Home ನಮ್ಮ ಜಿಲ್ಲೆ ಬೆಂಗಳೂರು ಧರ್ಮಸ್ಥಳ ಕೇಸ್‌: ಬೆಂಗಳೂರಲ್ಲಿ ಎಸ್‌ಐಟಿ ತನಿಖೆ, ಷಡ್ಯಂತ್ರ ರೂಪಿಸಿದ್ದು ಬಯಲು

ಧರ್ಮಸ್ಥಳ ಕೇಸ್‌: ಬೆಂಗಳೂರಲ್ಲಿ ಎಸ್‌ಐಟಿ ತನಿಖೆ, ಷಡ್ಯಂತ್ರ ರೂಪಿಸಿದ್ದು ಬಯಲು

0

ಧರ್ಮಸ್ಥಳ ಕೇಸ್ ತನಿಖೆ ನಡೆಸುತ್ತಿರುವ ಎಸ್‌ಐಟಿ ಬೆಂಗಳೂರು ನಗರಕ್ಕೆ ಆಗಮಿಸಿದೆ. ಆರೋಪಿ ಚಿನ್ನಯ್ಯ ತಂಗಿದ್ದ ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಎಸ್‌ಐಟಿ ತಂಡ ಮಹಜರು ಮಾಡಿದೆ. ಚಿನ್ನಯ್ಯನನ್ನು ಕೋರ್ಟ್ 10 ದಿನಗಳ ಕಾಲ ಎಸ್‌ಐಟಿ ವಶಕ್ಕೆ ಒಪ್ಪಿಸಿತ್ತು.

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲು ಬೆಂಗಳೂರಿನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಐವರು ಸೇರಿ ಸಂಚು ರೂಪಿಸಿದ್ದರು ಎಂಬ ಅಂಶ ಎಸ್‌ಐಟಿಗೆ ಸಿಕ್ಕಿದೆ. ಎಸ್‌ಐಟಿ ತಂಡ ಶನಿವಾರ ಪೀಣ್ಯ ಬಳಿಯ ಮಲ್ಲಸಂದ್ರದಲ್ಲಿ ದೂರುದಾರ ಜಯಂತ್ ಮನೆಯಲ್ಲಿ ಚಿನ್ನಯ್ಯನ ಸಮ್ಮುಖದಲ್ಲೇ ಮಹಜರು ನಡೆಸಿತ್ತು.

ಇನ್ನು ಚಿನ್ನಯ್ಯ ಎಲ್ಲಿ ತಂಗಿದ್ದ? ಎಂಬುದರ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದರು. ಆದರೆ ವಿದ್ಯಾರಣ್ಯಪುರದಲ್ಲಿನ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಚಿನ್ನಯ್ಯ ನಾಲ್ಕೈದು ತಿಂಗಳು ತಂಗಿದ್ದ ಎಂದು ಶನಿವಾರ ಜಯಂತ್ ಹೇಳಿಕೆ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಅಪಾರ್ಟ್‌ಮೆಂಟ್‌ನ ಮಹಜರು ನಡೆಸಿದ್ದಾರೆ. ಇದೇ ಅಪಾರ್ಟ್‌ಮೆಂಟ್‌ನಲ್ಲಿ ಸಭೆ ನಡೆಸಿ ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ನಡೆದಿತ್ತಾ? ಎನ್ನುವುದರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಅಪಾರ್ಟ್‌ಮೆಂಟ್‌ನಲ್ಲಿ ಐವರ ತಂಡ ಷಡ್ಯಂತ್ರ ರೂಪಿಸಿರುವ ಮಾಹಿತಿ ಎಸ್‌ಐಟಿ ತನಿಖೆಯಲ್ಲಿ ಬಯಲಾಗಿದೆ. ಸದ್ಯ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ಇಂಚಿಂಚೂ ಶೋಧ ಮಾಡಲಾಗಿದ್ದು ಯಾರ ಹೆಸರಲ್ಲಿ ಯಾವಾಗ ರೂಂ ಬುಕಿಂಗ್ ಆಗುತ್ತಿತ್ತು. ಎಷ್ಟು ಜನ ರೂಂಗೆ ಬರುತ್ತಿದ್ದರು. ಎಷ್ಟು ಬಾರಿ ಬುಕ್ ಆಗಿದೆ ಎಂಬ ಆಯಾಮದಲ್ಲಿ ತನಿಖೆ ನಡೆಸಲಾಗಿದೆ.

