BMTC: ಬಿಎಂಟಿಸಿ ವಾರದ ‘ವಜ್ರ’ ಪಾಸ್, ದರ, ಪ್ರಯಾಣ ಮಾಹಿತಿ

0
53

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಜೀವನಾಡಿ ಬಿಎಂಟಿಸಿ ಬಸ್‌ಗಳು. ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಮಾದರಿ ಮಾಸಿಕ, ದಿನದ ಪಾಸ್‌ಗಳನ್ನು ವಿತರಣೆ ಮಾಡುತ್ತದೆ. ಈಗ ‘ವಜ್ರ’ ವಾರದ ಪಾಸ್‌ಗಳನ್ನು ಪರಿಚಯಿಸಲಾಗಿದೆ.

ಆಗಸ್ಟ್ 1ರಿಂದಲೇ ಬಿಎಂಟಿಸಿ ‘ವಜ್ರ’ ಬಸ್‌ ವಾರದ ಪಾಸ್‌ಗಳ ವಿತರಣೆಯನ್ನು ಆರಂಭಿಸಿದೆ. ಪಾಸ್‌ಗಳ ಬೆಲೆ 750 ರೂ.ಗಳು. ಒಂದು ವೇಳೆ ಬಸ್ ಟೋಲ್ ಇರುವ ರಸ್ತೆಯಲ್ಲಿ ಸಂಚಾರ ನಡೆಸುತ್ತದೆ ಎಂದರೆ ಟೋಲ್ ಶುಲ್ಕ ಪ್ರತ್ಯೇಕವಾಗಿದೆ.

‘ವಜ್ರ’ ವಾರದ ಪಾಸ್ ಪಡೆದರೆ ವಜ್ರ, ಸಾಮಾನ್ಯ ಮತ್ತು ಎಕ್ಸ್‌ಪ್ರೆಸ್ ಬಿಎಂಟಿಸಿ ಬಸ್‌ಗಳಲ್ಲಿ ಎಷ್ಟು ಬಾರಿ ಬೇಕಾದರೂ ಸಂಚಾರವನ್ನು ನಡೆಸಬಹುದು. ಈ ಪಾಸ್‌ಗಳನ್ನು ಪಡೆಯಲು 10 ರೂ. ಸೇವಾ ಶುಲ್ಕವನ್ನು ಪಾವತಿ ಮಾಡಬೇಕಿದೆ.

ನೀವು ಸಾಗುವ ಬಸ್ ಟೋಲ್ ಇರುವ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತಿದ್ದರೆ ಪ್ರತ್ಯೇಕ ಟೋಲ್ ಶುಲ್ಕವನ್ನು ಪಾವತಿಸಬೇಕಿದೆ. ಈ ಪಾಸ್‌ಗಳನ್ನು Tummoc ಅಪ್ಲಿಕೇಶನ್ ಮೂಲಕ ಪಡೆಯಬಹುದು.

ಬಿಎಂಟಿಸಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ವಾಯುವಜ್ರ’ ಬಸ್ ಸೇವೆಯನ್ನು ನೀಡುತ್ತದೆ. ಆದರೆ ‘ವಜ್ರ’ ವಾರದ ಪಾಸ್ ವಿಶೇಷ ಬಸ್, ವಾಯು ವಜ್ರ ಸೇವೆಗೆ ಅನ್ವಯವಾಗುವುದಿಲ್ಲ.

ಬಿಎಂಟಿಸಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ವಾಯುವಜ್ರ ಮತ್ತು ನಗರದ ವಿವಿಧ ಬಡಾವಣೆಗೆ ಸಂಚಾರ ನಡೆಸುವ ಎಸಿ ವಜ್ರ ಬಸ್‌ಗಳಿವೆ. ವಜ್ರ ಬಸ್‌ಗಳನ್ನು ಸಾಫ್ಟ್‌ವೇರ್ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಓಡಿಸಲಾಗುತ್ತಿದೆ.

