ಬೆಂಗಳೂರು: “ಅಪರಾಧ ಜಗತ್ತಿಗೆ ಕರ್ನಾಟಕ ಪೊಲೀಸರೆಂದರೆ ಇದ್ದ ಭಯವೇ ಹೊರಟುಹೋಗಿದೆ. ಹೀಗೇಕಾಯಿತು ಎಂದು ಪ್ರತಿಯೊಬ್ಬರೂ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕು,” ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಇಲಾಖೆಗೆ ನೀಡಿದ ಖಡಕ್ ಎಚ್ಚರಿಕೆ. ಒಂದೆಡೆ ಇಲಾಖೆಯ ಕಾರ್ಯವನ್ನು ಶ್ಲಾಘಿಸುತ್ತಲೇ, ಮತ್ತೊಂದೆಡೆ ತಪ್ಪುಗಳನ್ನು ಎತ್ತಿ ತೋರಿಸಿ, ಕಾರ್ಯವೈಖರಿ ಬದಲಿಸಿಕೊಳ್ಳುವಂತೆ ಕಟುವಾದ ಸಂದೇಶ ರವಾನಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಪೊಲೀಸ್ ಸಿಬ್ಬಂದಿಗೆ ನೂತನ ‘ಪೀಕ್ ಕ್ಯಾಪ್’ ವಿತರಣೆ, ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಹಾಗೂ ‘ಸನ್ಮಿತ್ರ’ ಕಾರ್ಯಯೋಜನೆ ಕೈಪಿಡಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ಇಲಾಖೆಯ ಬಗ್ಗೆ ತಮಗಿರುವ ನಿರೀಕ್ಷೆಗಳನ್ನು ನೇರವಾಗಿ ಮುಂದಿಟ್ಟರು.
“ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ, ನಿಮ್ಮದೂ ಆಗಲಿ”: ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡುವುದು ನನ್ನ ಗುರಿ, ಅದು ಇಡೀ ಪೊಲೀಸ್ ಇಲಾಖೆಯ ಗುರಿಯೂ ಆಗಬೇಕು. ನಮ್ಮ ಯುವಶಕ್ತಿ ಮಾದಕ ವಸ್ತುಗಳ ವ್ಯಸನದಿಂದ ನಾಶವಾಗಲು ಬಿಡಬಾರದು. ಡ್ರಗ್ಸ್ ಎಲ್ಲಿಂದ ಬರುತ್ತದೆ, ಯಾರು ಮಾರುತ್ತಾರೆ, ಇದರ ಹಿಂದಿರುವ ಜಾಲ ಯಾವುದು ಎಂಬುದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ.
ರೌಡಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕುವ ಶಕ್ತಿ ನಿಮಗಿದೆ. ಆದರೂ ಕೆಲವರು ರಿಯಲ್ ಎಸ್ಟೇಟ್ ಮತ್ತು ಡ್ರಗ್ಸ್ ಮಾಫಿಯಾಗಳ ಜೊತೆ ಶಾಮೀಲಾಗಿರುವುದು ದುರದೃಷ್ಟಕರ. ಇದನ್ನು ಮೊದಲು ನಿಲ್ಲಿಸಿ, ರಾಜ್ಯವನ್ನು ಡ್ರಗ್ಸ್ ಮುಕ್ತವಾಗಿಸಿ ತೋರಿಸಿ. ಆಗ ಇಡೀ ಕರ್ನಾಟಕ ನಿಮಗೆ ಕೃತಜ್ಞತೆ ಸಲ್ಲಿಸುತ್ತದೆ, ಎಂದು ಸಿಎಂ ಗುಡುಗಿದರು.
ದಕ್ಷಿಣ ಕನ್ನಡದ ಉದಾಹರಣೆ ನೀಡಿದ ಸಿಎಂ: ತಮ್ಮ ಮಾತಿಗೆ ಪುಷ್ಟಿ ನೀಡಲು ದಕ್ಷಿಣ ಕನ್ನಡ ಜಿಲ್ಲೆಯ ಉದಾಹರಣೆ ನೀಡಿದ ಸಿದ್ದರಾಮಯ್ಯ, ಹಿಂದೆ ಆ ಜಿಲ್ಲೆಯಲ್ಲಿ ಕೋಮುಗಲಭೆ, ಅನೈತಿಕ ಪೊಲೀಸ್‌ಗಿರಿ ಮಿತಿಮೀರಿತ್ತು. ಹಿಂದಿನ ಅಧಿಕಾರಿಗಳು ಅದನ್ನು ನಿಯಂತ್ರಿಸಲಿಲ್ಲ. ನಾವು ಕೇವಲ ಇಬ್ಬರು ಅಧಿಕಾರಿಗಳನ್ನು ಬದಲಾಯಿಸಿದೆವು, ಈಗ ಇಡೀ ಜಿಲ್ಲೆ ಶಾಂತವಾಗಿದೆ. ಈ ಸಾಧನೆ ಮಾಡಿದ್ದು ಬೇರೆ ಗ್ರಹದಿಂದ ಬಂದವರಲ್ಲ, ನಿಮ್ಮದೇ ಇಲಾಖೆಯ ಅಧಿಕಾರಿಗಳು. ನೀವು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು, ಆ ಛಲ ಬೇಕಷ್ಟೇ, ಎಂದರು.
“ಕ್ಯಾಪ್ ಜೊತೆಗೆ ಕಾರ್ಯಕ್ಷಮತೆಯೂ ಬದಲಾಗಲಿ”: ಸುಮಾರು 70 ವರ್ಷಗಳ ನಂತರ ಪೊಲೀಸ್ ಇಲಾಖೆಯ ಕ್ಯಾಪ್ ವಿನ್ಯಾಸವನ್ನು ಬದಲಾಯಿಸಿರುವುದನ್ನು ಉಲ್ಲೇಖಿಸಿದ ಅವರು, ಈ ಹೊಸ ಪೀಕ್ ಕ್ಯಾಪ್ ಅನ್ನು ನಾನೇ ಖುದ್ದಾಗಿ ಆಯ್ಕೆ ಮಾಡಿದ್ದೇನೆ. ಅಧಿಕಾರಿ ಮತ್ತು ಸಿಬ್ಬಂದಿಗೆ ಒಂದೇ ಮಾದರಿಯ ಕ್ಯಾಪ್ ನೀಡಿರುವುದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿ.
ಆದರೆ ಕೇವಲ ಕ್ಯಾಪ್ ಬದಲಾದರೆ ಸಾಲದು, ನಿಮ್ಮ ಕಾರ್ಯಕ್ಷಮತೆಯೂ ಬದಲಾಗಬೇಕು. ಇಂಡಿಯಾ ಜಸ್ಟೀಸ್ ವರದಿಯಲ್ಲಿ ನಮ್ಮ ಪೊಲೀಸರು ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಈ ಘನತೆಯನ್ನು ನಿಜ ಜೀವನದಲ್ಲೂ ಕಾಪಾಡಿಕೊಳ್ಳಿ. ನಿಮ್ಮ ದಕ್ಷತೆಯಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ, ಎಂದು ಕಿವಿಮಾತು ಹೇಳಿದರು.























