ಧರ್ಮಸ್ಥಳ ಪ್ರಕರಣಕ್ಕೆ ತಿರುವು: FIR ರದ್ದತಿಗೆ ಹೈಕೋರ್ಟ್ ಮೆಟ್ಟಿಲೇರಿದ ತಿಮರೋಡಿ, ಗಿರೀಶ್!

0
14

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯು ಇದೀಗ ನಾಟಕೀಯ ತಿರುವು ಪಡೆದುಕೊಂಡಿದೆ.

ಪ್ರಕರಣದ ಹೋರಾಟಗಾರರಾಗಿಯೇ ಗುರುತಿಸಿಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್, ಇದೀಗ ಇಡೀ ತನಿಖೆಯ ಮೂಲವಾಗಿರುವ ಎಫ್‌ಐಆರ್ ಅನ್ನೇ ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಈ ನಡೆಯು ಪ್ರಕರಣದ ಕುರಿತು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ವಿಶೇಷ ತನಿಖಾ ತಂಡದ (SIT) ಭವಿಷ್ಯವನ್ನೇ ಅತಂತ್ರಕ್ಕೆ ದೂಡಿದೆ.

ಬಂಧನ ಭೀತಿಯೇ ಕಾರಣವೇ?: ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ. ಜಯಂತ್ ಹಾಗೂ ವಿಠಲಗೌಡ ಸಲ್ಲಿಸಿರುವ ಅರ್ಜಿಯಲ್ಲಿ, ತಮ್ಮನ್ನು ಎಸ್‌ಐಟಿ ಈಗಾಗಲೇ 100 ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಿದೆ ಎಂದು ಹೇಳಲಾಗಿದೆ.

ನೂರಾರು ಸಾಕ್ಷಿಗಳಿಂದ ಹೇಳಿಕೆಗಳನ್ನು ಪಡೆದಿದ್ದರೂ, ತಮ್ಮ ವಿರುದ್ಧ ಯಾವುದೇ ನೇರ ಆರೋಪಗಳು ಸಾಬೀತಾಗಿಲ್ಲ. ಹೀಗಿದ್ದರೂ, ಎಸ್‌ಐಟಿ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಅಕ್ಟೋಬರ್ 24 ರಂದು ನೋಟಿಸ್ ಜಾರಿ ಮಾಡಿದೆ.

ಈ ನೋಟಿಸ್ ಅನ್ನು ವಾಟ್ಸಾಪ್ ಮತ್ತು ಇ-ಮೇಲ್ ಮೂಲಕ ಕಳುಹಿಸಿದ್ದು, ವಿಚಾರಣೆಗೆ ಹಾಜರಾದರೆ ತಮ್ಮನ್ನು ಬಂಧಿಸುವ ಸಂಚು ನಡೆಯುತ್ತಿದೆ ಎಂಬ ಆತಂಕವಿದೆ ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ವಿವರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೂಲ ಎಫ್‌ಐಆರ್ (ಸಂಖ್ಯೆ 39/2025), ಎಸ್‌ಐಟಿ ನೋಟಿಸ್ ಹಾಗೂ ಬೆಳ್ತಂಗಡಿ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಬೇಕೆಂದು ಕೋರಿದ್ದಾರೆ.

ಎಸ್‌ಐಟಿಯ ಅಸ್ತಿತ್ವಕ್ಕೆ ಕಂಟಕ?: ಸಿ.ಎನ್. ಚಿನ್ನಯ್ಯ ಎಂಬುವವರು ನೀಡಿದ ದೂರಿನ ಆಧಾರದ ಮೇಲೆಯೇ ರಾಜ್ಯ ಸರ್ಕಾರವು ಈ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು.

ಇದೀಗ ಅರ್ಜಿದಾರರು ಆ ಮೂಲ ಎಫ್‌ಐಆರ್ ರದ್ದತಿಗೆ ಕೋರಿರುವುದರಿಂದ, ಒಂದು ವೇಳೆ ಹೈಕೋರ್ಟ್ ಅವರ ಮನವಿಯನ್ನು ಪುರಸ್ಕರಿಸಿದರೆ, ಎಸ್‌ಐಟಿಯು ತನ್ನ ಕಾನೂನಾತ್ಮಕ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ.

ಆಗಸ್ಟ್ 23 ರಂದು, ಇದೇ ಎಫ್‌ಐಆರ್‌ಗೆ ನಕಲಿ ದಾಖಲೆ ಸೃಷ್ಟಿ (ಬಿಎನ್‌ಎಸ್‌ ಸೆಕ್ಷನ್ 336), ಸುಳ್ಳು ಸಾಕ್ಷ್ಯ ಸೃಷ್ಟಿ (ಸೆಕ್ಷನ್ 230, 229) ಸೇರಿದಂತೆ ಹಲವು ಗಂಭೀರ ಸೆಕ್ಷನ್‌ಗಳನ್ನು ಎಸ್‌ಐಟಿ ಸೇರ್ಪಡೆ ಮಾಡಿತ್ತು. ಇದು ತನಿಖೆಯ ತೀವ್ರತೆಯನ್ನು ಹೆಚ್ಚಿಸಿತ್ತು.

ಆರಂಭದಲ್ಲಿ ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿ, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದ ಹೋರಾಟಗಾರರೇ ಈಗ ತನಿಖೆಯನ್ನು ನಿಲ್ಲಿಸಲು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತನಿಖೆಯ ದಿಕ್ಕು ಬದಲಾಗುತ್ತಿದೆಯೇ ಅಥವಾ ತಾವೇ ತೋಡಿದ ಹಳ್ಳಕ್ಕೆ ಬೀಳುವ ಆತಂಕವೇ ಎಂಬ ಪ್ರಶ್ನೆಗಳು ಮೂಡಿವೆ. ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬರಲಿದ್ದು, ಹೈಕೋರ್ಟ್‌ನ ತೀರ್ಪು ಈ ಸೂಕ್ಷ್ಮ ಪ್ರಕರಣದ ಮುಂದಿನ ಹಾದಿಯನ್ನು ನಿರ್ಧರಿಸಲಿದೆ.

Previous articleಶ್ರೀಗಳ ಆಹ್ವಾನಕ್ಕೆ ಸ್ಪಂದಿಸಿದ ಮೋದಿ: ನ.28: ಕೃಷ್ಣಮಠಕ್ಕೆ ಭೇಟಿ
Next articleಹೃದಯಾಘಾತದಿಂದ ಚಾಲಕ ಸಾವು: ಪಿಕ್‌ಅಪ್ ವಾಹನ ಪಲ್ಟಿ

LEAVE A REPLY

Please enter your comment!
Please enter your name here