ಲೆಡ್ಜರ್‌ ಬುಕ್, ಅಪಾರ್ಟ್‌ಮೆಂಟ್‌ನ ಸಿಸಿಟಿವಿಯನ್ನೂ ಪರಿಶೀಲನೆ ಮಾಡಲಾಗಿದ್ದು, ಎಲ್ಲಾ ಪ್ರಕ್ರಿಯೆ, ಹೇಳಿಕೆಗಳು ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿದೆ. ವಿಶೇಷ ಎಂದರೆ, ಸರ್ವೀಸ್ ಅಪಾರ್ಟ್‌ಮೆಂಟ್‌ನಿಂದ ಅಲ್ಪ ದೂರದಲ್ಲೇ ಗಿರೀಶ್ ಮಟ್ಟಣ್ಣನವರ್ ಅಪಾರ್ಟ್‌ಮೆಂಟ್‌ ಇರುವುದು ಗೊತ್ತಾಗಿದೆ. ಕೇವಲ ಒಂದೂವರೆ ಕಿ.ಮೀ ದೂರ ಇರುವುದು ಗೊತ್ತಾಗಿದೆ. ಇದರಿಂದ ಯೋಜನೆ ರೂಪಿಸಲು ಅವಕಾಶವಾಗಿದೆ ಎನ್ನಲಾಗಿದೆ.

ಬುರುಡೆ ಕಥೆ ಕಟ್ಟಿದ ಮೇಲೆ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದಕ್ಕಾಗಿ ಬುರುಡೆ ಸಮೇತವೇ ಸುಪ್ರೀಂಕೋರ್ಟ್ ಕದವನ್ನು ತಂಡ ತಟ್ಟಿತ್ತು. ಬುರುಡೆ ಬಗ್ಗೆ ದೆಹಲಿಯ ವಕೀಲರನ್ನೂ ತಂಡ ನಂಬಿಸಿತ್ತು. ಬ್ಯಾಗ್‌ನಲ್ಲಿ ಬುರುಡೆ ಇಟ್ಟುಕೊಂಡು ಸುಪ್ರೀಂಗೆ ತೆರಳಿದ್ದರು. ಇದಕ್ಕೆ ಸಾಕ್ಷಿಯಾಗಿ ದೂರುದಾರ ಜಯಂತ್. ಟಿ ಫೋಟೋವೊಂದನ್ನು ಬಿಡುಗಡೆ ಮಾಡಿದ್ದರು.

ರೈಲಿನಲ್ಲಿ ಚಿನ್ನಯ್ಯ ಪಯಣ: ವಿಮಾನದಲ್ಲಿ ಪ್ರಯಾಣಿಸಿದರೆ ತಪಾಸಣೆ ಬಿಗಿಯಾಗಿದ್ದು, ಬುರುಡೆ ಸಾಗಿಸಲು ಅವಕಾಶವಿರುವುದಿಲ್ಲ ಎಂಬ ಕಾರಣಕ್ಕೆ ಜಯಂತ್ ಹಾಗೂ ಚಿನ್ನಯ್ಯ ರೈಲಿನಲ್ಲಿ ಪ್ರಯಾಣಿಸಿದ್ದಾರೆಂದು ತಿಳಿದುಬಂದಿದೆ. ದೆಹಲಿಯಲ್ಲಿ ಚರ್ಚೆ ನಡೆದ ಬಳಿಕ ಎಸ್‌ಐಟಿ ರಚಿಸಲು ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಲಾಗಿತ್ತು. ಅದಕ್ಕನುಗುಣವಾಗಿ ಕೆಲವು ಸನ್ನಿವೇಶಗಳನ್ನು ಸೃಷ್ಟಿಸಲಾಯಿತು ಎಂದು ತಿಳಿದು ಬಂದಿದೆ.

ಷಡ್ಯಂತ್ರ ರೂಪಿಸಿದ್ದು ಇಲ್ಲೇ. ಬುರುಡೆ ತಂಡದ ಬುರುಡೆ ಪುರಾಣ ಗೊತ್ತಾದ ಮೇಲೆ, ಷಡ್ಯಂತ್ರ ರೂಪಿಸಿದ್ದು ಯಾರು ಎಂಬುದೂ ಎಸ್‌ಐಟಿ ತನಿಖೆಯಲ್ಲಿ ಬಯಲಾಗಿದೆ. ಹಿಂದೂ ಮುಖಂಡ ಮಹೇಶ್‌ ಶೆಟ್ಟಿ ತಿಮರೋಡಿ, ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್, ಟಿ.ಜಯಂತ್, ಸುಜಾತ ಭಟ್, ಚಿನ್ನಯ್ಯ ಸೇರಿ ಐವರು ಸಂಚು ರೂಪಿಸಿರುವುದು ಗೊತ್ತಾಗಿದೆ.

