ಬೆಂಗಳೂರು: “ನಾನು ಪ್ರತಿ ಬಾರಿ ಬೆಂಗಳೂರಿಗೆ ಭೇಟಿ ನೀಡಿದಾಗಲೂ, ನನ್ನಲ್ಲಿ ‘ದುಪ್ಪಟ್ಟು ಶಕ್ತಿ’ ಸಂಚಯವಾಗುತ್ತದೆ!” – ಇದು ವಿಶ್ವದ ಅತಿದೊಡ್ಡ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್ ಬೆಂಜ್‌ನ ಸಿಇಒ ಓಲಾ ಕೆಲೆನಿಯಸ್ ಭಾರತದ ಟೆಕ್ ರಾಜಧಾನಿಯ ಬಗ್ಗೆ ಆಡಿದ ಮನದಾಳದ ಮಾತುಗಳು. ಈ ಒಂದು ಹೇಳಿಕೆ, ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗಳಿಸಿರುವ ಪ್ರತಿಷ್ಠೆಗೆ ಹಿಡಿದ ಕೈಗನ್ನಡಿಯಾಗಿದ್ದು, ನಗರದ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಬೆಂಗಳೂರಿನ ಪ್ರತಿಭೆಗೆ ಬೆಂಜ್ ಬಾಸ್ ಫಿದಾ!: ಇತ್ತೀಚೆಗೆ ‘ಗ್ಲೋಬಲ್ ಡೈಲಾಗ್’ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಓಲಾ ಕೆಲೆನಿಯಸ್, ಜಗತ್ತಿನಾದ್ಯಂತ ಇರುವ ಪ್ರತಿಭೆಗಳನ್ನು ಗುರುತಿಸಿ, ಬಳಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಕುರಿತು ತಮ್ಮ ಅನುಭವ ಹಂಚಿಕೊಂಡರು.
“ಇಲ್ಲಿನ ವಾತಾವರಣವೇ ಅದ್ಭುತ. ನಾನು ಜರ್ಮನಿಗೆಂದೂ ಭೇಟಿ ನೀಡದ, ಆದರೆ ನಿರರ್ಗಳವಾಗಿ ಜರ್ಮನ್ ಮಾತನಾಡುವ ಪ್ರತಿಭಾವಂತರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದೇನೆ. ಇಂತಹ ಅದ್ಭುತ ಪ್ರತಿಭೆಗಳು ಎಲ್ಲಿದೆಯೋ, ನಾವು ಅಲ್ಲಿಗೆ ಹೋಗುತ್ತೇವೆ,” ಎಂದು ಹೇಳುವ ಮೂಲಕ ಬೆಂಗಳೂರಿನ ಜ್ಞಾನಕೇಂದ್ರಿತ ಪರಿಸರವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಕಡಿಮೆ ವೆಚ್ಚಕ್ಕಲ್ಲ, ಸಾಮರ್ಥ್ಯಕ್ಕೆ ಬೆಲೆ: ಮರ್ಸಿಡಿಸ್ ಸಿಇಒ ಈ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡಿರುವ ಕರ್ನಾಟಕದ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಜಾಗತಿಕ ಕಂಪನಿಗಳು ಕರ್ನಾಟಕವನ್ನು ಏಕೆ ಆಯ್ಕೆ ಮಾಡಿಕೊಳ್ಳುತ್ತಿವೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಸಾಕ್ಷಿ ಬೇಕಿಲ್ಲ ಎಂದಿದ್ದಾರೆ.
‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ಬೆಂಗಳೂರು ಈಗ ಕೇವಲ ಐಟಿ ಸೇವೆಗಳನ್ನು ಹೊರಗುತ್ತಿಗೆ ನೀಡುವ ಕೇಂದ್ರವಾಗಿ ಉಳಿದಿಲ್ಲ. ಆ ಹಣೆಪಟ್ಟಿಯಿಂದ ನಾವು ಬಹಳ ದೂರ ಸಾಗಿದ್ದೇವೆ. ಇಂದು ನಮ್ಮ ನಗರವು ಜಾಗತಿಕ ನಾವೀನ್ಯತೆಯ ಕೇಂದ್ರಬಿಂದುವಾಗಿದೆ. ನಾವು ಇಂದು ಸ್ಪರ್ಧಿಸುತ್ತಿರುವುದು ಕಡಿಮೆ ವೆಚ್ಚದ ಆಧಾರದ ಮೇಲೆ ಅಲ್ಲ, ಬದಲಾಗಿ ನಮ್ಮ ಸಾಮರ್ಥ್ಯ ಮತ್ತು ಜ್ಞಾನದ ಆಧಾರದ ಮೇಲೆ. ಜಾಗತಿಕ ಸಿಇಒಗಳನ್ನು ಇಲ್ಲಿಗೆ ಸೆಳೆಯುತ್ತಿರುವುದು ಅಗ್ಗದ ಮಾನವಶಕ್ತಿಯಲ್ಲ, ಬದಲಾಗಿ ಇಲ್ಲಿರುವ ಆಳವಾದ ತಾಂತ್ರಿಕ ಪರಿಣತಿ,” ಎಂದು ಸ್ಪಷ್ಟಪಡಿಸಿದ್ದಾರೆ.
ಏಷ್ಯಾ-ಪೆಸಿಫಿಕ್ ವಲಯದಲ್ಲೇ ನಂಬರ್ ಒನ್: ಇದನ್ನು ಮತ್ತಷ್ಟು ವಿವರಿಸಿದ ಅವರು, “ಇಂದು ತಂತ್ರಜ್ಞಾನ ಪ್ರತಿಭೆಗಳನ್ನು ಆಕರ್ಷಿಸುವುದರಲ್ಲಿ ಬೆಂಗಳೂರು ಇಡೀ ಏಷ್ಯಾ-ಪೆಸಿಫಿಕ್ (APAC) ವಲಯದಲ್ಲೇ ಮೊದಲ ಸ್ಥಾನದಲ್ಲಿದೆ. ವಿಶ್ವದ ಶೇ. 36ರಷ್ಟು ಟೆಕ್ ಪ್ರತಿಭೆಗಳು ಅಮೆರಿಕ ಮತ್ತು ಭಾರತದಲ್ಲೇ ಕೇಂದ್ರೀಕೃತವಾಗಿವೆ.
ನಮ್ಮ ನಗರವು ಕೇವಲ ಕೆಲಸ ಮಾಡುವವರನ್ನು ಸೃಷ್ಟಿಸುತ್ತಿಲ್ಲ, ಬದಲಾಗಿ ಜಗತ್ತಿಗಾಗಿಯೇ ಯೋಚಿಸುವ, ಹೊಸದನ್ನು ನಿರ್ಮಿಸುವ ಮತ್ತು ಜಟಿಲ ಸಮಸ್ಯೆಗಳಿಗೆ ಪರಿಹಾರ ನೀಡುವ ನಾಯಕರನ್ನು ರೂಪಿಸುತ್ತಿದೆ. ಹೀಗಾಗಿಯೇ, ನಾಳಿನ ತಂತ್ರಜ್ಞಾನವನ್ನು ನಿರ್ಮಿಸಲು ಜಾಗತಿಕ ದಿಗ್ಗಜರು ಕರ್ನಾಟಕವನ್ನೇ ತಮ್ಮ ಮನೆಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ,” ಎಂದು ಅಭಿಪ್ರಾಯಪಟ್ಟಿದ್ದಾರೆ.
























