“ಜೈಲಿನಿಂದಲೇ ಬಾಂಬ್ ಸ್ಫೋಟಕ್ಕೆ ನಿರ್ದೇಶನವೇ? ಆ ‘ಶಾಂತಿದೂತರು’ ಯಾರೆಂದು ಹೇಳಿ!”

0
18

ಬೆಂಗಳೂರು: ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟದ ಬೆನ್ನಲ್ಲೇ, ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಸರ್ಕಾರದ ಮೃದು ಧೋರಣೆಯೇ ಕಾರಣ ಎಂದು ಆರೋಪಿಸಿರುವ ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಕರ್ನಾಟಕದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭಯೋತ್ಪಾದಕನಿಗೆ, ದೇಶಾದ್ಯಂತ ಬಾಂಬ್ ಸ್ಫೋಟಗಳನ್ನು ನಡೆಸಲು ನಿರ್ದೇಶನ ನೀಡಲಿಕ್ಕಾಗಿಯೇ ಮೊಬೈಲ್ ಫೋನ್ ಒದಗಿಸಲಾಗಿತ್ತೇ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

“ಇಸ್ಲಾಂ ಎಂದರೆ ಶಾಂತಿ, ಹಾಗಿದ್ದರೆ ಇವರೆಲ್ಲಾ ಯಾರು?”: ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ “ಇಸ್ಲಾಂ ಎಂದರೆ ಶಾಂತಿ” ಎಂಬ ಹೇಳಿಕೆಯನ್ನು ನೀಡಿದ್ದರು, “ಹಾಗಾದರೆ ಸಾಮೂಹಿಕ ನರಮೇಧಕ್ಕೆ ಯೋಜನೆ ರೂಪಿಸುತ್ತಿದ್ದ ಡಾ. ಅಹ್ಮದ್ ಮೊಹಿಯುದ್ದೀನ್ ಸಯೀದ್, ಸಯ್ಯದ್ ಮೊಹಮ್ಮದ್ ಸುಹೇಲ್ ಮತ್ತು ಆಜಾದ್ ಇವರೆಲ್ಲಾ ಯಾವ ಶಾಂತಿ ಧರ್ಮಕ್ಕೆ ಸೇರಿದವರು? ದೇಶದಾದ್ಯಂತ ಪತ್ತೆಯಾಗಿರುವ ಆರ್‌ಡಿಎಕ್ಸ್ ಸ್ಫೋಟಕಗಳನ್ನು ಸಂಗ್ರಹಿಸಿದ ‘ಶಾಂತಿದೂತರು’ ಯಾರು ಎಂಬುದನ್ನು ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ತಿಳಿಸಬೇಕು,” ಎಂದು ಸವಾಲು ಹಾಕಿದರು.

“ಬಿರಿಯಾನಿ ಕೊಡುವುದು ನಿಮ್ಮ ನೀತಿ, ಬೇರುಸಹಿತ ಕಿತ್ತುಹಾಕುವುದು ನಮ್ಮ ರೀತಿ”: ಕಾಂಗ್ರೆಸ್ ಸರ್ಕಾರದ ನೀತಿಗಳನ್ನು ತರಾಟೆಗೆ ತೆಗೆದುಕೊಂಡ ಸಿ.ಟಿ. ರವಿ, “ಭಯೋತ್ಪಾದಕರಿಗೆ ಜೈಲಿನಲ್ಲಿ ಮೊಬೈಲ್ ಕೊಡುವ ಅಯೋಗ್ಯ ಸರ್ಕಾರವನ್ನು ‘ಅಸಮರ್ಥ’ ಎನ್ನದೆ ಬೇರೇನು ಹೇಳಬೇಕು? ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವುದು, ಯಾಸಿನ್ ಮಲಿಕ್‌ನನ್ನು ‘ಜೀ’ ಎಂದು ಗೌರವಿಸುವುದು, ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ ಗುರು ಪರ ವಕಾಲತ್ತು ವಹಿಸುವುದು ನಿಮ್ಮ ನೀತಿ.

ಆದರೆ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಸರ್ಕಾರ ಭಯೋತ್ಪಾದಕರ ಜೊತೆ ಲಾಭ-ನಷ್ಟದ ಲೆಕ್ಕಾಚಾರ ಹಾಕುವುದಿಲ್ಲ. ಸರ್ಜಿಕಲ್ ಸ್ಟ್ರೈಕ್ ಮೂಲಕ ಅವರನ್ನು ಬೇರುಸಹಿತ ಕಿತ್ತು ಹಾಕುತ್ತದೆ,” ಎಂದು ಹೇಳಿದರು.

“ದೊಡ್ಡ ಅನಾಹುತವನ್ನು ತಪ್ಪಿಸಿದ ಎನ್‌ಐಎ”: ಇತ್ತೀಚೆಗೆ ಎನ್‌ಐಎ ಮತ್ತು ಎಟಿಎಸ್ ದೇಶದ ಹಲವೆಡೆ ನಡೆಸಿದ ಕಾರ್ಯಾಚರಣೆಗಳನ್ನು ಶ್ಲಾಘಿಸಿದ ಅವರು, “ಅಪಾರ ಪ್ರಮಾಣದ ಆರ್‌ಡಿಎಕ್ಸ್ ಮತ್ತು ‘ರಿಸನ್’ ನಂತಹ ಅಪಾಯಕಾರಿ ವಿಷವನ್ನು ಬಳಸಿ ಸಾಮೂಹಿಕ ನರಮೇಧಕ್ಕೆ ಸಿದ್ಧತೆ ನಡೆಸಿದ್ದ ಬೃಹತ್ ಜಾಲವನ್ನು ನಮ್ಮ ತನಿಖಾ ಸಂಸ್ಥೆಗಳು ವಿಫಲಗೊಳಿಸಿವೆ.

ಈ ಕಾರ್ಯಾಚರಣೆಗಳಿಂದ ಹತಾಶರಾದ ಭಯೋತ್ಪಾದಕರು, ತಾವು ಇನ್ನೂ ಜೀವಂತವಾಗಿದ್ದೇವೆ ಎಂದು ತೋರಿಸಿಕೊಳ್ಳಲು ದೆಹಲಿಯ ಕೆಂಪುಕೋಟೆಯನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ. ನಮ್ಮ ಬೇಹುಗಾರಿಕಾ ವ್ಯವಸ್ಥೆ ಎಚ್ಚರದಿಂದಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ,” ಎಂದು ವಿಶ್ಲೇಷಿಸಿದರು.

Previous articleಕಾಂಗ್ರೆಸ್ ನಾಯಕರ ಬೇಜವಾಬ್ದಾರಿ ಹೇಳಿಕೆಗಳು ಆತಂಕಕಾರಿ
Next articleNamma Metro: ಹಳದಿ ಮಾರ್ಗಕ್ಕೆ ಏನಾಯ್ತು? ತಾಂತ್ರಿಕ ಕಂಟಕದಿಂದ ಪ್ರಯಾಣಿಕರಿಗೆ ತಲೆನೋವು!

LEAVE A REPLY

Please enter your comment!
Please enter your name here