿ ಭಾಗದ ನಮ್ಮೆಲ್ಲ ಶಾಸಕ ಮಿತ್ರರೊಂದಿಗೆ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯವರ ದರ್ಶನಾಶೀರ್ವಾದ ಪಡೆದು, ಧರ್ಮಾಧಿಕಾರಿಗಳಾದ ಮಾನ್ಯ ಶ್ರೀ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದವನ್ನೂ ಸಹ ಪಡೆಯಲಾಯಿತು.
ನಾಡಿನ ಕೋಟ್ಯಂತರ ಭಕ್ತರ ಧಾರ್ಮಿಕ ಶ್ರದ್ಧಾ ಕೇಂದ್ರ ವಿರುದ್ಧ ಧರ್ಮಸ್ಥಳದ ಶ್ರೇಷ್ಠತೆಯನ್ನು ಎತ್ತಿ ಹಿಡಿಯಲು ಬಿಜೆಪಿ ಕಟ್ಟಿಬದ್ಧವಾಗಿ ಧರ್ಮಸ್ಥಳದ ಭಕ್ತರ ದನಿಯಾಗಿ ನಿಲ್ಲಲಿದೆ. SIT ತನಿಖೆಯನ್ನು ಯಾರು ವಿರೋಧಿಸಿಲ್ಲ, ಸತ್ಯದ ಬಾಗಿಲು ತೆರೆಯಲಿದೆ, ಧರ್ಮಸ್ಥಳದ ಧರ್ಮದ ಬೆಳಕು ಬೆಳಗಲಿದೆ ಎಂದು ತಿಳಿಸಿದ್ದಾರೆ.
ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿರುದ್ಧ ನಡೆಯುವ ಷಡ್ಯಂತ್ರಗಳಿಗೆ ಇನ್ನುಮುಂದೆ ತಕ್ಕ ಉತ್ತರ ಸಿಗಲಿದೆ. ರಾಜ್ಯ ಸರ್ಕಾರ ಧರ್ಮಸ್ಥಳದ ಹೆಸರಿನಲ್ಲಿ ಆಸಕ್ತ ಹಿತಾಸಕ್ತಿಗಳು ಸೃಷ್ಟಿಸಿರುವ ಗೊಂದಲಕ್ಕೆ ಅಂತಿಮ ತೆರೆ ಎಳೆಯುವ ನಿಟ್ಟಿನಲ್ಲಿ ಈವರೆಗಿನ SIT ತನಿಖೆಯ ವರದಿಯನ್ನು ಬಿಡುಗಡೆ ಮಾಡಲಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ಕರ್ನಾಟಕ ಸರ್ಕಾರ ಜುಲೈ 19ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಹಾಗೂ ಇದರ ಸಂಬಂಧ ಇತರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಬಹುದಾದ ಪ್ರಕರಣಗಳ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿತ್ತು.
ಅನಾಮಿಕ ದೂರುದಾರ ನೀಡಿದ ದೂರಿನ ಅನ್ವಯ ಎಸ್‌ಐಟಿ ಧರ್ಮಸ್ಥಳದಲ್ಲಿ ತನಿಖೆ ಮಾಡುತ್ತಿದೆ. ದೂರುದಾರ ತೋರಿಸಿದ ಜಾಗದಲ್ಲಿ ಅಸ್ಥಿಪಂಜರಕ್ಕಾಗಿ ಹುಡುಕಾಟ ನಡೆಸುತ್ತಿದೆ.
ಈ ನಡುವೆ ಗುರುವಾರ ಕರ್ನಾಟಕ ವಿಧಾನಸಭೆ ಮುಂಗಾರು ಅಧಿವೇಶನದಲ್ಲಿ ಧರ್ಮಸ್ಥಳದ ವಿಚಾರದ ಕುರಿತು ಚರ್ಚೆ ನಡೆದಿತ್ತು. ಬಿಜೆಪಿ ನಾಯಕರು ಎಸ್‌ಐಟಿ ತನಿಖೆ, ಯೂ ಟ್ಯೂಬ್ ವಿಡಿಯೋಗಳು, ಧರ್ಮಸ್ಥಳದ ವಿರುದ್ಧದ ಅಪ ಪ್ರಚಾರದ ಕುರಿತು ಸದನದಲ್ಲಿ ಮಾತನಾಡಿದ್ದರು. ಧರ್ಮಸ್ಥಳಕ್ಕೆ ಭೇಟಿ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದರು.
ಸೋಮವಾರದ ವಿಧಾನಸಭೆ ಕಲಾಪದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಧರ್ಮಸ್ಥಳ ಪ್ರಕರಣದ ಎಸ್‌ಐಟಿ ತನಿಖೆ ಬಗ್ಗೆ ಬಗ್ಗೆ ಉತ್ತರ ನೀಡುವ ನಿರೀಕ್ಷೆ ಇದೆ. ಈ ನಡುವೆ ಸರ್ಕಾರ ಎಸ್‌ಐಟಿ ತನಿಖೆಯನ್ನು ನಿಲ್ಲಿಸಲಿದೆ? ಎಂಬ ಸುದ್ದಿಗಳು ಹಬ್ಬಿವೆ.