ಧರ್ಮಸ್ಥಳ ಕೇಸ್‌: ಆರೋಪಿ ಚಿನ್ನಯ್ಯ ಶಿವಮೊಗ್ಗ ಜೈಲಿಗೆ

0
32

ಧರ್ಮಸ್ಥಳ ಕೇಸ್ ಮಹತ್ವದ ಬೆಳವಣಿಗೆಯೊಂದರಲ್ಲಿ ಆರೋಪಿ ಚಿನ್ನಯ್ಯನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯ ಸುರಕ್ಷತೆಯ ಕಾರಣಕ್ಕೆ ಆತನನ್ನು ಶಿವಮೊಗ್ಗ ಜೈಲಿಗೆ ಕಳಿಸಲಾಗಿದೆ. ಒಟ್ಟು 15 ದಿನಗಳ ಕಾಲ ಆರೋಪಿಯನ್ನು ತಮ್ಮ ವಶದಲ್ಲಿ ಇಟ್ಟುಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಆರೋಪಿ ಚಿನ್ನಯ್ಯ ಎಸ್‌ಐಟಿ ವಶದ ಅವಧಿ ಶನಿವಾರ ಅಂತ್ಯವಾಗಿತ್ತು. ಆದ್ದರಿಂದ ಪೊಲೀಸರು ಆರೋಪಿಯನ್ನು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ಎಸ್‌ಐಟಿ ಮತ್ತೆ ಆರೋಪಿಯನ್ನು ವಶಕ್ಕೆ ಕೇಳದ ಹಿನ್ನಲೆಯಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿತು. ಆದರೆ ಆರೋಪಿಯ ಸುರಕ್ಷತೆ ಕಾರಣಕ್ಕೆ ಆತನನ್ನು ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟು ಶಿವಮೊಗ್ಗ ಜೈಲಿಗೆ ಕಳಿಸುವಂತೆ ಕೋರ್ಟ್ ನಿರ್ದೇಶನ ನೀಡಿತು.

ಬುರುಡೆ ಕೊಟ್ಟಿದ್ದು ಮಟ್ಟಣ್ಣ: ಧರ್ಮಸ್ಥಳ ಪ್ರಕರಣದ ಸಾಕ್ಷಿದಾರ ಚಿನ್ನಯ್ಯ ಎಸ್‌ಐಟಿಗೆ ದೂರು ನೀಡುವಾಗ ತಂದಿದ್ದ ಬುರುಡೆಯನ್ನು ಈತನಿಗೆ ಒದಗಿಸಿದ್ದು ಗಿರೀಶ್ ಮಟ್ಟಣ್ಣನವರ್ ಎಂದು ಪ್ರಕರಣದ ಮತ್ತೊಬ್ಬ ದೂರುದಾರ ಜಯಂತ್ ಹೇಳಿದ್ದಾರೆ ಎನ್ನಲಾಗಿದೆ. ಈ ಹಿಂದೆ ಬುರುಡೆ ಕುರಿತು ಪ್ರತಿಕ್ರಿಯಿಸಿದ್ದ ಮಟ್ಟಣನವರ್ “ನಾನು ಬುರುಡೆ ತಂದಿಲ್ಲ, ಇದನ್ನು ಕೊಟ್ಟಿದ್ದು ಯಾರೆಂಬುದೂ ಸಹ ಗೊತ್ತಿಲ್ಲ” ಎಂದಿದ್ದರು. ಈ ಹಿನ್ನೆಲೆಯಲ್ಲಿ ಜಯಂತ್ ಹೇಳಿಕೆ ಹೊಸ ತಿರುವು ನೀಡಿದೆ.

ಚಿನ್ನಯ್ಯ ತಂದ ಬುರುಡೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಬುರುಡೆ ಜೊತೆ ಇದ್ದ ಮಣ್ಣು ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದರು. ಎಫ್‌ಎಸ್‌ಎಲ್ ವರದಿಯಂತೆ ಧರ್ಮಸ್ಥಳದ ಅಸುಪಾಸಿನಲ್ಲಿ ಇರುವ ಮಣ್ಣಿಗೂ ಬುರುಡೆಯಲ್ಲಿರುವ ಮಣ್ಣಿಗೂ ಸಾಮ್ಯತೆ ಇಲ್ಲ ಎನ್ನಲಾಗಿತ್ತು. ನಂತರ ಮಹೇಶ್‌ ಶೆಟ್ಟಿ ತಿಮರೋಡಿ ನಿವಾಸ ಮಹಜರು ಸಮಯ ಚಿನ್ನಯ್ಯ ರಬ್ಬರ್ ತೋಟದ ಒಂದು ಜಾಗವನ್ನು ತೋರಿಸಿ ಇಲ್ಲಿಂದ ಬುರುಡೆ ತೆಗೆದಿರುವುದಾಗಿ ತಿಳಿಸಿದ್ದ. ಈತನ ಹೇಳಿಕೆಯಂತೆ ಪೊಲೀಸರು ಇಲ್ಲಿನ ಮಣ್ಣು ಮಾದರಿ ಪಡೆದು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು ಇದರ ವರದಿಗಾಗಿ ಕಾಯಲಾಗುತ್ತಿದೆ.

ಆರೋಪಿ ಚಿನ್ನಯ್ಯನ ಎಸ್‌ಐಟಿ ಕಸ್ಟಡಿ ಅವಧಿ ಶನಿವಾರಕ್ಕೆ ಮುಕ್ತಾಯವಾಗಿದೆ. ಇಲ್ಲಿವರೆಗೆ ಚಿನ್ನಯ್ಯ ಒಟ್ಟು 15 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸಿದ್ದು ಪ್ರಕರಣ ಸಂಬಂಧಿಸಿ ಹಲವು ಮಾಹಿತಿ ಪಡೆಯಲಾಗಿದೆ.

Previous articleನಿವೃತ್ತಿ ವಾಪಸ್, ಮತ್ತೆ ಬ್ಯಾಟ್ ಬೀಸಲಿದ್ದಾರೆ ರಾಸ್ ಟೇಲರ್
Next articleಕೆ.ಎನ್.ರಾಜಣ್ಣ ರಾಜೀನಾಮೆಯಿಂದ ತೆರವಾದ ಸಚಿವ ಸ್ಥಾನ ಯಾರಿಗೆ?

LEAVE A REPLY

Please enter your comment!
Please enter your name here