ಬೆಂಗಳೂರು: ಹೆಸರಾಂತ ಯುವತಿಯರ ವಿರುದ್ಧ ಅಶ್ಲೀಲ ಹಾಡು ರಚಿಸಿ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದ ಒಬ್ಬ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ. ರಕ್ಷಿತಾ ಶೆಟ್ಟಿ, ನಿವೇದಿತಾ ಗೌಡ, ಸೋನು ಗೌಡ ಸೇರಿದಂತೆ ಹಲವಾರು ಮಹಿಳೆಯರ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿ, ಅವುಗಳಿಗೆ ಅನುಚಿತ ಮತ್ತು ಅಸಭ್ಯ ಸಾಹಿತ್ಯ ಜೋಡಿಸಿ ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹರಿಬಿಡುತ್ತಿದ್ದಾನೆ ಎಂಬ ಆರೋಪ ಇದೆ.
ಈ ವಿಷಯ ಗಮನಕ್ಕೆ ಬಂದ ತಕ್ಷಣ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿ, ಪ್ರಕರಣವನ್ನು ಸೈಬರ್ ಕ್ರೈಂ ವಿಭಾಗಕ್ಕೆ ವರ್ಗಾವಣೆ ಮಾಡಿದೆ. ಆರೋಪಿಯ ಸಾಮಾಜಿಕ ಜಾಲತಾಣ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದು ಮತ್ತು ಇಂತಹ ವಿಷಯಗಳನ್ನು ಮುಂದಿನ ದಿನಗಳಲ್ಲಿ ಅಪ್ಲೋಡ್ ಮಾಡದಂತೆ ಕ್ರಮ ಕೈಗೊಳ್ಳುವಂತೆ ಆಯೋಗ ಅಧಿಕಾರಿಗಳಿಗೆ ಸೂಚಿಸಿದೆ.
ಮಹಿಳಾ ಆಯೋಗದ ಪ್ರಕಾರ, jewinsonlewis ಎಂಬ ಖಾತೆಯಿಂದ ಮುಂದುವರಿದಂತೆ ಅಸಭ್ಯ ವೀಡಿಯೋಗಳು ಹಾಗೂ ಸಂದೇಶಗಳನ್ನು ಹಾಕಲಾಗುತ್ತಿತ್ತು. ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಈ ರೀತಿಯ ಪೋಸ್ಟ್‌ಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಸಮಾಜದಲ್ಲಿ ಮಹಿಳೆಯರ ಸುರಕ್ಷತೆ, ಗೌರವ ಮತ್ತು ಮಾನವನ್ನು ಕಾಪಾಡುವುದು ಆಯೋಗದ ಆದ್ಯತೆ ಎಂಬುದನ್ನೂ ಮತ್ತೆ ಸ್ಪಷ್ಟಪಡಿಸಿದೆ.
ನೇಟ್ಟಿಗರು ಈ ಖಾತೆ ಬಗ್ಗೆ ದೊಡ್ಡ ಪ್ರಮಾಣದಲ್ಲಿ ದೂರು ನೀಡುತ್ತಿದ್ದಂತೆ, ವಿಷಯ ಇನ್ನಷ್ಟು ಗಂಭೀರಗೊಂಡಿತ್ತು. ಲಕ್ಷಾಂತರ ಜನರು ನೋಡುತ್ತಿದ್ದ ಈ ವೀಡಿಯೊಗಳು ಮಹಿಳೆಯರ ಮೇಲೆ ತಪ್ಪು ಸಂದೇಶ ನೀಡುತ್ತಿವೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಸೈಬರ್ ತಂಡ ಈಗ ಆರೋಪಿಯ ಖಾತೆಯ ಮೂಲ, ವಿಡಿಯೋ ಸಂಪಾದನೆ, ಅಶ್ಲೀಲ ಸಾಹಿತ್ಯ ರಚನೆಯ ಉದ್ದೇಶ ಸೇರಿದಂತೆ ಹಲವು ಅಂಶಗಳನ್ನು ತನಿಖೆ ನಡೆಸುತ್ತಿದೆ. ಇಂತಹ ಕೃತ್ಯಗಳು ಕೇವಲ ಕಾನೂನುಬಾಹಿರವಷ್ಟೇ ಅಲ್ಲ, ಸಮಾಜದ ನೈತಿಕ ಮೌಲ್ಯಗಳಿಗೂ ಧಕ್ಕೆಯುಂಟುಮಾಡುತ್ತವೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮಹಿಳೆಯರ ವಿರುದ್ಧ ಯಾವುದೇ ರೀತಿಯ ಆನ್‌ಲೈನ್ ಕಿರುಕುಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಮಹಿಳಾ ಆಯೋಗ ತಿಳಿಸಿದೆ. “ಸೋಶಿಯಲ್ ಮೀಡಿಯಾ ಸ್ವಾತಂತ್ರ್ಯವನ್ನು ಯಾರೂ ದುರುಪಯೋಗ ಮಾಡಬಾರದು” ಎಂಬ ಸಂದೇಶವನ್ನು ಈ ಪ್ರಕರಣ ಮತ್ತೊಮ್ಮೆ ನೆನಪಿಸುತ್ತದೆ.

























