ಬೆಂಗಳೂರು: ಮಳೆ ಲೀಲಾಜಾಲ, ನಗರದಲ್ಲಿ ಹೆಚ್ಚಿದ ಅಂತರ್ಜಲ

0
80

ಬೆಂಗಳೂರು ನಗರದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಬಹುತೇಕ ಕೆರೆಗಳು ಭರ್ತಿಯಾಗಿವೆ. ಜೊತೆಗೆ ಅಂತರ್ಜಲ ಮಟ್ಟವು 0.5 ಮೀಟರ್‌ನಿಂದ 1.2 ಮೀಟರ್‌ವರೆಗೆ ಏರಿಕೆಯಾಗಿದೆ. ಕಳೆದ ಬಾರಿಗಿಂತ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಜತೆಗೆ ಏಪ್ರಿಲ್ ಮತ್ತು ಮೇನಲ್ಲಿ ಜಲಮಂಡಳಿಯು ಸುಮಾರು 21 ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು ಹರಿಸಿದೆ.

ಕೊಳವೆ ಬಾವಿಗಳಿಂದ ನಿತ್ಯ 800 ಎಂಎಲ್‌ಡಿಯಷ್ಟು ನೀರು ಪೂರೈಕೆಯಾಗುತ್ತಿತ್ತು. ಆ ಪ್ರಮಾಣವು ಶೇ.50ರಷ್ಟು ಕಡಿಮೆಯಾಗಿದೆ. ಅಲ್ಲದೆ, ವೈಯಕ್ತಿಕ ಕೊಳವೆ ಬಾವಿಗಳಿಂದ ನೀರು ಬಳಸದೆ, ಕಾವೇರಿ ನೀರು ಪಡೆಯಲು ಜಾಗೃತಿ ಮೂಡಿಸಲಾಯಿತು. ಸಂಚಾರಿ ಕಾವೇರಿ ಯೋಜನೆಯನ್ನೂ ಜಾರಿಗೊಳಿಸಲಾಯಿತು.

ನಗರದಲ್ಲಿ ಸುಮಾರು 2.50 ಲಕ್ಷ ಕಟ್ಟಡಗಳಲ್ಲಿ ಮಳೆ ನೀರಿನ ಕೊಯ್ದು ವ್ಯವಸ್ಥೆ ಅಳವಡಿಸಲಾಗಿದೆ. ಜಲಮಂಡಳಿಯಿಂದ ಶಾಲೆಗಳು, ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಉದ್ಯಾನಗಳಲ್ಲಿ ಸುಮಾರು 3000 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಈ ಎಲ್ಲದರ ಪರಿಣಾಮ, ಅಂತರ್ಜಲ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ.

“ಜಲಮಂಡಳಿ ಕೈಗೊಂಡ ನೀರು ಸಂರಕ್ಷಣಾ ಕ್ರಮಗಳಿಂದಾಗಿ ನಗರದಲ್ಲಿ ಅಂತರ್ಜಲದ ಮಟ್ಟವು ಹೆಚ್ಚಾಗಿದೆ. ಸಾರ್ವಜನಿಕರು ಕೊಳವೆಬಾವಿ ನೀರಿನ ಬಳಕೆಯನ್ನು ಕಡಿಮೆ ಮಾಡಬೇಕು. ಕಾವೇರಿ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ಡಾ.ರಾಮ್‌ಪ್ರಸಾತ್ ಮನೋಹರ್, ಜಲಮಂಡಳಿ ಅಧ್ಯಕ್ಷರು ಹೇಳಿದ್ದಾರೆ.

2024ರಿಂದ ನಡೆಸಿದ ಅಧ್ಯಯನ ವರದಿ ರಿಲೀಸ್: ಈ ವರದಿಯಲ್ಲಿ 110 ಹಳ್ಳಿಗಳನ್ನು ಒಳಗೊಂಡಂತೆ ನಗರದ 80 ವಾರ್ಡ್‌ಗಳನ್ನು ಹೆಚ್ಚು ಅಂತರ್ಜಲ ಅವಲಂಬಿತ ಹಾಗೂ ಅತಿ ಹೆಚ್ಚು ನೀರಿನ ಕೊರತೆ ಎದುರಿಸುತ್ತಿರುವ ಪ್ರದೇಶಗಳೆಂದು ಗುರುತಿಸಲಾಗಿದೆ.

ಅಲ್ಲದೆ, ನಗರದ ಕೇಂದ್ರ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಸುಮಾರು 5 ಮೀಟರ್, ಪುರಸಭೆ ವ್ಯಾಪ್ತಿಯಲ್ಲಿ 10-15 ಮೀಟರ್ ಹಾಗೂ 110 ಹಳ್ಳಿಗಳಲ್ಲಿ 20-25 ಮೀಟರ್‌ಗಳಷ್ಟು ಅಂತರ್ಜಲ ಮಟ್ಟ ಕುಸಿಯುವ ಸಾಧ್ಯತೆಗಳ ಕುರಿತು ಎಚ್ಚರಿಕೆ ನೀಡಲಾಗಿತ್ತು. ಆ ಪ್ರದೇಶಗಳಲ್ಲಿಯೇ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಿರುವುದು ಗಮನಾರ್ಹ.

ಮತ್ತಷ್ಟು ನೀರಿನ ಮಟ್ಟ ಏರಿಕೆ ಸಾಧ್ಯತೆ: ರಾಜಧಾನಿಯಲ್ಲಿ ಈಗಲೂ ಆಗಾಗ ಮಳೆಯಾಗುತ್ತಿದೆ. ಸಾಮಾನ್ಯವಾಗಿ ನವೆಂಬರ್ ಕೊನೆವರೆಗೂ ಮಳೆಯಾಗುತ್ತದೆ. ಹೀಗಾಗಿ ಅಂತರ್ಜಲ ಮಟ್ಟ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಕಳೆದ ವರ್ಷದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸುಸ್ಥಿರ ಹಾಗೂ ವೈಜ್ಞಾನಿಕ ಕ್ರಿಯಾಯೋಜನೆ ಸಿದ್ಧಪಡಿಸುವ ಉದ್ದೇಶದಿಂದ ಅಂತರ್ಜಲ ಮಟ್ಟದ ಅಧ್ಯಯನಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ), ರಾಜ್ಯ ಹಾಗೂ ಕೇಂದ್ರ ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿತ್ತು. ಈ ತಂಡವು 2024ರ ಜುಲೈನಿಂದ ಅಂತರ್ಜಲ ಮಟ್ಟದ ದತ್ತಾಂಶದ ಕುರಿತು ಅಧ್ಯಯನ ಕೈಗೊಂಡು ಜನವರಿಯಲ್ಲಿ ಜಲಮಂಡಳಿಗೆ ವರದಿ ಸಲ್ಲಿಸಿದೆ.

ಅಂತರ್ಜಲ ಮಟ್ಟದ ಏರಿಕೆಗೆ ಕಾರಣವೇನು?

  • 2.50 ಲಕ್ಷ ಕಟ್ಟಡಗಳಲ್ಲಿ ಮಳೆ ನೀರಿನ ಕೊಯ್ದು ವ್ಯವಸ್ಥೆ
  • ನಗರದ ವಿವಿಧೆಡೆ 3000 ಇಂಗು ಗುಂಡಿಗಳ ನಿರ್ಮಾಣ
  • ಕಾವೇರಿ ಯೋಜನೆ ಜಾರಿ, ಕಾವೇರಿ ನೀರು ಪಡೆಯಲು ಜಾಗೃತಿ
  • ಕೊಳವೆ ಬಾವಿಗಳಿಂದ ನೀರಿನ ಬಳಕೆಯ ಪ್ರಮಾಣ ಕಡಿಮೆ
  • ಜಲಮಂಡಳಿಯಿಂದ ಅಂತರ್ಜಲ ಹೆಚ್ಚಳಕ್ಕೆ ವಿಶೇಷ ಕಾರ್ಯಪಡೆ ರಚನೆ
Previous articleಆವಿಷ್ಕಾರದ ಹೊಸ ತಾಣ ಮಂಗಳೂರು: ನಟ ಸುನಿಲ್ ಶೆಟ್ಟಿ
Next articleRCB ಖರೀದಿಗೆ ಅನಂತ್ ಅಂಬಾನಿ ಆಸಕ್ತಿ: ಏನಂತಾರೆ ಬೆಂಗಳೂರು ಫ್ಯಾನ್ಸ್‌!

LEAVE A REPLY

Please enter your comment!
Please enter your name here