ಮಹಿಳೆಯರು ಗರ್ಭಿಣಿಯರಾದಾಗ ಹೆಚ್ಚಾಗಿ ತಮ್ಮ ಆರೈಕೆಯ ಜೊತೆಗೆ ಮಗುವಿನ ಬಗ್ಗೆಯು ಸಾಕಷ್ಟು ಮುಂಜಾಗೃತ ಕ್ರಮಗಳನ್ನ ಪಾಲಿಸುತ್ತಾರೆ. ಅಲ್ಲದೇ ಇತ್ತೀಚಿಗೆ ಯಾವುದೇ ಗರ್ಭಿಣಿಯು ವೈದ್ಯರ ಸಲಹೆ ಇಲ್ಲದೇ ಯಾವ ಆಹಾರವನ್ನು ಸೇವಿಸುವುದಿಲ್ಲ. ಹೀಗಿರುವಾಗ ಆ ಮಹಿಳೆ ಗರ್ಭಾವಸ್ಥೆಯ ಅವಧಿಯಲ್ಲಿ ಯಾವ ತರಹದ ಹಣ್ಣು ತಿನ್ನಬೇಕು, ಮತ್ತು ಆಹಾರದ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ.
ಈ ಸಮಯದಲ್ಲಿ ಕೇಳಿಬರುವ ಸಾಮಾನ್ಯ ಪ್ರಶ್ನೆ ಎಂದರೆ, “ಗರ್ಭಿಣಿಯರು ಅನಾನಸ್ ತಿನ್ನಬಾರದೇ?”. ಅನಾನಸ್ ತಿಂದರೆ ಗರ್ಭಪಾತವಾಗುತ್ತದೆ ಎಂಬ ಹಳೆಯ ನಂಬಿಕೆ ಈಗಲೂ ಚಾಲ್ತಿಯಲ್ಲಿದೆ. ಆದ್ರೆ ಆಧುನಿಕ ವೈದ್ಯಕೀಯ ವಿಜ್ಞಾನ ಈ ಬಗ್ಗೆ ಏನು ಹೇಳುತ್ತದೆ? ಇಲ್ಲಿದೆ ಡಿಟೇಲ್ಸ್..
ಗರ್ಭಪಾತದ ಭಯ ಮತ್ತು ಬ್ರೋಮೆಲಿನ್ ಕಿಣ್ವ: ಅನಾನಸ್ ಹಣ್ಣಿನಲ್ಲಿ ‘ಬ್ರೋಮೆಲಿನ್’ (Bromelain) ಎಂಬ ಕಿಣ್ವವಿರುತ್ತದೆ. ಇದು ಪ್ರೋಟೀನ್‌ನ್ನು ಒಡೆಯುವ ಗುಣ ಹೊಂದಿದೆ. ಈ ಕಿಣ್ವದ ಅತಿಯಾದ ಸೇವನೆಯು ಗರ್ಭಕಂಠವನ್ನು (Cervix) ಮೃದುಗೊಳಿಸಿ, ಅಕಾಲಿಕ ಹೆರಿಗೆ ಅಥವಾ ಗರ್ಭಪಾತಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ. ಆದ್ರೆ ನಾವು ತಿನ್ನುವ ಅನಾನಸ್ ಹಣ್ಣಿನ ತಿರುಳಿನಲ್ಲಿ ಕಿಣ್ವದ ಪ್ರಮಾಣ ಅತ್ಯಲ್ಪವಿರುತ್ತದೆ. ವೈಜ್ಞಾನಿಕ ವರದಿಗಳ ಪ್ರಕಾರ, ಗರ್ಭಧಾರಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ಒಬ್ಬ ಗರ್ಭಿಣಿ ಏಕಕಾಲದಲ್ಲಿ 7 ರಿಂದ 10 ಅನಾನಸ್ ಹಣ್ಣುಗಳನ್ನು ತಿನ್ನಬೇಕಾಗುತ್ತದೆ. ಹೀಗಾಗಿ ಮಿತವಾಗಿ ಸೇವಿಸುವುದರಿಂದ ಯಾವುದೇ ಪ್ರಾಣಾಪಾಯವಿಲ್ಲ.
