Home Advertisement
Home ನಮ್ಮ ಜಿಲ್ಲೆ ಬೆಂಗಳೂರು UPSC 2025-26: ದೇಶದ ಆಡಳಿತ ಚಕ್ರ ಹಿಡಿಯಲು ಸಜ್ಜಾದ ರಾಜ್ಯದ ಪ್ರತಿಭೆಗಳು; 19 ಸಾಧಕರಿಗೆ ಅದ್ಧೂರಿ...

UPSC 2025-26: ದೇಶದ ಆಡಳಿತ ಚಕ್ರ ಹಿಡಿಯಲು ಸಜ್ಜಾದ ರಾಜ್ಯದ ಪ್ರತಿಭೆಗಳು; 19 ಸಾಧಕರಿಗೆ ಅದ್ಧೂರಿ ಸನ್ಮಾನ!

0
5

ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಇತ್ತೀಚೆಗೆ ಸಂಭ್ರಮದ ವಾತಾವರಣ ಮನೆಮಾಡಿತ್ತು. 2025-26ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ (UPSC) ಪರೀಕ್ಷೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದ ಕರ್ನಾಟಕದ 19 ಸಾಧಕರಿಗೆ ಕೃಷಿ ಸಚಿವ ಎನ್. ಚೆಲುವರಾಯ ಸ್ವಾಮಿ ಅವರು ಅಭಿನಂದನೆ ಸಲ್ಲಿಸಿ, ಗೌರವಿಸಿದರು.

ಗ್ರಾಮೀಣ ಪ್ರತಿಭೆಗಳಿಗಿರಲಿ ಹೆಚ್ಚಿನ ಆದ್ಯತೆ: ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಚೆಲುವರಾಯ ಸ್ವಾಮಿ ಅವರು, ಇತ್ತೀಚಿನ ವರ್ಷಗಳಲ್ಲಿ ಹಳ್ಳಿಗಳ ಪ್ರತಿಭೆಗಳು ಯುಪಿಎಸ್ಸಿಯಂತಹ ಕಠಿಣ ಪರೀಕ್ಷೆಗಳಲ್ಲಿ ಮಿಂಚುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು. “ನಾಗರಿಕ ಸೇವೆಯು ದೇಶದ ಪರಮೋಚ್ಚ ಅವಕಾಶವಾಗಿದೆ. ಸಂವಿಧಾನವು ಅಧಿಕಾರಿಗಳಿಗೆ ಅಪಾರ ಅಧಿಕಾರ ನೀಡಿದೆ. ಸರ್ಕಾರದ ನಿರ್ಧಾರಗಳನ್ನು ಜಾರಿಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ ದೊಡ್ಡದಿದೆ. ನೀವು ಕೇವಲ ಅಧಿಕಾರಿಯಾಗಿರದೆ, ಸಾಮಾನ್ಯ ಪ್ರಜ್ಞೆ ಮತ್ತು ತಾಳ್ಮೆಯಿಂದ ಜನರ ಕಷ್ಟಗಳಿಗೆ ಸ್ಪಂದಿಸುವ ಸೇವಕರಾಗಬೇಕು” ಎಂದು ಯುವ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಈ ಬಾರಿಯ ಫಲಿತಾಂಶದಲ್ಲಿ ಕರ್ನಾಟಕದ ಒಟ್ಟು 25 ಅಭ್ಯರ್ಥಿಗಳು ನಾಗರಿಕ ಸೇವಾ ಪರೀಕ್ಷೆಯಲ್ಲಿ ವಿಜಯಿಯಾಗಿದ್ದಾರೆ. ವಿಶೇಷವೆಂದರೆ, ಇದರಲ್ಲಿ 19 ಅಭ್ಯರ್ಥಿಗಳು ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿರುವ ‘ಇಂಡಿಯಾ ಫಾರ್ ಐಎಎಸ್’  ಅಕಾಡೆಮಿಯಲ್ಲಿ ಮಾರ್ಗದರ್ಶನ ಪಡೆದವರಾಗಿದ್ದಾರೆ. ಅತಿ ಕಡಿಮೆ ಶುಲ್ಕದಲ್ಲಿ ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ತರಬೇತಿ ನೀಡುತ್ತಿರುವ ಈ ಸಂಸ್ಥೆಯ ಸಾಧನೆಯನ್ನು ಸಚಿವರು ಶ್ಲಾಘಿಸಿದರು.

ಅನುಭವಿಗಳ ಮಾರ್ಗದರ್ಶನ: ಈ ಅಕಾಡೆಮಿಯು ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ.ಎಸ್. ಕೇದಾರ್ ಅವರ ಅಧ್ಯಕ್ಷತೆಯಲ್ಲಿ ಮತ್ತು ನಿವೃತ್ತ ಐಎಫ್ಎಸ್ ಅಧಿಕಾರಿ ಡಾ. ಜಿ.ಎನ್. ಶ್ರೀಕಂಠಯ್ಯ ಅವರ ಉಪಾಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಸಂಸ್ಥೆಯ ಸಿಇಒ ಶ್ರೀನಿವಾಸ್ ಪಿ.ಸಿ ಹಾಗೂ ನಿರ್ದೇಶಕರಾದ ನವೀನ್ ಕೆ.ಎಂ, ನಯನ್ ಗೌಡ ಸೇರಿದಂತೆ ತಂಡದ ಪರಿಶ್ರಮದಿಂದಾಗಿ ರಾಜ್ಯದ ಯುವಕರು ಇಂದು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಯಶಸ್ಸು ಹೊಸ ಚೈತನ್ಯ ನೀಡಲಿದೆ.