ಮತ್ತೆ ‘ಸಿಎಂ’ ಚರ್ಚೆಗೆ ತುಪ್ಪ ಸುರಿದ ಪರಮೇಶ್ವರ್: ‘5 ವರ್ಷ ಅಂದಿದ್ವಿ!

0
20

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಯ ಕಿಡಿಯನ್ನು ಹೊತ್ತಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, “ಸಿದ್ದರಾಮಯ್ಯನವರನ್ನು ನಾವೆಲ್ಲರೂ ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಿದ್ದು ನಿಜ. ಆದರೆ, ಮಧ್ಯದಲ್ಲಿ ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಂಡರೆ, ಅದಕ್ಕೆ ನಾವೆಲ್ಲ ಬದ್ಧ,” ಎಂದು ಹೇಳುವ ಮೂಲಕ ಅಧಿಕಾರ ಹಂಚಿಕೆಯ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.

ದಲಿತ ಸಮಾವೇಶ, ದಲಿತ ಸಿಎಂ ಕೂಗು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗಿನ ಭೇಟಿಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹಲವು ರಾಜಕೀಯ ಚರ್ಚೆಗಳಿಗೆ ಹೊಸ ಆಯಾಮ ನೀಡಿದರು.

ದಲಿತ ಸಮಾವೇಶಕ್ಕೆ ಗ್ರೀನ್ ಸಿಗ್ನಲ್, ಸಿಎಂ ಕೂಗಿಗೂ ಜೈ!: ಸಚಿವ ಸತೀಶ್ ಜಾರಕಿಹೊಳಿ ದಲಿತ ಸಮಾವೇಶ ನಡೆಸುವ ಬಗ್ಗೆ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡ ಪರಮೇಶ್ವರ್, “ರಾಜ್ಯದಲ್ಲಿ ದಲಿತ ಸಮಾವೇಶ ನಡೆಸಲು ಯಾವುದೇ ಅಡ್ಡಿ ಇಲ್ಲ. ಸಮುದಾಯವನ್ನು ಒಟ್ಟಾಗಿಡಲು, ಸರ್ಕಾರದ ಯೋಜನೆಗಳನ್ನು ತಿಳಿಸಲು ಮತ್ತು ಅವರ ನಿರೀಕ್ಷೆಗಳನ್ನು ಅರಿಯಲು ಇಂತಹ ಸಮಾವೇಶಗಳು ಅಗತ್ಯ. ಹಿಂದೆ ಹೈಕಮಾಂಡ್ ಬೇರೆ ಕಾರಣಕ್ಕೆ ಬೇಡ ಎಂದಿತ್ತು, ಆದರೆ ಈಗ ನಡೆಸುವುದರಲ್ಲಿ ತಪ್ಪೇನಿಲ್ಲ,” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, “ಕರ್ನಾಟಕದಲ್ಲಿ ದಲಿತ ಸಿಎಂ ಆಗಬೇಕು ಎಂದು ಸಂಘಟನೆಗಳು ಒತ್ತಾಯ ಮಾಡುವುದರಲ್ಲಿ ತಪ್ಪಿದೆಯೇ? ಅವರ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸುತ್ತಾರೆ,” ಎಂದು ಹೇಳುವ ಮೂಲಕ ದಲಿತ ಮುಖ್ಯಮಂತ್ರಿ ಕೂಗನ್ನು ಪರೋಕ್ಷವಾಗಿ ಬೆಂಬಲಿಸಿದರು.

‘ಕಾಂಗ್ರೆಸ್ ಒಂದು ಟ್ರೈನಿಂಗ್ ಸ್ಕೂಲ್ ಇದ್ದಂತೆ’: ಸಚಿವ ಎಂ.ಬಿ. ಪಾಟೀಲ್ ‘ಪರಮೇಶ್ವರ್ ಮತ್ತು ಸತೀಶ್ ಜಾರಕಿಹೊಳಿ ಸಿಎಂ ಆಗಲು ಸಮರ್ಥರಿದ್ದಾರೆ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು, “ನಮ್ಮ ಪಕ್ಷದಲ್ಲಿ ಸಮರ್ಥರಿಗೆ ಬರವಿಲ್ಲ. ಕಾಂಗ್ರೆಸ್ ಪಕ್ಷವು ಅನೇಕ ನಾಯಕರನ್ನು ಹುಟ್ಟುಹಾಕಿದೆ. ನಮ್ಮದು ಒಂದು ರೀತಿ ‘ಟ್ರೈನಿಂಗ್ ಸ್ಕೂಲ್’ ಇದ್ದಂತೆ, ಇಲ್ಲಿ ತರಬೇತಿ ಪಡೆದು ಬೇರೆ ಪಕ್ಷಗಳಿಗೆ ಹೋಗಿ ದೊಡ್ಡವರಾಗುತ್ತಾರೆ,” ಎಂದು ವ್ಯಂಗ್ಯವಾಡಿದರು. “ನಮ್ಮಲ್ಲಿರುವ ಸಮರ್ಥರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಹೈಕಮಾಂಡ್‌ಗೆ ಬಿಟ್ಟ ವಿಚಾರ,” ಎಂದು ಹೇಳಿದರು.

ಸಿಎಂ ಬದಲಾವಣೆ ಚರ್ಚೆ: ಮುಖ್ಯಮಂತ್ರಿ ಅವಧಿಯ ಬಗ್ಗೆ ಸ್ಪಷ್ಟನೆ ನೀಡಿದರು, “ನಾವು ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯನವರನ್ನು ಆಯ್ಕೆ ಮಾಡುವಾಗ ಎರಡೂವರೆ ವರ್ಷದ ಅವಧಿ ಎಂದು ಯಾರೂ ಹೇಳಿರಲಿಲ್ಲ. ಐದು ವರ್ಷದ ಅವಧಿಗೆಂದೇ ಆಯ್ಕೆ ಮಾಡಿದ್ದೇವೆ. ಆದರೆ, ಈ ಬಗ್ಗೆ ಪದೇ ಪದೇ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಸೂಕ್ತ ಸಂದರ್ಭದಲ್ಲಿ ಹೈಕಮಾಂಡ್ ಬಳಿ ಈ ಗೊಂದಲವನ್ನು ಬಗೆಹರಿಸುವಂತೆ ನಾನೇ ಮನವಿ ಮಾಡುತ್ತೇನೆ,” ಎಂದು ತಿಳಿಸಿದರು.

ತಮ್ಮ ತಂದೆ ಸ್ಥಾಪಿಸಿದ್ದ ಕೋ-ಆಪರೇಟಿವ್ ಸೊಸೈಟಿಯನ್ನು ಬ್ಯಾಂಕ್ ಆಗಿ ಪರಿವರ್ತಿಸುವ ಸಲುವಾಗಿ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ್ದು, ಇದರಲ್ಲಿ ಯಾವುದೇ ರಾಜಕೀಯ ವಿಶೇಷತೆ ಇಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.

Previous articleRSSಗೆ ನಿರ್ಬಂಧದ ‘ಹುನ್ನಾರ’? ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ, ಕಾಂಗ್ರೆಸ್‌ಗೆ ಭಾರೀ ಹಿನ್ನಡೆ!
Next articleWPL 2026: ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು RCBಯ ‘ಪಂಚತಂತ್ರ’!

LEAVE A REPLY

Please enter your comment!
Please enter your name here