ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಿದೆ. ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಹೊಸ ಮಾರ್ಗ ಆರಂಭಿಸಲಾಗಿದ್ದು, ಜನರು ಬಸ್ ಸೇವೆ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಬಿಎಂಟಿಸಿಯ ನೂತನ ಮಾರ್ಗ 515-KY. ಈ ಮಾರ್ಗದ ಬಸ್ ಕೆಂಚನಪುರ-ಯಶವಂತಪುರ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. ಹವಾನಿಯಂತ್ರಣ ರಹಿತ ಬಸ್ ಅನ್ನು ಈ ಮಾರ್ಗಕ್ಕೆ ನಿಯೋಜಿಸಲಾಗಿದೆ.
ಈ ಮಾರ್ಗದ ಬಸ್ ಕನ್ನಲ್ಲಿ, ಎಲೆಕೊಡಿಗೆಹಳ್ಳಿ, ಗೊಲ್ಲರಹಟ್ಟಿ, ಬ್ಯಾಡರಹಳ್ಳಿ, ಹೇರೋಹಳ್ಳಿ ಕ್ರಾಸ್, ನಾಗರಹೊಳೆ ನಗರ, ಹೆಗ್ಗನಹಳ್ಳಿ, ಪೀಣ್ಯ 2ನೇ ಹಂತ, ಟಿವಿಎಸ್ ಕ್ರಾಸ್, ಜಾಲಹಳ್ಳಿ ಕ್ರಾಸ್, ಗೊರಗುಂಟೆಪಾಳ್ಯ, ಗೋವರ್ಧನ್ ಮಾರ್ಗವಾಗಿ ಸಂಚಾರವನ್ನು ನಡೆಸಲಿದೆ.
ಬಸ್ ಕೆಂಚನಪುರದಿಂದ 7.05, 7.40, 9.55, 10.40, 12.25, 13.10, 15.10 ಮತ್ತು 16.05ಕ್ಕೆ ಹೊರಡಲಿದೆ. ಯಶವಂತಪುರದಿಂದ 8.20, 9.25, 11.10, 11.55, 13.55, 14.50, 16.40, 17.30ಕ್ಕೆ ಹೊರಡಲಿದೆ.
ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣ-ಅತ್ತಿಬೆಲೆ: ಬಿಎಂಟಿಸಿ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣ, ಬೈಯಪ್ಪನಹಳ್ಳಿ ಮತ್ತು ಅತ್ತಿಬೆಲೆ ನಡುವೆ ವಜ್ರ ಮಾದರಿಯ ಎಸಿ ಬಸ್‌ಗಳ ಸಂಚಾರವನ್ನು ಆರಂಭಿಸಿದೆ.
V-500VA ಸಂಖ್ಯೆಯ ಬಸ್ ಟಿನ್ ಫ್ಯಾಕ್ಟರಿ, ಮಾರತ್ತಹಳ್ಳಿ ಬ್ರಿಡ್ಜ್, ಸರ್ಜಾಪುರ ಸಿಗ್ನಲ್, ದೊಮ್ಮಸಂದ್ರ, ಸರ್ಜಾಪುರ ಬಸ್ ನಿಲ್ದಾಣ, ಬಿದರಗುಪ್ಪೆ ಮೂಲಕ ಸಂಚಾರವನ್ನು ನಡೆಸಲಿದೆ.
ಈ ಬಸ್ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದಿಂದ 5.30, 7.05, 7.50, 8.30, 9.50, 10.05, 11.50, 13.00, 13.30, 15.50, 16.10, 17.05, 17.45, 19.30, 21.00ಕ್ಕೆ ಹೊರಡಲಿದೆ.
ಅತ್ತಿಬೆಲೆಯಿಂದ 5.50, 7.35, 9.30, 10.20, 10.35, 11, 12.05, 14.30, 15.20, 16.50, 18.30, 19.35, 21.35ಕ್ಕೆ ಹೊರಡಲಿದೆ. ಈ ಬಸ್ ಸೇವೆ 24/7/2025ರಿಂದ ಸಂಚಾರವನ್ನು ಪ್ರಾರಂಭಿಸಲಿವೆ ಎಂದು ಬಿಎಂಟಿಸಿ ಹೇಳಿದೆ.
ನಮ್ಮ ಮೆಟ್ರೋ ದರ ಏರಿಕೆ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ ಸುಮಾರು 4 ಲಕ್ಷ ಜನರು ಪ್ರತಿ ದಿನ ಬಿಎಂಟಿಸಿ ಬಸ್‌ಗಳಲ್ಲಿ ಸಂಚಾರವನ್ನು ನಡೆಸುತ್ತಾರೆ.
ನಮ್ಮ ಮೆಟ್ರೋ ಫೀಡರ್ ಸೇವೆ ಅಡಿ ವಿವಿಧ ಮಾರ್ಗದಲ್ಲಿ ಸಹ ಬಿಎಂಟಿಸಿ ಬಸ್ ಸಂಚಾರವನ್ನು ನಡೆಸುತ್ತಿದೆ. ಜನರ ಬೇಡಿಕೆ, ಮಾರ್ಗದಲ್ಲಿ ಇರುವ ಸಾರಿಗೆ ಸಂಚಾರ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣನೆ ಮಾಡಿಕೊಂಡು ಬಿಎಂಟಿಸಿ ಹೊಸ ಮಾರ್ಗದಲ್ಲಿ ಬಸ್‌ಗಳ ಸಂಚಾರವನ್ನು ಆರಂಭಿಸುತ್ತದೆ.
6 ಸಾವಿರಕ್ಕೂ ಅಧಿಕ ಬಸ್‌ಗಳು ಬಿಎಂಟಿಸಿಯಲ್ಲಿವೆ. ಸೀಮಿತ ನಿಲುಗಡೆಯೊಂದಿಗೆ ಸಂಚಾರ ನಡೆಸುವ ವೇಗದೂತ ಬಸ್‌ಗಳ ಸಂಚಾರವನ್ನು ಬಿಎಂಟಿಸಿ ಕೆಲವು ದಿನಗಳ ಹಿಂದೆ ಆರಂಭಿಸಿದೆ. ಜನರ ಪ್ರಯಾಣದ ಸಮಯ ಉಳಿತಾಯ ಮಾಡುವ ಈ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿದೆ.