ಕರ್ನಾಟಕದಲ್ಲಿ ಸೈಬರ್ ವಂಚಕರ ಹಾವಳಿ ಹೆಚ್ಚಾಗುತ್ತಿದೆ. ದೊಡ್ಡ ದೊಡ್ಡ ವ್ಯಕ್ತಿಗಳೇ ಟಾರ್ಗೆಟ್. ಚಿತ್ರ ನಟ ಉಪೇಂದ್ರ ದಂಪತಿಗಳು ಸೈಬರ್ ವಂಚನೆಗೆ ಒಳಗಾಗಿದ್ದರು. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ಖಾತೆಗೂ ಕನ್ನ ಹಾಕಲಾಗಿತ್ತು. ಈಗ ಬಿಜೆಪಿ ನಾಯಕ, ಚಿಕ್ಕಬಳ್ಳಾಪುರ ಸಂಸದ, ಮಾಜಿ ಸಚಿವ ಡಾ. ಕೆ ಸುಧಾಕರ್ ಪತ್ನಿಗೆ ಖದೀಮರು ಡಿಜಿಟಲ್ ಅರೆಸ್ಟ್ ಮೂಲಕ ವಂಚಿಸಿದ್ದಾರೆ.
ಆಗಸ್ಟ್ 26ರಂದು ಬೆಳಗ್ಗೆ, ಡಾ. ಪ್ರೀತಿ ಅವರಿಗೆ ಮುಂಬೈ ಸೈಬರ್ ಅಪರಾಧ ವಿಭಾಗದಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿ, ವಂಚಕರು ಸಂಪರ್ಕಿಸಿದ್ದಾರೆ. ಅವರ ದಾಖಲೆಗಳನ್ನು ‘ಸದ್ಬತ್ ಖಾನ್’ ಎಂಬ ವ್ಯಕ್ತಿ ಅಕ್ರಮವಾಗಿ ಬಳಸಿಕೊಂಡು, ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ವ್ಯವಹಾರ ನಡೆಸಿದ್ದಾನೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಅಲ್ಲದೆ, ಸದ್ಬತ್ ಖಾನ್‌ನನ್ನು ಬಂಧಿಸಲಾಗಿದ್ದು, ಆತನ ಬಳಿ ಪ್ರೀತಿ ಅವರ ದಾಖಲೆಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಇದರಿಂದ ಆತಂಕಗೊಂಡ ಪ್ರೀತಿ ಅವರಿಗೆ, ಅವರ ಬ್ಯಾಂಕ್ ಖಾತೆ ಮತ್ತು ವೈಯಕ್ತಿಕ ದಾಖಲೆಗಳನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅವರ ಖಾತೆ ‘ಅಕ್ರಮ’ ಆಗಿದ್ದು, ಅದನ್ನು ಸರಿಪಡಿಸಲು ತಕ್ಷಣವೇ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಆರ್‌ಬಿಐ ನಿಯಮಗಳನ್ನು ಪರಿಶೀಲಿಸಿ 45 ನಿಮಿಷಗಳಲ್ಲಿ ಹಣವನ್ನು ಹಿಂದಿರುಗಿಸುವುದಾಗಿ ನಂಬಿಸಿ, ತಮ್ಮ ಬ್ಯಾಂಕ್ ಖಾತೆಗೆ 14 ಲಕ್ಷ ರೂಪಾಯಿ ವರ್ಗಾಯಿಸುವಂತೆ ಸೂಚಿಸಿದ್ದಾರೆ. ವಂಚಕರ ಮಾತನ್ನು ನಂಬಿದ ಪ್ರೀತಿ, ಆರ್‌ಟಿಜಿಎಸ್ ಮೂಲಕ ಹಣವನ್ನು ವರ್ಗಾಯಿಸಿದ್ದಾರೆ.
ಮೋಸದ ಅರಿವು ಮತ್ತು ದೂರು: ಹಣ ವರ್ಗಾವಣೆಯಾದ ನಂತರವಷ್ಟೇ, ಪ್ರೀತಿಗೆ ತಾವು ವಂಚನೆಗೊಳಗಾಗಿರುವುದು ಅರಿವಾಗಿದೆ. ಕೂಡಲೇ ಅವರು ಬೆಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್ ನೊಂದಣಿಯಾಗಿದೆ. ಈ ಘಟನೆ ಸೈಬರ್ ವಂಚನೆ ಎಷ್ಟು ವ್ಯಾಪಕವಾಗಿದೆ ಮತ್ತು ಯಾರನ್ನೂ ಬಿಡುತ್ತಿಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.
ಇಂತಹ ಕರೆಗಳು ಅಥವಾ ಸಂದೇಶಗಳ ಬಗ್ಗೆ ಸಾರ್ವಜನಿಕರು ತೀವ್ರ ಎಚ್ಚರಿಕೆ ವಹಿಸಬೇಕು. ಅಪರಿಚಿತರಿಗೆ ಯಾವುದೇ ವೈಯಕ್ತಿಕ ಮಾಹಿತಿ ಅಥವಾ ಬ್ಯಾಂಕ್ ವಿವರಗಳನ್ನು ನೀಡಬಾರದು, ಅಲ್ಲದೆ, ಯಾವುದೇ ಸಂದರ್ಭದಲ್ಲೂ ಅವರ ಖಾತೆಗೆ ಹಣ ವರ್ಗಾಯಿಸಬಾರದು ಎಂದು ಸೈಬರ್ ತಜ್ಞರು ಸಲಹೆ ನೀಡಿದ್ದಾರೆ. ಪ್ರತಿಯೊಬ್ಬರೂ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತರಾಗುವುದು ಇಂದಿನ ತುರ್ತು ಅಗತ್ಯವಾಗಿದೆ.