ಅನಾನಸ್‌ನಿಂದಾಗುವ ಕೆಲವು ತೊಂದರೆಗಳು: ಗರ್ಭಪಾತವಾಗದಿದ್ದರೂ, ಕೆಲವು ಗರ್ಭಿಣಿಯರಿಗೆ ಅನಾನಸ್ ಸೇವನೆಯಿಂದ ಈ ಕೆಳಗಿನ ಸಮಸ್ಯೆಗಳು ಎದುರಾಗಬಹುದು:
ಜಠರಗರುಳಿನ ಸಮಸ್ಯೆ (Acid Reflux): ಅನಾನಸ್‌ನಲ್ಲಿ ವಿಟಮಿನ್ ಸಿ ಮತ್ತು ಆಮ್ಲೀಯತೆ (Acidity) ಹೆಚ್ಚಿರುತ್ತದೆ. ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಗಳಿಂದಾಗಿ ಮಹಿಳೆಯರಲ್ಲಿ ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್ ಸಮಸ್ಯೆ ಸಾಮಾನ್ಯ. ಅಂತಹ ಸಂದರ್ಭದಲ್ಲಿ ಅನಾನಸ್ ತಿಂದರೆ ಸಮಸ್ಯೆ ಮತ್ತಷ್ಟು ಹೆಚ್ಚು ಕಾಣಿಸುತ್ತದೆ.
ರಕ್ತದಲ್ಲಿನ ಸಕ್ಕರೆ ಪ್ರಮಾಣ: ಅನಾನಸ್‌ನಲ್ಲಿ ನೈಸರ್ಗಿಕ ಸಕ್ಕರೆಯ ಪ್ರಮಾಣ ಹೆಚ್ಚಿರುತ್ತದೆ. ಗರ್ಭಾವಸ್ಥೆಯ ಮಧುಮೇಹ (Gestational Diabetes) ಇರುವವರು ಅಥವಾ ಮಧುಮೇಹ ಬರುವ ಸಾಧ್ಯತೆ ಇರುವವರು ಈ ಹಣ್ಣಿನಿಂದ ದೂರವಿರುವುದು ಉತ್ತಮ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಶೇಕಡಾದಷ್ಟು ಏರುಪೇರು ಮಾಡಬಲ್ಲದು.
ಅಲರ್ಜಿ: ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಹೊಸದಾಗಿ ಅಲರ್ಜಿ ಕಾಣಿಸಿಕೊಳ್ಳಬಹುದು. ಅನಾನಸ್ ತಿಂದಾಗ ತುಟಿ ಊತ ಅಥವಾ ತುರಿಕೆ ಕಂಡುಬಂದರೆ ತಕ್ಷಣ ನಿಲ್ಲಿಸಬೇಕು.
- ತಿನ್ನುವ ಮುನ್ನ ಈ ಜಾಗ್ರತೆ ಇರಲಿ:
- ಮಿತವಾಗಿರಲಿ: ವಾರಕ್ಕೆ ಒಂದು ಅಥವಾ ಎರಡು ಸಣ್ಣ ತುಂಡುಗಳನ್ನು ತಿನ್ನುವುದು ಸುರಕ್ಷಿತ.
- ಹಣ್ಣಿನ ಮಧ್ಯಭಾಗ ಬೇಡ: ಬ್ರೋಮೆಲಿನ್ ಕಿಣ್ವವು ಅನಾನಸ್ ಹಣ್ಣಿನ ಮಧ್ಯದ ಗಟ್ಟಿ ಭಾಗದಲ್ಲಿ (Core) ಹೆಚ್ಚಿರುತ್ತದೆ. ಅದನ್ನು ತೆಗೆದು ಕೇವಲ ಮೃದುವಾದ ತಿರುಳನ್ನು ಮಾತ್ರ ಸೇವಿಸಿ.
- ವೈದ್ಯರ ಸಲಹೆ: ನಿಮ್ಮ ಗರ್ಭಧಾರಣೆಯು ಹೈ-ರಿಸ್ಕ್ (High-risk pregnancy) ಆಗಿದ್ದರೆ ಅಥವಾ ಮೊದಲೇ ಹೊಟ್ಟೆಯ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ ತಿನ್ನುವುದು ಉತ್ತಮ.
ಒಟ್ಟಾರೆಯಾಗಿ ಅನಾನಸ್ ಹಣ್ಣಿನಿಂದ ಗರ್ಭಿಣಿಯರ ಗರ್ಭಪಾತಕ್ಕೆ ನೇರ ಕಾರಣವಲ್ಲದಿದ್ದರೂ, ಅತಿಯಾದ ಆಮ್ಲೀಯತೆ ಮತ್ತು ಸಕ್ಕರೆಯ ಅಂಶದಿಂದಾಗಿ ಇದನ್ನು ಮಿತವಾಗಿ ಸೇವಿಸುವುದು ಅಥವಾ ನಿಮ್ಮ ಆರೋಗ್ಯದ ಸ್ಥಿತಿಗೆ ಅನುಗುಣವಾಗಿ ಆಯ್ಕೆ ಮಾಡುವುದು ನಿಮ್ಮ ಕನಸಿನ ಕೂಸಿಗೆ ದಾರಿಯಾಗುವುದು.























