ಬೆಂಗಳೂರು ಕಳೆದ 15 ದಿನಗಳಿಂದ ಕೆ.ಆರ್.ಮಾರುಕಟ್ಟೆಯಲ್ಲಿ ಉಂಟಾಗಿರುವ ವಾಹನ ನಿಲುಗಡೆ (ಪಾರ್ಕಿಂಗ್) ಸಮಸ್ಯೆಯಿಂದಾಗಿ ಈ ವರ್ಷದ ಹೂವಿನ ವ್ಯಾಪಾರವು ತೀವ್ರ ಹಿನ್ನಡೆ ಕಂಡಿದೆ. ಇದರಿಂದಾಗಿ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ನಡೆಯುತ್ತಿದ್ದ ಲಕ್ಷಾಂತರ ರೂಪಾಯಿಗಳ ವಹಿವಾಟು ಕುಸಿತಕ್ಕೆ ಗುರಿಯಾಗುವ ಆತಂಕ ಎದುರಾಗಿದೆ.
ಮಾರುಕಟ್ಟೆಯ ಅಧಿಕೃತ ಪಾರ್ಕಿಂಗ್ ಸ್ಥಳವು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಕಸ ಮತ್ತು ತ್ಯಾಜ್ಯದಿಂದ ತುಂಬಿದೆ. ಈ ಕಾರಣದಿಂದ ಪ್ರಯಾಣಿಕರು ಅನಿವಾರ್ಯವಾಗಿ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸಬೇಕಾಗಿದೆ. ಇದು ಮಾರುಕಟ್ಟೆ ಪ್ರದೇಶದಲ್ಲಿ ತೀವ್ರ ಜನದಟ್ಟಣೆ ಮತ್ತು ಸಂಚಾರ ದಟ್ಟಣೆಗೆ ಕಾರಣವಾಗಿದ್ದು, ಜನಸಾಮಾನ್ಯರು ಮಾರುಕಟ್ಟೆಯತ್ತ ಸುಳಿಯುವುದು ಕಡಿಮೆಯಾಗಿದೆ.
ದಸರಾ ಹಬ್ಬಕ್ಕೆ ಹೂವುಗಳೇ ಪ್ರಧಾನವಾಗಿದ್ದು, ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಕೆ.ಆರ್. ಮಾರುಕಟ್ಟೆಯು ಜನಸಂದಣಿಯಿಂದ ತುಂಬಿರುತ್ತಿತ್ತು. ಆದರೆ ಈ ಬಾರಿ ಪಾರ್ಕಿಂಗ್ ಕೊರತೆಯಿಂದಾಗಿ ಜನ ಮಾರುಕಟ್ಟೆಯ ಕಡೆ ಬರುತ್ತಿಲ್ಲ. ಇದರಿಂದ ವ್ಯಾಪಾರ ಕುಸಿದು ಹೂವಿನ ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಪಾರ್ಕಿಂಗ್ ಸಮಸ್ಯೆ ಮತ್ತು ವ್ಯಾಪಾರದ ಕುಸಿತದಿಂದಾಗಿ ಮಾರುಕಟ್ಟೆಯಲ್ಲಿ ಹೂವಿನ ಬೆಲೆಯಲ್ಲೂ ಗಣನೀಯ ಇಳಿಕೆ ಕಂಡುಬಂದಿದೆ. ಕಳೆದ ವರ್ಷ ದಸರಾ ಸಮಯದಲ್ಲಿ ಕನಕಾಂಬರ, ಚೆಂಡು ಮಲ್ಲಿಗೆ ಸೇರಿದಂತೆ ಇತರೆ ಹೂಗಳನ್ನು ಸುಮಾರು ರೂ. 300-400ರವರೆಗೆ ಮಾರಾಟ ಮಾಡಲಾಗುತ್ತಿತ್ತು.
ಆದರೆ ಈ ಬಾರಿ, ವ್ಯಾಪಾರ ಕುಸಿತದಿಂದಾಗಿ ಅವುಗಳ ಬೆಲೆ ರೂ. 180-200ಕ್ಕೆ ಇಳಿದಿದೆ. ಹೂವಿನ ವ್ಯಾಪಾರದಲ್ಲಿ ಭಾರೀ ಕುಸಿತ ಕಂಡುಬಂದಿರುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನವಾಗಿದೆ. ಹೂ ಬೆಳೆಗಾರರ ಅನುಕೂಲಕ್ಕಾಗಿ ನಿರ್ಮಿಸಲಾದ ಈ ಮಾರುಕಟ್ಟೆಯಲ್ಲಿ ಕಳೆದ 15 ದಿನಗಳಿಂದ ವ್ಯಾಪಾರ ಬಹುತೇಕ ನಡೆಯುತ್ತಿಲ್ಲ. ಕಳೆದ ವರ್ಷ ದಸರಾ ವೇಳೆ ಅತಿ ಹೆಚ್ಚು ಹೂ ಮಾರಾಟವಾಗಿತ್ತು. ಆದರೆ ಈ ಬಾರಿ ಹಬ್ಬದ ಕಳೆಯಿಲ್ಲ ಎಂದು ವ್ಯಾಪಾರಿಗಳು ಅಳಲನ್ನು ತೋಡಿಕೊಂಡಿದ್ದಾರೆ.
ಕೆ.ಆರ್.ಮಾರುಕಟ್ಟೆಯಲ್ಲಿನ ಪಾರ್ಕಿಂಗ್ ಸಮಸ್ಯೆ ಬಗ್ಗೆ ಹಲವಾರು ಬಾರಿ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಲಾಗಿದ್ದು, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ದಸರಾ ಸಮಯದಲ್ಲಿ ಹೂವಿನ ವ್ಯಾಪಾರಿಗಳು ವ್ಯಾಪಾರ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಎಂ.ದಿವಾಕರ್ ಅಧ್ಯಕ್ಷರು ಹೂವಿನ ಅಸೋಸಿಯೇಷನ್ ಹೇಳಿದ್ದಾರೆ.
ಶೀಘ್ರದಲ್ಲೇ ಜಿಕೆವಿಕೆ ಆವರಣಕ್ಕೆ ಹೂ ಮಾರ್ಕೆಟ್ ವರ್ಗಾವಣೆ: ಕೆ.ಆರ್.ಮಾರುಕಟ್ಟೆಯ ಹೂವಿನ ವ್ಯಾಪಾರಿಗಳು ಮತ್ತು ಗ್ರಾಹಕರು ಪಾರ್ಕಿಂಗ್ ಎದುರಿಸುತ್ತಿದ್ದಾರೆ. ಆದರೆ ಇದಕ್ಕೆ ಪರಿಹಾರವಾಗಿ ಹೂವಿನ ಮಾರುಕಟ್ಟೆಯನ್ನು ಶೀಘ್ರದಲ್ಲೇ ಹೆಬ್ಬಾಳ ಬಳಿಯಿರುವ ಜಿಕೆವಿಕೆ ಆವರಣಕ್ಕೆ ಸ್ಥಳಾಂತರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ.