ಜೈಲಿಗೆ ಹೋಗಿ ಶಾಸಕರನ್ನು ಭೇಟಿಯಾದ ಡಿಕೆಶಿ; ‘ನಂಬರ್ ಗೇಮ್’ ಶುರುನಾ?

0
13

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ‘ನವೆಂಬರ್ ಕ್ರಾಂತಿ’ಯ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆ ತೀವ್ರ ಕುತೂಹಲ ಮೂಡಿಸಿದೆ. ಇಂದು ದಿಢೀರ್ ಬೆಳವಣಿಗೆಯೊಂದರಲ್ಲಿ ಡಿಸಿಎಂ ಡಿಕೆಶಿ ಪರಪ್ಪನ ಅಗ್ರಹಾರ ಜೈಲಿನತ್ತ ಮುಖ ಮಾಡಿದ್ದಾರೆ.

ಇದು ಕೇವಲ ಸೌಹಾರ್ದಯುತ ಭೇಟಿಯೇ ಅಥವಾ ಇದರ ಹಿಂದೆ ಯಾವುದಾದರೂ ರಾಜಕೀಯ ಲೆಕ್ಕಾಚಾರವಿದೆಯೇ ಎಂಬ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.

ಜೈಲಿನಲ್ಲಿರುವ ಆಪ್ತರ ಭೇಟಿ: ಡಿಕೆಶಿ ಪರಪ್ಪನ ಅಗ್ರಹಾರಕ್ಕೆ ತೆರಳಿರುವುದು ತಮ್ಮದೇ ಪಕ್ಷದ ಇಬ್ಬರು ಪ್ರಭಾವಿ ಶಾಸಕರನ್ನು ಭೇಟಿಯಾಗಲು. ಕೊಲೆ ಪ್ರಕರಣದ ಆರೋಪದಡಿ ಜೈಲಿನಲ್ಲಿರುವ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಯಾಗಿರುವ ಚಿತ್ರದುರ್ಗದ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಡಿಕೆಶಿ ಭೇಟಿಯಾಗಲಿದ್ದಾರೆ. ಸಾಮಾನ್ಯ ಸಂದರ್ಭವಾಗಿದ್ದರೆ ಇದನ್ನು ಸೌಜನ್ಯದ ಭೇಟಿ ಎನ್ನಬಹುದಿತ್ತು. ಆದರೆ, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.

‘ನವೆಂಬರ್ ಕ್ರಾಂತಿ’ ಮತ್ತು ಬಲಾಬಲ ಪ್ರದರ್ಶನ: ಕಳೆದ ಕೆಲವು ದಿನಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಎರಡು ಬಣಗಳ ಚಟುವಟಿಕೆ ಬಿರುಸುಗೊಂಡಿದೆ. ಸಿದ್ದರಾಮಯ್ಯ ಬಣದ ಶಾಸಕರು ಬೆಂಗಳೂರಿನಲ್ಲಿ ರಹಸ್ಯ ಡಿನ್ನರ್ ಮೀಟಿಂಗ್ ನಡೆಸಿದ್ದರೆ, ಡಿಕೆಶಿ ಆಪ್ತ ಶಾಸಕರ ಗುಂಪು ದೆಹಲಿಗೆ ಹಾರಿದೆ.

ಈ ನಡುವೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು, “ನಾನೇ ಪೂರ್ಣಾವಧಿ ಸಿಎಂ, ಮುಂದಿನ ಎರಡು ಬಜೆಟ್ ನಾನೇ ಮಂಡಿಸುತ್ತೇನೆ,” ಎಂದು ಹೇಳುವ ಮೂಲಕ ಅಧಿಕಾರ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.

ಆದರೆ, ತೆರೆಮರೆಯಲ್ಲಿ ‘ನಂಬರ್ ಗೇಮ್’ ಅಥವಾ ಶಾಸಕರ ಬಲಾಬಲದ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ. ಒಂದು ವೇಳೆ ಹೈಕಮಾಂಡ್ ಮಟ್ಟದಲ್ಲಿ ಅಧಿಕಾರ ಹಂಚಿಕೆಯ ಪ್ರಸ್ತಾಪ ಬಂದರೆ, ಯಾರ ಪರ ಎಷ್ಟು ಶಾಸಕರಿದ್ದಾರೆ ಎಂಬುದು ನಿರ್ಣಾಯಕವಾಗುತ್ತದೆ. ಈ ಸಂದರ್ಭದಲ್ಲಿ ಜೈಲಿನಲ್ಲಿರುವ ಇಬ್ಬರು ಶಾಸಕರ ಬೆಂಬಲವೂ ಅತ್ಯಮೂಲ್ಯ.

ಹೀಗಾಗಿ, ವಿನಯ್ ಕುಲಕರ್ಣಿ ಮತ್ತು ವೀರೇಂದ್ರ ಪಪ್ಪಿ ಅಭಿಪ್ರಾಯ ಸಂಗ್ರಹಿಸಲು ಅಥವಾ ಅವರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳಲು ಡಿಕೆಶಿ ಈ ದಿಢೀರ್ ಭೇಟಿ ನೀಡಿರಬಹುದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ‘ನವೆಂಬರ್ ಕ್ರಾಂತಿ’ ಎಂಬುದು ಕೇವಲ ಊಹಾಪೋಹವೋ ಅಥವಾ ನಿಜವಾಗಿಯೂ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದೆಯೋ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

Previous articleತಂಬುಳಿ `ಸಾಗರ’ವನ್ನೇ ಉಣಬಡಿಸುತ್ತಿರುವ ತ್ರಿಮೂರ್ತಿಗಳು
Next articleMovie Review: ಕರ್ಣನ ಮತ್ತೊಂದು ಅವತಾರ ರಾಧೇಯ

LEAVE A REPLY

Please enter your comment!
Please enter your name here