ಮೆಜೆಸ್ಟಿಕ್ ಮತ್ತು ನಗರದ ವಿವಿಧ ಬಸ್ ನಿಲ್ದಾಣದಿಂದ ವಜ್ರ ಬಸ್‌ಗಳಿವೆ. ಈ ಮಾದರಿ ಬಸ್‌ಗಳಲ್ಲಿಯೂ ಪ್ರತಿದಿನ ಸಾವಿರಾರು ಜನರು ಸಂಚಾರವನ್ನು ನಡೆಸುತ್ತಾರೆ. ಆದ್ದರಿಂದ ಆ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ವಜ್ರ ಪಾಸ್ ಬಿಡುಗಡೆ ಮಾಡಲಾಗಿದೆ.

ಬಿಎಂಟಿಸಿ ಹೊಸ ಮಾರ್ಗ: ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ 600-A ಎಂಬ ಹೊಸ ಮಾರ್ಗವನ್ನು ಘೋಷಣೆ ಮಾಡಿದೆ. ನಾನ್ ಎಸಿ ಬಸ್‌ಗಳು ಈ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತಿದ್ದು, ಬನಶಂಕರಿ-ಎಇಸಿಎಸ್ ಲೇಔಟ್ ನಡುವೆ ಸಂಪರ್ಕವನ್ನು ಕಲ್ಪಿಸುತ್ತವೆ.

ಈ ಬಸ್‌ ರಾಗಿಗುಡ್ಡ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಕೂಡ್ಲುಗೇಟ್ ಮೂಲಕ ಸಂಚಾರವನ್ನು ನಡೆಸುತ್ತವೆ.

ಮಾರ್ಗದ ಬಸ್ ಬನಶಂಕರಿಯಿಂದ 8.05, 10.20, 15.00, 17.05 ಮತ್ತು 19 ಗಂಟೆಗೆ ಹೊರಡಲಿವೆ. ಎಇಸಿಎಸ್ ಲೇಔಟ್‌ನಿಂದ 9, 11.15, 15.55, 18.00, 20.00 ಹೊರಡಲಿವೆ.

374NM ಹೊಸ ಮಾರ್ಗ: ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ 374NM ಹೊಸ ಮಾರ್ಗ ಘೋಷಣೆ ಮಾಡಿದೆ. ತಾವರೆಕೆರೆ-ಕನಸವಾಡಿ (ಮಧರೆ ದೇವಾಲಯ) ನಡುವೆ ಈ ಮಾರ್ಗದ ಬಸ್ ಸಂಪರ್ಕವನ್ನು ಕಲ್ಪಿಸುತ್ತದೆ.

ಈ ಬಸ್ ಮಲ್ಲಸಂದ್ರ, ಸೊಂಡೆಕೊಪ್ಪ, ಲಕ್ಕೇನಹಳ್ಳಿ, ಸಿದ್ದಗಂಗಾ ಕಾಲೇಜು, ನೆಲಮಂಗಲ, ಬಸವನಹಳ್ಳಿ, ಮೈಲನಹಳ್ಳಿ ಕ್ರಾಸ್, ರೈಲ್ವೇ ಗೊಲ್ಲಹಳ್ಳಿ, ಕನ್ನಮಂಗಲ ಗೇಟ್ ಮಾರ್ಗದಲ್ಲಿ ಸಂಚಾರವನ್ನು ನಡೆಸುತ್ತದೆ.

ಬಸ್ ತಾವರೆಕೆರೆಯಿಂದ 7.20,8.35, 10.50, 11.45, 14.10, 15.40ಕ್ಕೆ ಹೊರಡಲಿದೆ. ಕನಸವಾಡಿಯಿಂದ 8.50, 10.05, 12.15, 13.40, 15.55 ಮತ್ತು 17.10ಕ್ಕೆ ಹೊರಡಲಿದೆ.

Previous articleವಾರಾಂತ್ಯದ OTT ಅಪ್‌ಡೇಟ್: ವಿಕೇಂಡ್‌ನಲ್ಲಿ ನೋಡಬೇಕಾದ ಸಿನಿಮಾ ಪಟ್ಟಿ
Next articleಸುಹಾಸ್ ಶೆಟ್ಟಿ ಹತ್ಯೆ : ದಕ್ಷಿಣ ಕನ್ನಡದ 14 ಕಡೆ ಎನ್‌ಐಎ ದಾಳಿ

LEAVE A REPLY

Please enter your comment!
Please enter your name here