ಚಿತ್ರದುರ್ಗ: ಜ್ಞಾನ ದೇಗುಲವಾಗಬೇಕಿದ್ದ ವಸತಿ ಶಾಲೆಯೊಂದು, ಶಿಕ್ಷಕನೊಬ್ಬನ ಕ್ರೌರ್ಯದಿಂದ ಸುದ್ದಿಯಾಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ನಡೆದ ಅಮಾನವೀಯ ಘಟನೆಯೊಂದು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಕೇವಲ ತನ್ನ ಅಜ್ಜಿಗೆ ಒಂದು ಫೋನ್ ಕರೆ ಮಾಡಿದ್ದಕ್ಕಾಗಿ 9 ವರ್ಷದ ಬಾಲಕನ ಮೇಲೆ ಮುಖ್ಯ ಶಿಕ್ಷಕನೇ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಘಟನೆಯ ವಿವರ: ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇಸ್ವಾಮಿ ದೇಗುಲಕ್ಕೆ ಸೇರಿದ ಸಂಸ್ಕೃತ ವೇದಾಧ್ಯಯನ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಉತ್ತರ ಕರ್ನಾಟಕ ಮೂಲದ 9 ವರ್ಷದ ವಿದ್ಯಾರ್ಥಿ ತರುಣ್, ತನ್ನ ಅಜ್ಜಿಗೆ ಫೋನ್ ಮಾಡಿ ಮಾತನಾಡಿದ್ದಾನೆ. ಈ ಸಣ್ಣ ವಿಷಯವನ್ನೇ ದೊಡ್ಡದು ಮಾಡಿದ ಮುಖ್ಯ ಶಿಕ್ಷಕ ವೀರೇಶ್ ಹಿರೇಮಠ್, ವಿದ್ಯಾರ್ಥಿಯನ್ನು ಪ್ರಶ್ನಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾನೆ.
ವಿದ್ಯಾರ್ಥಿಯ ಮೇಲೆ ದಯೆಯೇ ಇಲ್ಲದೆ ಕಾಲಿನಿಂದ ಒದ್ದು, ಮನಬಂದಂತೆ ಹಲ್ಲೆ ಮಾಡಿರುವುದು ವರದಿಯಾಗಿದೆ. ಅಷ್ಟೇ ಅಲ್ಲದೆ, “ಬೇರೆ ನಂಬರ್‌ನಿಂದ ಅಜ್ಜಿಗೆ ಕರೆ ಮಾಡಿದರೆ ಸುಮ್ಮನೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ.
ತಲೆಮರೆಸಿಕೊಂಡ ಆರೋಪಿ ಶಿಕ್ಷಕ: ಈ ಕೃತ್ಯವನ್ನು ಅಲ್ಲಿದ್ದ ಯಾರೋ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರು ಹಾಗೂ ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಮುಖ್ಯ ಶಿಕ್ಷಕ ವೀರೇಶ್ ಹಿರೇಮಠ್ ಶಾಲೆಯಿಂದ ನಾಪತ್ತೆಯಾಗಿದ್ದಾನೆ.
ಘಟನೆಯ ಗಂಭೀರತೆಯನ್ನು ಪರಿಗಣಿಸಿ, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ ಅವರು ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಸುರಕ್ಷಿತವೆಂದು ನಂಬಿ ಬಿಟ್ಟುಹೋಗುವ ವಸತಿ ಶಾಲೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ.
ಗುರುವಿನ ಸ್ಥಾನದಲ್ಲಿರಬೇಕಾದ ವ್ಯಕ್ತಿಯೇ ಈ ರೀತಿ ಪೈಶಾಚಿಕವಾಗಿ ವರ್ತಿಸಿರುವುದು ಶಿಕ್ಷಕ ಸಮುದಾಯಕ್ಕೆ ಕಳಂಕ ತಂದಿದೆ ಎನ್ನುತಿದ್ದಾರೆ ನೆಟ್ಟಿಗರು. ಪೊಲೀಸರು ಇದೀಗ ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.