ನನ್ನ ಪತಿ ತಪ್ಪು ಮಾಡಿಲ್ಲ, ಜಯಂತ್ ಪತ್ನಿ ಅಳಲು: ತಮ್ಮ ಪತಿ ಯಾವುದೇ ತಪ್ಪು ಮಾಡಿಲ್ಲ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಎಸ್‌ಐಟಿ ಅಧಿಕಾರಿಗಳು ನಮ್ಮ ಕುಟುಂಬದ ಎಲ್ಲರನ್ನೂ ವಿಚಾರಣೆ ನಡೆಸಿದ್ದಾರೆ. ಆದರೆ ಯಾವುದೇ ವಸ್ತುಗಳನ್ನು ಜಪ್ತಿ ಮಾಡಿಲ್ಲ ಎಂದು ಜಯಂತ್ ಟಿ. ಅವರ ಪತ್ನಿ ಶೈಮಾ ತಿಳಿಸಿದ್ದು, ಧರ್ಮಸ್ಥಳದ ಪ್ರಕರಣದಲ್ಲಿ ಬಂಧಿತನಾಗಿರುವ ಚಿನ್ನಯ್ಯ ನಮ್ಮ ಮನೆಗೆ ಮೂರ್ನಾಲ್ಕು ತಿಂಗಳ ಹಿಂದೆ ಎರಡು ಬಾರಿ ಬಂದಿದ್ದ. ಜಯಂತ್ ಟಿ. ಅವರ ಜೊತೆ ಸುತ್ತಾಡುತ್ತಿದ್ದ. ನಮ್ಮ ಮನೆಗೆ ಬಂದಾಗ ನಾನು ಊಟ ಹಾಕಿದ್ದೇನೆ ಎಂದು ಹೇಳಿದ್ದಾರೆ.

ನಾನು 2003ರಲ್ಲಿ ಜಯಂತ್ ಅವರನ್ನು ಮದುವೆಯಾಗಿದ್ದೇನೆ. ಅಂದಿನಿಂದಲೂ ಮಲ್ಲಸಂದ್ರದಲ್ಲೇ ವಾಸವಿದ್ದೇವೆ. ನಾನು ಸ್ಟಾಫ್ ನರ್ಸ್ ಆಗಿದ್ದು, ಜಯಂತ್ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ವೃತ್ತಿ ಮಾಡುತ್ತಾರೆ. ನಮಗೆ ಬೇರೆ ಯಾವುದೇ ವ್ಯಾಪಾರ ವಹಿವಾಟುಗಳು ಇಲ್ಲ. ಯಾವ ಮೂಲದಿಂದಲೂ ಹಣ ಬರುವುದಿಲ್ಲ. ಜಯಂತ್‌ ತಾವು ದುಡಿದ ಹಣದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಗಾಂಜಾ ಮಾರಾಟ ಸೇರಿದಂತೆ ನಮ್ಮ ವಿರುದ್ಧ ಯಾವ ಆರೋಪಗಳು ಇಲ್ಲ ಎಂದು ತಿಳಿಸಿದ್ದಾರೆ.

ಚಿನ್ನಯ್ಯನ ಫೋಟೋವನ್ನು ಟಿವಿಯಲ್ಲಿ ನೋಡಿದ ಬಳಿಕ ಆತ ನಮ್ಮ ಮನೆಗೆ ಬಂದಿದ್ದು ಅರಿವಾಯಿತು. ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ನಮ್ಮ ಮಕ್ಕಳಿಗೂ ಜಯಂತ್ ಹೋರಾಟದ ಬಗ್ಗೆ ಅಪನಂಬಿಕೆಯಿಲ್ಲ. ನಮ್ಮ ಹೋರಾಟ ಧರ್ಮಸ್ಥಳದ ವಿರುದ್ಧ ಅಲ್ಲ. ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ನಮ್ಮ ಕೈಬಿಡುವುದಿಲ್ಲ ಎಂದು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version